My photo
ಕರಾವಳಿ ಹುಡುಗಿ :)
Showing posts with label ಕರಿದ ತಿಂಡಿಗಳು / Snacks. Show all posts
Showing posts with label ಕರಿದ ತಿಂಡಿಗಳು / Snacks. Show all posts

Saturday, January 30, 2010

Spinach-Cheese Swirls

ಬೇಕಾಗುವ ಸಾಮಗ್ರಿಗಳು:

ಪಫ್ಫ್ಸ್ ಪೇಸ್ತ್ರೀ ಶೀಟುಗಳು (Puff Pastry sheets) – 1
ಪಾಲಕ್ ಸೊಪ್ಪು -3 ಕಪ್ ( ಸಣ್ಣಗೆ ಹೆಚ್ಚಿ)

ಈರುಳ್ಳಿ - ½ ಕಪ್ (ಸಣ್ಣಗೆ ಹೆಚ್ಚಿ)
Mozzarella cheese (shredded) – ¼ ಕಪ್

Parmesan cheese (grated) - ¼ ಕಪ್

ಗರಂ ಮಸಾಲ ಪುಡಿ - ½ ಚಮಚ

ಎಣ್ಣೆ - 2 ಚಮಚ (Olive oil)

ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪಫ್ಫ್ ಪೇಸ್ತ್ರೀ ಶೀಟುಗಳನ್ನು, freezerನಿಂದ ಹೊರಗೆ ತೆಗೆದು ಉದ್ದಕ್ಕೆ ಬಿಡಿಸಿಕೊಂಡು 40 ನಿಮಿಷ ಇಡಬೇಕು.

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಯನ್ನು ಚೆನ್ನಾಗಿ 5 ನಿಮಿಷ ಹುರಿಯಿರಿ. ನಂತರ ಇದಕ್ಕೆ ಹೆಚ್ಚಿಟ್ಟ ಪಾಲಕ್ ಸೊಪ್ಪನ್ನು ಸೇರಿಸಿ 2 ನಿಮಿಷ ಬಾಡಿಸಿಕೊಂಡು, ಸ್ಟವ್ ನಿಂದ ಇಳಿಸಿ. ಪಾಲಕ್ ಸೊಪ್ಪಿನಲ್ಲಿ ಸ್ವಲ್ಪ ಕೂಡ ನೀರಿನಂಶ ಇರಬಾರದು. ಕೊನೆಯಲ್ಲಿ ಇದಕ್ಕೆ ಉಪ್ಪು, ಗರಂ ಮಸಾಲ ಹಾಗು ಚೀಸ್ ಸೇರಿಸಿ ಮಿಕ್ಸ್ ಮಾಡಿ.
ಒಂದು ಪಫ್ಫ್ ಪೇಸ್ತ್ರೀ ಶೀಟ್ ನಲ್ಲಿ ಸ್ವಲ್ಪ ಬೆಣ್ಣೆಯನ್ನು ಸವರಿ, ಅದರ ಮೇಲೆ ಈ ಮಿಶ್ರಣವನ್ನು ಸಮನಾಗಿ
ಹರಡಿಕೊಂಡು ರೋಲ್ ನಂತೆ ಸುತ್ತಿ. ಇದನ್ನು ½ ಇಂಚು ಅಳತೆಯಲ್ಲಿ ಚಕ್ರದಂತೆ ಕತ್ತರಿಸಿ. ಕತ್ತರಿಸಿದ ಭಾಗ ಕೆಳಕ್ಕೆ ಬರುವಂತೆ ಒಂದು ಎಣ್ಣೆ ಸವರಿದ ಅಲುಮಿನಿಯಂ ಶೀಟ್ ನಲ್ಲಿಟ್ಟು ಓವೆನ್ ನಲ್ಲಿ ಮಧ್ಯದ ರಾಕ್ ನಲ್ಲಿ 400Fನಲ್ಲಿ 15 ನಿಮಿಷ bake ಮಾಡಿ. ತರಕಾರಿ ತಿನ್ನದ ಮಕ್ಕಳಿಗೆ ಇದು ಒಳ್ಳೆಯ ಸಂಜೆಯ ಸ್ನಾಕ್.

Cheese ಹಾಗು ಗರಂ ಮಸಾಲ ಪುಡಿ ಯನ್ನು ನಿಮಗೆ ಬೇಕಾದಂತೆ ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹುದು.

