My photo
ಕರಾವಳಿ ಹುಡುಗಿ :)
Showing posts with label ಚಟ್ನಿ. Show all posts
Showing posts with label ಚಟ್ನಿ. Show all posts

Saturday, November 7, 2009

ಹೀರೆಕಾಯಿ ಸಿಪ್ಪೆ ಚಟ್ನಿ



ಹೀರೆಕಾಯಿ ಪಲ್ಯ ಅಥವಾ ಸಾಂಬಾರ್ ಮಾಡಿದ ನಂತರ ಅದರ ಸಿಪ್ಪೆಯನ್ನು ಬಿಸಾಡುವುದು ಸಾಮಾನ್ಯ....ಆ ಸಿಪ್ಪೆಯಿಂದ ಒಳ್ಳೆಯ ಚಟ್ನಿ ಮಾಡಬಹುದು.

ಹೀರೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಅದರ ಸಿಪ್ಪೆಯನ್ನು ಚಾಕುವಿನಿಂದ ತೆಗೆಯಿರಿ. ಚಟ್ನಿ ಮಾಡ್ಬೇಕು ಅಂದ್ರೆ ಸ್ವಲ್ಪ ಜಾಸ್ತಿನೆ ತೆಗೆಯಿರಿ, ಪರವಾಗಿಲ್ಲ..ಒಂದೆರಡು ದಿನ ಇದನ್ನು ಒಂದು ಕವರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟು ನಂತರವೂ ಉಪಯೋಗಿಸಬಹುದು.

ಈ ಸಿಪ್ಪೆಯನ್ನು (ಒಂದು ಹಿಡಿಯಷ್ಟು) ತೊಳೆದುಕೊಂಡು ¼ ಕಪ್ ನೀರಿನಲ್ಲಿ 5-10 ನಿಮಿಷ ಬೇಯಿಸಿ. ನಂತರ ½ ಕಪ್ ನಷ್ಟು ತೆಂಗಿನ ತುರಿ, ಖಾರಕ್ಕೆ ತಕ್ಕಷ್ಟು (2-4) ಹುರಿದ ಬ್ಯಾಡಗಿ ಮೆಣಸು , 10 ಕಾಳು ಹುರಿದ ಉದ್ದಿನ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು ಹಾಗು ಬೇಯಿಸಿದ ಸಿಪ್ಪೆಯನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸ್ಕೊಂಡು ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆ ಯಲ್ಲಿ ತೆಗೆದುಕೊಂಡು ಒಗ್ಗರಣೆ ಸೇರಿಸಿದರೆ, ದೋಸೆ, ಚಪಾತಿ ಊಟದೊಂದಿಗೆ ಸವಿಯಲು ಒಳ್ಳೆಯ ಚಟ್ನಿ ಸಿದ್ದ.
-
ನಿಮಗೆ ಹಸಿಮೆಣಸಿನಿಂದ ಮಾಡಿದ ಚಟ್ನಿ ಇಷ್ಟವಿದ್ದರೆ, ಬೇಯಿಸಿದ ಸಿಪ್ಪೆಗೆ ಹಸಿಮೆಣಸು, ತೆಂಗಿನ ತುರಿ, ಉಪ್ಪು ಸೇರಿಸಿ ರುಬ್ಬಿ ನಂತರ ಒಗ್ಗರಣೆ ಸೇರಿಸಿದರೆ ಚಟ್ನಿ ರೆಡಿಯಾಗುತ್ತದೆ.

Saturday, February 28, 2009

ಬಸಳೆ ಸೊಪ್ಪಿನ ತಂಬುಳಿ [Basale (Indian Spinach) Soppina Thambuli]


ತಂಬುಳಿಯನ್ನು ಹೆಚ್ಚಾಗಿ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಮಾಡುತ್ತಾರೆ. ಬಾಳೆಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ, ಪಲ್ಯಗಳು ಹಾಗು ಅನ್ನ ಎಲ್ಲ ಬಡಿಸಿದ ನಂತರ, ತುಪ್ಪ ಸಾರು ಬಡಿಸುವುದರ ಮೊದಲು ತಂಬುಳಿಯನ್ನು ಅನ್ನಕ್ಕೆ ಬಡಿಸುತ್ತಾರೆ. ಇದು ತುಂಬ ಜೀರ್ಣಕಾರಿ.

ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು - 10
ಜೀರಿಗೆ - ½ ಚಮಚ
ಶುಂಠಿ - 1 ಸೆ. ಮಿ. ತುಂಡು
ಮೊಸರು / ಮಜ್ಜಿಗೆ - ½ ಕಪ್
ತೆಂಗಿನ ತುರಿ - ½ ಕಪ್
ಹಸಿ ಮೆಣಸು - 1 ರಿಂದ 2
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಕರಿಬೇವು.
ಮಾಡುವ ವಿಧಾನ
ಬಸಳೆ ಸೊಪ್ಪನ್ನು ತೊಳೆದು, ಚೆನ್ನಾಗಿ ಒರೆಸಿ, ನಂತರ ಸಣ್ಣ ಸಣ್ಣ ತುಂಡು ಗಳನ್ನಾಗಿ ಮಾಡಬೇಕು. ಸ್ವಲ್ಪ (1 ಚಮಚ) ಎಣ್ಣೆ ಹಾಕಿ ಬಸಳೆಸೊಪ್ಪನ್ನು 5 ನಿಮಿಷ ಚನ್ನಾಗಿ ಹುರಿಯಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ರುಬ್ಬಬೇಕು. ಮಜ್ಜಿಗೆ ಉಪಯೋಗಿಸಿದರೆ ಕೊನೆಯಲ್ಲಿ ಸೇರಿಸಿದರೆ ಸಾಕು.
ಇದನ್ನು ನಂತರ ಪಾತ್ರೆಗೆ ಹಾಕಿ, ಉಪ್ಪು ಸೇರಿಸಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ಇದು ಚಟ್ನಿಗಿಂತ ಸ್ವಲ್ಪ ತೆಳ್ಳಗಿರಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ, ತಂಬುಳಿ ಸಿದ್ದ.

Thursday, December 18, 2008

ಪಾಲಕ್ ಪರೋಟ ಹಾಗು ಎಲೆಕೋಸು ಚಟ್ನಿ (Palak Parota and Cabbage chutny)

ಬೇಕಾಗುವ ಸಾಮಗ್ರಿಗಳು:
ಪಾಲಕ್ ಸೊಪ್ಪು (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಗೋಧಿ ಹಿಟ್ಟು- ೩ ಕಪ್
ಉಪ್ಪು- ರುಚಿಗೆ ತಕ್ಕಷ್ಟು
ಮೇಲಿನ ಎಲ್ಲ ಸಾಮಗ್ರಿಗಳನ್ನು, ಬೇಕಾದಷ್ಟು ನೀರು ಬೆರೆಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ನಾದಿ ಇಟ್ಟುಕೊಳ್ಳಬೇಕು. ಸಣ್ಣ ಉಂಡೆಯನ್ನು ಮಾಡಿಕೊಂಡು, ಮೇಲುಗಡೆಗೆ ಸ್ವಲ್ಪ ಗೋಧಿ ಪುಡಿಯನ್ನು ಹರಡಿ, ಚಪಾತಿಯನ್ನು ಲಟ್ಟಿಸಿಕೊಂಡು, ಕಾದ ಕಾವಲಿಯಲ್ಲಿ ಹಾಕಿ ಎರಡು ಬದಿ ಬೇಯಿಸಿದರೆ, ಪಾಲಕ್ ಚಪಾತಿ ಅಥವಾ ಪಾಲಕ್ ಪರೋಟ ತಿನ್ನಲು ರೆಡಿ.

ಪಾಲಕ್ ಅತ್ಯಂತ ಆರೋಗ್ಯಕರ ತರಕಾರಿ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಎ ಹಾಗು ಸಿ ಹೇರಳವಾಗಿ ಲಭಿಸುತ್ತದೆ (http://en.wikipedia.org/wiki/Spinach).


ಚಟ್ನಿ ಗೆ ಬೇಕಾಗುವ ಸಾಮಗ್ರಿಗಳು:
ಎಲೆಕೋಸು (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಟೊಮೇಟೊ (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಹಸಿಮೆಣಸಿನ ಕಾಯಿ-೨
ಎಣ್ಣೆ- ೫ ಚಮಚ
ಜೀರಿಗೆ- ೧/೨ ಚಮಚ
ಕಡಲೆಬೇಳೆ- ೧/೨ ಚಮಚ
ಉದ್ದಿನಬೇಳೆ- ೧/೨ ಚಮಚ
ಉಪ್ಪು- ರುಚಿಗೆ ತಕ್ಕಷ್ಟು


ಒಗ್ಗರೆಣೆಗೆ:
ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಎಲೆ.

ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜೀರಿಗೆ ಕಡಲೆಬೇಳೆ, ಉದ್ದಿನಬೇಳೆ ಸೇರಿಸಿ ಕೆಂಪಾಗುವ ತನಕ ಹುರಿಯಬೇಕು. ನಂತರ ಈರುಳ್ಳಿ, ಎಲೆಕೋಸು, ಟೊಮೇಟೊ, ಒಂದೊಂದೇ ಸೇರಿಸಿಕೊಂಡು ಸ್ವಲ್ಪ ಹುರಿಯಬೇಕು. ಬಿಸಿ ಆರಿದ ಮೇಲೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಿಕ್ಸಿ ಯಲ್ಲಿ ಚಟ್ನಿ ಹದಕ್ಕೆ ರುಬ್ಬಬೇಕು. ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ ಚಟ್ನಿ ಸವಿಯಲು ಸಿದ್ದ.
ಸೂಚನೆ: ಭಾರತದಲ್ಲಿ ಕ್ಯಾಬೇಜ್ ಚಟ್ನಿ ಮಾಡುವವರು, ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕ್ಯಾಬೇಜ್ ತೆಗೆದುಕೊಂಡು, ಜಾಸ್ತಿ ಹೊತ್ತು ಹುರಿದರೆ ಒಳ್ಳೆಯದು.