My photo
ಕರಾವಳಿ ಹುಡುಗಿ :)

Saturday, February 28, 2009

ಬಸಳೆ ಸೊಪ್ಪಿನ ತಂಬುಳಿ [Basale (Indian Spinach) Soppina Thambuli]


ತಂಬುಳಿಯನ್ನು ಹೆಚ್ಚಾಗಿ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಮಾಡುತ್ತಾರೆ. ಬಾಳೆಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ, ಪಲ್ಯಗಳು ಹಾಗು ಅನ್ನ ಎಲ್ಲ ಬಡಿಸಿದ ನಂತರ, ತುಪ್ಪ ಸಾರು ಬಡಿಸುವುದರ ಮೊದಲು ತಂಬುಳಿಯನ್ನು ಅನ್ನಕ್ಕೆ ಬಡಿಸುತ್ತಾರೆ. ಇದು ತುಂಬ ಜೀರ್ಣಕಾರಿ.

ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು - 10
ಜೀರಿಗೆ - ½ ಚಮಚ
ಶುಂಠಿ - 1 ಸೆ. ಮಿ. ತುಂಡು
ಮೊಸರು / ಮಜ್ಜಿಗೆ - ½ ಕಪ್
ತೆಂಗಿನ ತುರಿ - ½ ಕಪ್
ಹಸಿ ಮೆಣಸು - 1 ರಿಂದ 2
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಕರಿಬೇವು.
ಮಾಡುವ ವಿಧಾನ
ಬಸಳೆ ಸೊಪ್ಪನ್ನು ತೊಳೆದು, ಚೆನ್ನಾಗಿ ಒರೆಸಿ, ನಂತರ ಸಣ್ಣ ಸಣ್ಣ ತುಂಡು ಗಳನ್ನಾಗಿ ಮಾಡಬೇಕು. ಸ್ವಲ್ಪ (1 ಚಮಚ) ಎಣ್ಣೆ ಹಾಕಿ ಬಸಳೆಸೊಪ್ಪನ್ನು 5 ನಿಮಿಷ ಚನ್ನಾಗಿ ಹುರಿಯಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ರುಬ್ಬಬೇಕು. ಮಜ್ಜಿಗೆ ಉಪಯೋಗಿಸಿದರೆ ಕೊನೆಯಲ್ಲಿ ಸೇರಿಸಿದರೆ ಸಾಕು.
ಇದನ್ನು ನಂತರ ಪಾತ್ರೆಗೆ ಹಾಕಿ, ಉಪ್ಪು ಸೇರಿಸಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ಇದು ಚಟ್ನಿಗಿಂತ ಸ್ವಲ್ಪ ತೆಳ್ಳಗಿರಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ, ತಂಬುಳಿ ಸಿದ್ದ.

Friday, February 27, 2009

ಮಂಗಳೂರು ಬನ್ಸ್ (Mangalore Buns)

ಬೇಕಾಗುವ ಸಾಮಗ್ರಿಗಳು
ಬಾಳೆಹಣ್ಣು - 1
ಮೈದಾ ಹುಡಿ - 1.5 ಕಪ್
ಮೊಸರು - ½ ಕಪ್
ಸೋಡಾ ಪುಡಿ - ½ ಚಮಚ
ಜೀರಿಗೆ - ½ ಚಮಚ
ಸಕ್ಕರೆ - 4-5 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು.
ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು, ಪೂರಿಯ ರೀತಿಯಲ್ಲಿ (೧ ರಿಂದ ೧.೫ ಇಂಚು ದಪ್ಪಕ್ಕೆ) ಲಟ್ಟಿಸಬೇಕು. ಇದನ್ನು ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಹಿಟ್ಟು ಅಥವಾ ಕೈಗೆ ಸ್ವಲ್ಪಎಣ್ಣೆ ಹಾಕಿಕೊಂಡರೆ ಒಳ್ಳೆಯದು.
ನಂತರ ಇದನ್ನು ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಕೆಂಬಣ್ಣ ಬರುವ ವರೆಗೆ ಕರಿಯಬೇಕು.
ಇದನ್ನು ಚಟ್ನಿ, ಸಾಂಬಾರ್ ಜೊತೆಗೆ ಅಥವಾ ಹಾಗೆಯೇ ತಿನ್ನಬಹುದು.

Thursday, February 5, 2009

ಸೆವೆನ್ ಕಪ್ ಸ್ವೀಟ್ (Seven Cup Sweet)

ಇದು ಒಂದು ಸಿಂಪಲ್ ಆದರೆ ರುಚಿಯಾದ ಸ್ವೀಟ್.

ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು - 1 ಕಪ್
ಹಾಲು - 1 ಕಪ್
ಕಾಯಿ ತುರಿ - 1 ಕಪ್
ತುಪ್ಪ - 1 ಕಪ್
ಸಕ್ಕರೆ - 3 ಕಪ್
ಇದರಲ್ಲಿ 7 ಕಪ್ ಸಾಮಗ್ರಿಗಳು ಸೇರಿರುವ ಕಾರಣ ಬಹುಶ: ಈ ಹೆಸರು ಬಂದಿರಬಹುದು. ಆದರೆ, 3 ಕಪ್ ಸ್ವೀಟ್ ಹಾಕಿದರೆ ತುಂಬ ಸಿಹಿ ಆಗುವುದರಿಂದ 2-21/4 ಕಪ್ ಸಕ್ಕರೆ ಹಾಕಿದರೆ ಸಾಕಾಗುತ್ತದೆ.
ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ, ಹದ ಹುರಿಯಲ್ಲಿ 25-30 ನಿಮಿಷ (ತಳ ಬಿಟ್ಟುಕೊಂಡು ಬರುವ ತನಕ) ಕಾಯಿಸಿಕೊಂಡು, ಕೊನೆಯಲಿ ತುಪ್ಪ ಸವರಿದ ಬಟ್ಟಲಿಗೆ ಹಾಕಬೇಕು. ಸ್ವಲ್ಪ ಬಿಸಿ ಆರಿದ ಮೇಲೆ, ಬೇಕಾದ ಆಕಾರಕ್ಕೆ ತುಂಡು ಮಾಡಿಟ್ಟುಕೊಳ್ಳಬೇಕು.

Sunday, February 1, 2009

ಗೋಳಿ ಬಜೆ / ಮಂಗಳೂರು ಬಜ್ಜಿ (Golibaje / Mangalore Bajji)

ನೀವು ಮಂಗಳೂರಿನ ಯಾವುದೇ ಹೋಟೆಲ್ ಗೆ ಹೋಗಿ ತಿಂಡಿ ಏನಿದೆ..? ಎಂದು ಕೇಳಿದರೆ, ಹೀಗೆ ಶುರುವಾಗುತ್ತದೆ..ಗೋಳಿಬಜೆ, ನೀರುಳ್ಳಿ ಬಜೆ, ಮಂಗಳೂರು ಬನ್ಸ್, ಸೆಟ್ ದೋಸೆ, ಮಸಾಲೆ ದೋಸೆ...... ಮಂಗಳೂರಿನಲ್ಲಿ ಗೋಳಿ ಬಜೆ ಮತ್ತು ಬಿಸಿ ಬಿಸಿ ಕಾಫಿ/ಚಾ ಬಲು ಪ್ರಸಿದ್ದ. ಅದೇ ಬೆಂಗಳೂರು/ಮೈಸೂರಿನ ಹೋಟೆಲಿಗೆ ಹೋದರೆ, ಇದೇ ಗೋಳಿಬಜೆಗೆ ಮಂಗಳೂರು ಬಜ್ಜಿ ಎನ್ನುತ್ತಾರೆ.

ಗೋಳಿ ಬಜೆ ಮಾಡಲು ಬೇಕಾಗುವ ಸಾಮಗ್ರಿಗಳು
ಮೈದಾ ಹುಡಿ - 1 ಕಪ್
ಮೊಸರು/ ದಪ್ಪ ಮಜ್ಜಿಗೆ - 1/2 ಕಪ್
ಶುಂಠಿ - 1 ಚಮಚ (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದಿದ್ದು)
ಹಸಿ ಮೆಣಸು - 1 ಚಮಚ (ಸಣ್ಣಗೆ ಹೆಚ್ಚಿ)
ಕರಿ ಬೇವು - 5-6 (ಸಣ್ಣಗೆ ಹೆಚ್ಚಿ)
ಹಿಂಗು - ಸ್ವಲ್ಪ
ಬೇಕಿಂಗ್ ಸೋಡಾ - ½ ಚಮಚ
ಸಕ್ಕರೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಮಾಡಿಟ್ಟುಕೊಂಡು, 15-20 ನಿಮಿಷ ಮುಚ್ಚಿ ಇಡಬೇಕು. ನಂತರ ಸಣ್ಣದಾದ ಉಂಡೆ ಮಾಡಿಕೊಂಡು, ಕಾದ ಎಣ್ಣೆ ಗೆ ಹಾಕಿ, ಚೆನ್ನಾಗಿ ಕೆಂಬಣ್ಣ ಬರುವ ತನಕ ಕರಿಯಬೇಕು. ಇದನ್ನು ತೆಂಗಿನ ಕಾಯಿ ಚಟ್ನಿ ಯೊಂದಿಗೆ ಬಿಸಿಬಿಸಿ ಸವಿಯಬೇಕು.