Recipe Source: Puff Pastry ಶೀಟಿನ ಕವರಿನಲ್ಲಿದ್ದ ವಿಧಾನ

Saturday, June 27, 2009

ಚಕ್ಕುಲಿ / CHAKKULI



ಮನೆಯಲ್ಲಿದ್ದಾಗ ಅಮ್ಮ ಮಾಡಿದ ಚಕ್ಕುಲಿಯನ್ನು ಡಬ್ಬ ಖಾಲಿಯಾಗುವ ತನಕ ತಿನ್ನೋದು ಬಿಟ್ರೆ, ಹೇಗೆ ಮಾಡುವುದು ಎಂದು ತಿಳಿಯುವ ಗೋಜಿಗೆ ಹೋಗಿರಲಿಲ್ಲ. ನಂತರ ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿದ್ದಾಗ, ಅಯ್ಯಂಗಾರ್ಸ್ ಬೇಕರಿ, ಶ್ರೀಕೃಷ್ಣ ಬೇಕರಿ, ಮಹಾಲಕ್ಷ್ಮಿ ಸ್ವೀಟ್ಸ್, ಲಾಯಲ್ ವರ್ಲ್ಡ್...ಹೀಗೆ ಎಲ್ಲಾ ಕಡೆ ಒಳ್ಳೆಯ ತಿಂಡಿಗಳು ಸಿಕ್ತಾ ಇದ್ದಾಗ ನಿಜವಾಗಿಯೂ ಮನೆಯಲ್ಲಿ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಕೊನೆಗೂ ಇಲ್ಲಿ ಬಂದ ಮೇಲೆ ಸ್ವಂತ ಮಾಡಿದ್ರೆನೇ ತಿನ್ನೋ ಭಾಗ್ಯ, ಹೀಗೆ ಶುರುವಾಯಿತು ಚಕ್ಕುಲಿ ಪ್ರಯೋಗ.
(ಫ್ರೆಂಡ್ ಕೃಷ್ಣವೇಣಿಯ ಬ್ಲಾಗ್ ನೋಡಿ ಮಾಡಿದ್ದು)
ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 2 ಕಪ್
ಉದ್ದಿನಬೇಳೆ - 1 ಕಪ್ (ಅಥವಾ 1½ ಕಪ್ ನಷ್ಟು ಉದ್ದಿನ ಪುಡಿ)
ಜೀರಿಗೆ - 1 ಚಮಚ
ಬೆಣ್ಣೆ - 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ:
ಅಕ್ಕಿಯನ್ನು 3-4 ಗಂಟೆ ಅಥವಾ ಇಡೀ ರಾತ್ರಿ ನೀರಿನಲ್ಲಿ ನೆನಸಿಡಬೇಕು. ನಂತರ ಅದನ್ನು ತೊಳೆದುಕೊಂದು, ಸ್ವಲ್ಪ ನೀರು ಸೇರಿಸಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಉದ್ದಿನಬೇಳೆಯನ್ನು ಘಂ ಎನ್ನುವ ತನಕ ಹುರಿದುಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ಕೊನೆಯಲ್ಲಿ ರುಬ್ಬಿದ ಅಕ್ಕಿಗೆ, ಉದ್ದಿನಬೇಳೆ ಪುಡಿ, ಬೆಣ್ಣೆ, ಜೀರಿಗೆ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 30 ನಿಮಿಷ ಮುಚ್ಚಿ ಇಡಬೇಕು.
ಈ ಹಿಟ್ಟನ್ನು ಚಕ್ಕುಲಿ ಅಚ್ಚಿನಲ್ಲಿ ತುಂಬಿಸಿ, ಒಂದು wax ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ನ ಮೇಲೆ ಒತ್ತಿಕೊಂಡು, ಎಣ್ಣೆಯಲ್ಲಿ ಕರಿದರೆ, ಚಕ್ಕುಲಿ ಸಿದ್ದ.

