
ಬೇಕಾಗುವ ಸಾಮಗ್ರಿಗಳು:
ತರಕಾರಿ - 2 ಕಪ್ (ಬದನೇಕಾಯಿ + ನುಗ್ಗೆಕಾಯಿ / ಮಂಗಳೂರು ಸೌತೆಕಾಯಿ / ಬೀನ್ಸ್+ ಕ್ಯಾರೆಟ್ - ಮುಂತಾದ ತರಕಾರಿಗಳನ್ನು ಉಪಯೋಗಿಸಬಹುದು)
ತೊಗರಿಬೇಳೆ - ¼ ಕಪ್
ಸಾಂಬಾರ್ ಈರುಳ್ಳಿ - 6-8 (ಇಲ್ಲದಿದ್ದರೆ 1 ಈರುಳ್ಳಿಯನ್ನು ಹೆಚ್ಚಿ ಉಪಯೋಗಿಸಬಹುದು)
ಟೊಮೇಟೊ - 1
ಬೆಲ್ಲ - 2 ಚಮಚ
ಹುಣಸೆ ರಸ - ಲಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಎಣ್ಣೆ - 2 ಚಮಚ
ಮಸಾಲೆಗೆ:
ಎಣ್ಣೆ - 1 ಚಮಚ
ಮೆಂತೆ - ½ ಚಮಚ
ಉದ್ದಿನಬೇಳೆ- 1 ಚಮಚ
ಮೆಣಸು (ಬ್ಯಾಡಗಿ) - 6-8
ಕೊತ್ತಂಬರಿ ಬೀಜ - 1 ½ ಚಮಚ
ಜೀರಿಗೆ - ½ ಚಮಚ
ಹಳದಿ ಪುಡಿ - ಚಿಟಿಕೆ
ಕರಿಬೇವು - 6 ಎಲೆ
ತೆಂಗಿನಕಾಯಿ - ¼ ಕಪ್ ತುರಿದು
ಒಗ್ಗರಣೆಗೆ :
ಎಣ್ಣೆ - 2 ಚಮಚ
ಸಾಸಿವೆ - ½ ಚಮಚ
ಹಿಂಗು - ½ ಚಮಚ
ಒಣ ಮೆಣಸು - 1
ಕರಿಬೇವು - 6 ಎಲೆ
ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ , ಮೆಂತೆ ಸ್ವಲ್ಪ ಬಣ್ಣ ಚೇಂಜ್ ಆಗುವ ತನಕ ಹುರಿದು, ನಂತರ ಉದ್ದಿನಬೇಳೆ ಸೇರಿಸಿ, ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಇದಕ್ಕೆ ಕರಿಬೇವು, ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹುರಿಯಿರಿ. ಮಸಾಲೆ ಹುರಿಯುವಾಗ ಸೀದು ಹೋಗದಂತೆ ನೋಡಿಕೊಳ್ಳಬೇಕು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತೆಂಗಿನತುರಿಯನ್ನು ಸ್ವಲ್ಪ ಕೆಂಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದ ನಂತರ ಈ ಮಸಾಲೆಯನ್ನು ರುಬ್ಬಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಸೇರಿಸಿಕೊಂಡು ಈರುಳ್ಳಿಯನ್ನು ಹುರಿದು, ಇದಕ್ಕೆ ಹೆಚ್ಚಿಟ್ಟ ತರಕಾರಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿಟ್ಟ ಟೊಮೇಟೊ ಹಾಗೂ ಒಂದು ಕಪ್ ನೀರು ಸೇರಿಸಿ ಬೇಯಿಸಲು ಇಡಿ. ತರಕಾರಿ ಬೇಯುತ್ತ ಬಂದಾಗ, ಇದಕ್ಕೆ ತೊಗರಿಬೇಳೆ, ರುಬ್ಬಿಟ್ಟ ಮಸಾಲೆ, ಹುಳಿ, ಉಪ್ಪು, ಬೆಲ್ಲ ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿ. ಈ ಸಾಂಬಾರನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.
ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ ಉಪಯೋಗಿಸ್ತೇನೆ...ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಇದೇ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ.
ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.