Friday, April 24, 2009

ಹೆಸರುಕಾಳು ವಡೆ / MUNG BEAN VADA


ಬೇಕಾಗುವ ಸಾಮಗ್ರಿಗಳು:
ಹೆಸರುಕಾಳು - 2 ಕಪ್ (ಮೊಳಕೆ ಬರಿಸಿದ್ದು)
ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿ)
ಬೆಳ್ಳುಳ್ಳಿ ತುರಿದು - 1 ಚಮಚ
ಶುಂಠಿ ತುರಿದು - 1 ಚಮಚ
ಜೀರಿಗೆ - ½ ಚಮಚ
ಎಳ್ಳು - ½ ಚಮಚ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿ)
ಕರಿಬೇವು - 1 ಚಮಚ (ಸಣ್ಣಗೆ ಹೆಚ್ಚಿ)
ಹಸಿಮೆಣಸು - 1- 2 (ಸಣ್ಣಗೆ ಹೆಚ್ಚಿ)
ಕಾರದ ಪುಡಿ - ¼ ಚಮಚ
ಕಡ್ಲೆ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊಳಕೆ ಬರಿಸಿದ ಹೆಸರುಕಾಳನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಬೇಕು. ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ (ನೀರು ಹಾಕದೆ) ಚೆನ್ನಾಗಿ ಮಿಕ್ಸ್ ಮಾಡಬೇಕು. ಇದರಿಂದ 10 ಉಂಡೆಗಳನ್ನು ಮಾಡಿ ಬೇಕಾದ ಆಕಾರದಲ್ಲಿ ಕೈಯಿಂದ ಒತ್ತಿ, ಕೆಂಬಣ್ಣ ಬರುವವರೆಗೆ, ಕಾದ ಎಣ್ಣೆಯಲ್ಲಿ ಹದ ಉರಿಯಲ್ಲಿ ಕರಿದರೆ, ಹೆಸರುಕಾಳು ವಡೆ/ ಪಕೋಡ ಸಿದ್ದ. ಇದನ್ನು, ಟೊಮೇಟೊ ಸಾಸ್ / ತೆಂಗಿನ ಕಾಯಿ ಚಟ್ನಿ ಯೊಂದಿಗೆ ತಿನ್ನಬಹುದು.

ಇದಕ್ಕೆ ಎಲ್ಲಿಯೂ ನೀರು ಸೇರಿಸಬಾರದು. ಮೊಳಕೆ ಬರಿಸಿದ ಹೆಸರುಕಾಳು ಇಲ್ಲದಿದ್ದಲ್ಲಿ, ಹೆಸರುಕಾಳನ್ನು ನೀರಿನಲ್ಲಿ 5-6 ಗಂಟೆ ನೆನೆಸಿ ಉಪಯೋಗಿಸಬಹುದು. ಉಂಡೆ ಮಾಡುವಾಗ ಅಂಟು ಬರದಿದ್ದಲ್ಲಿ, ಸ್ವಲ್ಪ ಹಿಟ್ಟು ಜಾಸ್ತಿ ಹಾಕಿ ಉಂಡೆ ಮಾಡಬಹುದು.

Friday, April 10, 2009

ವೆಜಿಟೇಬಲ್ ಕಟ್ಲೆಟ್ / VEGETABLE CUTLET


ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಆಲೂಗಡ್ಡೆ - 2 ಕಪ್ (ಸಿಪ್ಪೆ ತೆಗೆದು ಸಣ್ಣಗೆ ಪುಡಿ ಮಾಡಿದ್ದು)
ಬೇಯಿಸಿದ ತರಕಾರಿಗಳು - 1 ಕಪ್ ( ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಬಟಾಣಿ)
ಕೊತ್ತಂಬರಿ ಸೊಪ್ಪು - ¼ ಕಪ್ (ಸಣ್ಣಗೆ ಹೆಚ್ಚಿದ್ದು)
ಶುಂಠಿ - 2 ಚಮಚ (ತುರಿದು)
ಹಸಿಮೆಣಸು - 1-2 (ಸಣ್ಣಗೆ ಹೆಚ್ಚಿದ್ದು)
ಗರಂ ಮಸಾಲ ಪುಡಿ - ¼ - ½ ಚಮಚ
ಚಾಟ್ ಮಸಾಲ ಪುಡಿ - ¼ ಚಮಚ
ಲಿಂಬೆ ರಸ- 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬ್ರೆಡ್ ಪುಡಿ * - ¼ ಕಪ್
ರವೆ - ¼ ಕಪ್
ಮೈದಾ - 3 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಬೇಯಿಸಿದ ಎಲ್ಲಾ ತರಕಾರಿಗಳನ್ನು(ತರಕಾರಿಯಲ್ಲಿ ಸ್ವಲ್ಪ ಕೂಡ ನೀರು ಇರಬಾರದು) ಹಾಕಿ, ಮಸಾಲೆಯ ಸಾಮಗ್ರಿಗಳನ್ನು ಹಾಗು ಹಸಿ ಮೆಣಸು, ಶುಂಠಿ, ಉಪ್ಪು, ಲಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು 10 ಉಂಡೆ ಮಾಡಿ ಬೇಕಾದ ಆಕಾರದಲ್ಲಿ 1 ರಿಂದ 1.5 ಇಂಚು ದಪ್ಪಗೆ ತಟ್ಟಬೇಕು.
3 ಚಮಚ ಮೈದಾ ಹಿಟ್ಟಿಗೆ, ¼ ಕಪ್ ನೀರು ಸೇರಿಸಿ, ಚೆನ್ನಾಗಿ ಗಂಟಿಲ್ಲದೆ ಕಲಸಿ ಇಟ್ಟುಕೊಳ್ಳಬೇಕು.
ತಟ್ಟಿದ ಕಟ್ಲೆಟ್ ನ್ನು ಮೈದಾ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಪುಡಿ ಹಾಗು ರವೆ (1:1) ಪುಡಿಯಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕೆಂಬಣ್ಣ ಬರುವ ತನಕ ಕಾಯಿಸಿದರೆ ಕಟ್ಲೆಟ್ ರೆಡಿ. ಇದನ್ನು ಕಡಿಮೆ ಎಣ್ಣೆ ಉಪಯೋಗಿಸಿ, ಕಾವಲಿಯಲ್ಲಿ ಕರಿದು ಕೂಡ ಮಾಡಬಹುದು. . ಇದನ್ನು ಟೊಮೇಟೊ ಸಾಸ್ ಅಥವಾ ಸಿಹಿ ಚಟ್ನಿಯೊಂದಿಗೆ ತಿನ್ನಬಹುದು.
ತರಕಾರಿಯಲ್ಲಿ ನೀರಿನ ಅಂಶ ಇದ್ದರೆ ಕಟ್ಲೆಟ್ ಮಾಡುವಾಗ ಪುಡಿಯಾಗುತ್ತದೆ. ಹಾಗಾದಲ್ಲಿ ಸ್ವಲ್ಪ ಬ್ರೆಡ್ ಪುಡಿ ಸೇರಿಸಿ ಬೆರೆಸಬಹುದು.

ಬ್ರೆಡ್ ಪುಡಿ * /Bread crumbs/ ರಸ್ಕ್ ಪುಡಿ - ಇದು ಸೂಪರ್ ಮಾರ್ಕೆಟ್ ಗಳಲ್ಲಿ ಸಿಗುತ್ತದೆ.
ಮನೆಯಲ್ಲಿ ಬ್ರೆಡ್ ಪುಡಿ ಮಾಡುವ ವಿಧಾನ- ಬ್ರೆಡ್ ನ್ನು ಓವೆನ್ ನಲ್ಲಿ ಇಟ್ಟು ಚೆನ್ನಾಗಿ ರೋಸ್ಟ್ ಮಾಡಬೇಕು. ಇದನ್ನು ನಂತರ ಮಿಕ್ಸಿ ಯಲ್ಲಿ ಪುಡಿ ಮಾಡಿ ಇಟ್ಟು ಕೊಳ್ಳಬೇಕು.

Saturday, March 21, 2009

ಸಮೋಸ (SAMOSA)

ಬೇಕಾಗುವ ಸಾಮಗ್ರಿಗಳು
ಮೈದಾ - 2 ಕಪ್
ಆಲೂಗಡ್ಡೆ - 2 ಕಪ್ (ಬೇಯಿಸಿ, ಸಣ್ಣದಾಗಿ ಚೂರು ಮಾಡಿದ್ದು)
ಬೇಯಿಸಿದ ತರಕಾರಿಗಳು - ½ ಕಪ್ (ಬಟಾಣಿ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್)
ಈರುಳ್ಳಿ - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಹಸಿಮೆಣಸು - 1-2 (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಪುಡಿ - ¼ ಚಮಚ
ಜೀರಿಗೆ ಪುಡಿ - ¼ ಚಮಚ
ಖಾರ ಪುಡಿ - ¼ - ½ ಚಮಚ
ಗರಂ ಮಸಾಲ ಪುಡಿ - ¼ - ½ ಚಮಚ
ಚಾಟ್ ಮಸಾಲ ಪುಡಿ - ¼ ಚಮಚ
ಸೋಂಪು - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಸಾಲೆ ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಸೋಂಪು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಇದಕ್ಕೆ ಬೇಯಿಸಿದ ತರಕಾರಿಗಳನ್ನು (ಬೇಯಿಸಿದ ತರಕಾರಿಯನ್ನು, ಒಂದು ಬಟ್ಟೆಗೆ ಹಾಕಿ ನೀರಿನ ಅಂಶವನ್ನೆಲ್ಲಾ ತೆಗೆಯಬೇಕು) ಹಾಕಿ 2 ನಿಮಿಷ ಹುರಿದುಕೊಂಡು, ಕೊನೆಯಲ್ಲಿ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಹಾಗು ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಒಲೆಯಿಂದ ತೆಗೆದು ಇಡಬೇಕು.

ಸಮೋಸ ಮಾಡುವ ವಿಧಾನ:
ಮೈದಾಪುಡಿಗೆ ಸ್ವಲ್ಪ ಉಪ್ಪು ಸೇರಿಸಿ, 3-4 ಚಮಚ ಎಣ್ಣೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಬೇಕು, ಕೊನೆಯಲ್ಲಿ ಸ್ವಲ್ಪ ನೀರು ಸೇರಿಸಿಕೊಂಡು, ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಂಡು, ಒಂದು ಪಾತ್ರೆಯಲ್ಲಿ 30 ನಿಮಿಷ ಮುಚ್ಚಿಡಬೇಕು.
ಮೈದಾ ಹಿಟ್ಟಿನ ಸಣ್ಣ ಗೋಲಿಗಳನ್ನು ಮಾಡಿ, ಚಪಾತಿಯಂತೆ ಲಟ್ಟಿಸಬೇಕು. ಇದನ್ನು ಚಾಕುವಿನಿಂದ ಅರ್ಧ ಚಂದ್ರಾಕೃತಿಗೆ ಕತ್ತರಿಸಿ, ಎಲ್ಲಾ ಬದಿಗಳಿಗೆ ತೆಳ್ಳಗೆ ನೀರು ಸವರಬೇಕು. ನಂತರ coneನ ಶೇಪ್ ನಲ್ಲಿ ಮಡಚಿ ಒಳಗೆ ಮಸಾಲೆಯನ್ನು ತುಂಬಿ, ಕೊನೆಗೆ ಮೇಲಿನ ಭಾಗವನ್ನು, ಸ್ವಲ್ಪ ನೀರು ಮುಟ್ಟಿಸಿಕೊಂಡು ಮುಚ್ಚಬೇಕು. ಇದನ್ನು ಎಣ್ಣೆಯಲ್ಲಿ ಕರಿದರೆ ಸಮೋಸ ಸಿದ್ದ.
ಆದರೆ ಇದಕ್ಕೆ ಎಣ್ಣೆ ಜಾಸ್ತಿ ಕಾಯಬಾರದು. ಸಣ್ಣ ತುಂಡು, ಚಪಾತಿಯನ್ನು ಹಾಕಿದಾಗ ಅದು ಮೇಲಕ್ಕೆ ಬರಬಾರದು. ಇದನ್ನು ಟೊಮೇಟೊ ಸಾಸ್ ಅಥವಾ ಸಿಹಿ ಚಟ್ನಿ ಮತ್ತು ಖಾರ ಚಟ್ನಿಯ ಜೊತೆ ಸವಿಯಬೇಕು.

ಸಿಹಿ ಚಟ್ನಿ ಮಾಡುವ ವಿಧಾನ
ಖರ್ಜೂರ - 4-5
ಹುಣಸೆ ಹಣ್ಣು - ಸಣ್ಣ ನಿಂಬೆಯ ಗಾತ್ರದ್ದು
ಬೆಲ್ಲ - 1-2 ಟೇಬಲ್ ಸ್ಪೂನ್
ಉಪ್ಪು - ಸ್ವಲ್ಪ
ಮೆಣಸಿನ ಪುಡಿ - 1/2 ಚಮಚ
ಖರ್ಜೂರ ಹಾಗು ಹುಣಸೆಹಣ್ಣನ್ನು ಸ್ವಲ್ಪ ನೀರಿನೊಂದಿಗೆ ಬೇಯಿಸಬೇಕು. ನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು, ಪುನ: ಪಾತ್ರೆಗೆ ಹಾಕಿ ಬೆಲ್ಲ ಸೇರಿಸಿ, ಚೆನ್ನಾಗಿ ಸ್ವಲ್ಪ ಗಟ್ಟಿಯಾಗುವ ತನಕ ಕುದಿಸಬೇಕು. ಕೊನೆಯಲ್ಲಿ ಉಪ್ಪು ಹಾಗು ಮೆಣಸಿನ ಪುಡಿ ಸೇರಿಸಿ, ಒಮ್ಮೆ ಕುದಿಸಿ ತೆಗೆಯಬೇಕು.

ವೆಜ್ ಪಫ್ಫ್ಸ್ (VEG PUFFS)

ಬೇಕಾಗುವ ಸಾಮಗ್ರಿಗಳು:
ಪಫ್ಫ್ಸ್ ಪೇಸ್ತ್ರೀ ಶೀಟುಗಳು (Puff Pastry sheets, super marketಗಳ frozen sectionನಲ್ಲಿ ಸಿಗುತ್ತದೆ)
ಆಲೂಗಡ್ಡೆ - 2 ಕಪ್ (ಬೇಯಿಸಿ, ಸಣ್ಣದಾಗಿ ಚೂರು ಮಾಡಿದ್ದು)
ಬೇಯಿಸಿದ ತರಕಾರಿಗಳು - ½ ಕಪ್ (ಬಟಾಣಿ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್)
ಈರುಳ್ಳಿ - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಹಸಿಮೆಣಸು - 1-2 (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಪುಡಿ - ¼ ಚಮಚ
ಜೀರಿಗೆ ಪುಡಿ - ¼ ಚಮಚ
ಖಾರ ಪುಡಿ - ¼ - ½ ಚಮಚ
ಗರಂ ಮಸಾಲ ಪುಡಿ - ¼ - ½ ಚಮಚ
ಚಾಟ್ ಮಸಾಲ ಪುಡಿ - ¼ ಚಮಚ
ಸೋಂಪು - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಸಾಲೆ ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಸೋಂಪು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಇದಕ್ಕೆ ಬೇಯಿಸಿದ ತರಕಾರಿಗಳನ್ನು (ಬೇಯಿಸಿದ ತರಕಾರಿಯನ್ನು, ಒಂದು ಬಟ್ಟೆಗೆ ಹಾಕಿ ನೀರಿನ ಅಂಶವನ್ನೆಲ್ಲಾ ತೆಗೆಯಬೇಕು) ಹಾಕಿ 2 ನಿಮಿಷ ಹುರಿದುಕೊಂಡು, ಕೊನೆಯಲ್ಲಿ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಹಾಗು ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಒಲೆಯಿಂದ ತೆಗೆದು ಇಡಬೇಕು.

ಪಫ್ಫ್ಸ್ ಮಾಡುವ ವಿಧಾನ - ಪಫ್ಫ್ ಪೇಸ್ತ್ರೀ ಶೀಟುಗಳನ್ನು, ಫ್ರಿಜ್ ನಿಂದ ಹೊರಗೆ ತೆಗೆದು 40 ನಿಮಿಷ ಇಡಬೇಕು.
ಇದನ್ನು ಉದ್ದಕ್ಕೆ ಬಿಡಿಸಿಕೊಂಡು, ಆಯತಾಕಾರದಲ್ಲಿ ಕತ್ತರಿಸಬೇಕು. ಇದರ ಒಂದು ಬಾಗದಲ್ಲಿ ಮಸಾಲೆಯನ್ನು ಇಟ್ಟು, 4 sideಗೆ ಬೆರಳಿನಿಂದ ನೀರು ಸವರಿ, ಇನ್ನೊಂದು ಬಾಗವನ್ನು ಮಡಚಿ ಮುಚ್ಚಬೇಕು. ನಂತರ ಎಲ್ಲ ಬದಿಯನ್ನು ಚೆನ್ನಾಗಿ seal ಮಾಡಬೇಕು. ಒಂದು Aluminium ಶೀಟ್ ನಲ್ಲಿ ಇಟ್ಟು ಓವೆನ್ ನಲ್ಲಿ 350 - 450 Fನಲ್ಲಿ, 30 ನಿಮಿಷ ಬೇಯಿಸಬೇಕು.

ಟಿಪ್ಸ್: ಬೇಯಿಸಿದ ಮೊಟ್ಟೆಯನ್ನು ಅರ್ಧ ಕತ್ತರಿಸಿ, ಅಥವಾ ಚಿಕನ್ ತುಂಡುಗಳನ್ನು (roasted) ಮಸಾಲೆಯ ಜೊತೆಗೆ ಬೆರೆಸಿ ಇಟ್ಟರೆ, Egg/ Chicken ಪಫ್ಫ್ ತಯಾರು. ಈ ಮಸಾಲೆಗೆ, ಸ್ವಲ್ಪ ಜಾಸ್ತಿ ಗರಂ ಮಸಾಲ ಹಾಗು ಕರಿಮೆಣಸಿನಪುಡಿಯನ್ನು ಹಾಕಿದರೆ ಚೆನ್ನಾಗಿರುತ್ತದೆ.



Monday, March 9, 2009

ಈರುಳ್ಳಿ ಬಜೆ / ನೀರುಳ್ಳಿ ಬಜೆ (ONION BAJJI)

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 2-3 ಕಪ್ (ಉದ್ದಕ್ಕೆ ಹೆಚ್ಚಿದ್ದು)
ಕಡಲೆ ಹಿಟ್ಟು - 5-6 ಟೇಬಲ್ ಚಮಚ
ಅಕ್ಕಿ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಜೀರಿಗೆ - 1 ಚಮಚ
ಕೆಂಪು ಮೆಣಸಿನ ಪುಡಿ - ½ - ¾ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸೋಡಾ ಪುಡಿ - ¼ ಚಮಚ
ಹಿಂಗು - ಸ್ವಲ್ಪ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಕೆ ಹೆಚ್ಚಿದ್ದು)
ಪಾಲಕ್ ಸೊಪ್ಪು - 2 ಟೇಬಲ್ ಚಮಚ (ಸಣ್ಣಕೆ ಹೆಚ್ಚಿದ್ದು)
ಎಣ್ಣೆ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಬೇಕು. ಈರುಳ್ಳಿಯಲ್ಲಿರುವ ನೀರು ಬಿಟ್ಟುಕೊಳ್ಳುವ ಕಾರಣ, ಇದಕ್ಕೆ ನೀರು ಸೇರಿಸಬಾರದು. ಕೊನೆಯಲ್ಲಿ ಬೇಕಿದ್ದರೆ ಸ್ವಲ್ಪ ನೀರನ್ನು ಕೈಗೆ ಸವರಿಕೊಂಡು, ಸಣ್ಣ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು, ಕಾದ ಎಣ್ಣೆಗೆ ಹಾಕಿ, ಕೆಂಬಣ್ಣ ಬರುವ ತನಕ ಕರಿಯಬೇಕು.
ಇದನ್ನು ಅಕ್ಕಿ ಹಿಟ್ಟು, ಕಾರ್ನ್ ಫ್ಲೌರ್, ಸೋಡಾ ಪುಡಿ, ಪಾಲಕ್ ಸೊಪ್ಪು ಹಾಗು ಕೊತ್ತಂಬರಿ ಸೊಪ್ಪು ಹಾಕದೆ ಕೂಡ ಮಾಡಬಹುದು.

Saturday, March 7, 2009

ತುಕುಡಿ / ಶಂಕರಪೋಳೆ (THUKUDI / SHANKARPOLE/ DIAMOND CUTS)


ಬೇಕಾಗುವ ಸಾಮಗ್ರಿಗಳು:

ಮೈದಾ ಹುಡಿ - 1 ಕಪ್
ಗೋಧಿ ಹುಡಿ - ¼ ಕಪ್
ಅಕ್ಕಿ ಪುಡಿ - ¼ ಕಪ್
ಹಿಂಗು - ಸ್ವಲ್ಪ (ಬೇಕಿದ್ದರೆ ಮಾತ್ರ)
ಜೀರಿಗೆ / ಬಿಳಿ ಎಳ್ಳು - 1 ಚಮಚ
ಕೆಂಪು ಮೆಣಸಿನ ಪುಡಿ - ¾ ಚಮಚ
ಸಕ್ಕರೆ - 2-3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಾಡುವ ವಿಧಾನ:
ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ, 1-2 ಚಮಚ ಬಿಸಿ ಎಣ್ಣೆಯನ್ನು ಸೇರಿಸಿ, ಬೇಕಾದಷ್ಟು ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಬೇಕು. ನಂತರ ಸಣ್ಣ ಉಂಡೆಯನ್ನು ಮಾಡಿಕೊಂಡು, ಚಪಾತಿಯನ್ನು ಲಟ್ಟಿಸಬೇಕು.

ಇದನ್ನು ಚಾಕುವಿನ ಸಹಾಯದಿಂದ ಡೈಮಂಡ್ ಆಕಾರದಲ್ಲಿ ತುಂಡು ಮಾಡಿಕೊಂಡು, ಬಿಡಿಸಿಟ್ಟುಕೊಳ್ಳಬೇಕು.
ಇದನ್ನು ಕಾದ ಎಣ್ಣೆಯಲ್ಲಿ ಕೆಂಬಣ್ಣ ಬರುವ ವರೆಗೆ ಹುರಿದರೆ ತುಕುಡಿ ಸಿದ್ದ. ತಣ್ಣಗಾದ ನಂತರ ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ತುಂಬಾ ದಿನ ಕೆಡ ದಂತೆ ಇಟ್ಟು, ಚಾ/ ಕಾಫಿಯೊಂದಿಗೆ ತಿನ್ನಬಹುದು.

Friday, February 27, 2009

ಮಂಗಳೂರು ಬನ್ಸ್ (Mangalore Buns)

ಬೇಕಾಗುವ ಸಾಮಗ್ರಿಗಳು
ಬಾಳೆಹಣ್ಣು - 1
ಮೈದಾ ಹುಡಿ - 1.5 ಕಪ್
ಮೊಸರು - ½ ಕಪ್
ಸೋಡಾ ಪುಡಿ - ½ ಚಮಚ
ಜೀರಿಗೆ - ½ ಚಮಚ
ಸಕ್ಕರೆ - 4-5 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು.
ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು, ಪೂರಿಯ ರೀತಿಯಲ್ಲಿ (೧ ರಿಂದ ೧.೫ ಇಂಚು ದಪ್ಪಕ್ಕೆ) ಲಟ್ಟಿಸಬೇಕು. ಇದನ್ನು ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಹಿಟ್ಟು ಅಥವಾ ಕೈಗೆ ಸ್ವಲ್ಪಎಣ್ಣೆ ಹಾಕಿಕೊಂಡರೆ ಒಳ್ಳೆಯದು.
ನಂತರ ಇದನ್ನು ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಕೆಂಬಣ್ಣ ಬರುವ ವರೆಗೆ ಕರಿಯಬೇಕು.
ಇದನ್ನು ಚಟ್ನಿ, ಸಾಂಬಾರ್ ಜೊತೆಗೆ ಅಥವಾ ಹಾಗೆಯೇ ತಿನ್ನಬಹುದು.

Sunday, February 1, 2009

ಗೋಳಿ ಬಜೆ / ಮಂಗಳೂರು ಬಜ್ಜಿ (Golibaje / Mangalore Bajji)

ನೀವು ಮಂಗಳೂರಿನ ಯಾವುದೇ ಹೋಟೆಲ್ ಗೆ ಹೋಗಿ ತಿಂಡಿ ಏನಿದೆ..? ಎಂದು ಕೇಳಿದರೆ, ಹೀಗೆ ಶುರುವಾಗುತ್ತದೆ..ಗೋಳಿಬಜೆ, ನೀರುಳ್ಳಿ ಬಜೆ, ಮಂಗಳೂರು ಬನ್ಸ್, ಸೆಟ್ ದೋಸೆ, ಮಸಾಲೆ ದೋಸೆ...... ಮಂಗಳೂರಿನಲ್ಲಿ ಗೋಳಿ ಬಜೆ ಮತ್ತು ಬಿಸಿ ಬಿಸಿ ಕಾಫಿ/ಚಾ ಬಲು ಪ್ರಸಿದ್ದ. ಅದೇ ಬೆಂಗಳೂರು/ಮೈಸೂರಿನ ಹೋಟೆಲಿಗೆ ಹೋದರೆ, ಇದೇ ಗೋಳಿಬಜೆಗೆ ಮಂಗಳೂರು ಬಜ್ಜಿ ಎನ್ನುತ್ತಾರೆ.

ಗೋಳಿ ಬಜೆ ಮಾಡಲು ಬೇಕಾಗುವ ಸಾಮಗ್ರಿಗಳು
ಮೈದಾ ಹುಡಿ - 1 ಕಪ್
ಮೊಸರು/ ದಪ್ಪ ಮಜ್ಜಿಗೆ - 1/2 ಕಪ್
ಶುಂಠಿ - 1 ಚಮಚ (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದಿದ್ದು)
ಹಸಿ ಮೆಣಸು - 1 ಚಮಚ (ಸಣ್ಣಗೆ ಹೆಚ್ಚಿ)
ಕರಿ ಬೇವು - 5-6 (ಸಣ್ಣಗೆ ಹೆಚ್ಚಿ)
ಹಿಂಗು - ಸ್ವಲ್ಪ
ಬೇಕಿಂಗ್ ಸೋಡಾ - ½ ಚಮಚ
ಸಕ್ಕರೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಮಾಡಿಟ್ಟುಕೊಂಡು, 15-20 ನಿಮಿಷ ಮುಚ್ಚಿ ಇಡಬೇಕು. ನಂತರ ಸಣ್ಣದಾದ ಉಂಡೆ ಮಾಡಿಕೊಂಡು, ಕಾದ ಎಣ್ಣೆ ಗೆ ಹಾಕಿ, ಚೆನ್ನಾಗಿ ಕೆಂಬಣ್ಣ ಬರುವ ತನಕ ಕರಿಯಬೇಕು. ಇದನ್ನು ತೆಂಗಿನ ಕಾಯಿ ಚಟ್ನಿ ಯೊಂದಿಗೆ ಬಿಸಿಬಿಸಿ ಸವಿಯಬೇಕು.