My photo
ಕರಾವಳಿ ಹುಡುಗಿ :)
Showing posts with label ಸಿಹಿತಿಂಡಿಗಳು / Sweets. Show all posts
Showing posts with label ಸಿಹಿತಿಂಡಿಗಳು / Sweets. Show all posts

Sunday, September 5, 2010

ಹಬ್ಬಕ್ಕೆ ಎರಡು ದಿಢೀರ್ ಸ್ವೀಟ್ಸ್ (ಗೋಧಿ ಪುಡಿ ಹಲ್ವ ಮತ್ತು ಖರ್ಜೂರ ಪಾಯಸ / Wheat flour Halwa and Dates Payasa)

ಗೋಧಿಪುಡಿ ಹಲ್ವ



ಬೇಕಾಗುವ ಸಾಮಗ್ರಿಗಳು:
ಗೋಧಿ ಪುಡಿ - 1 ಕಪ್
ಸಕ್ಕರೆ - 1 ಕಪ್
ಹಾಲು - 1 ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - 1 ಚಮಚ

ಗೋಡಂಬಿ / ಬಾದಾಮಿ ಪೌಡರ್ - ಸ್ವಲ್ಪ
ಒಂದು ಪಾತ್ರೆಯಲ್ಲಿ
ತುಪ್ಪ ಬಿಸಿ ಮಾಡಿ, ಇದಕ್ಕೆ ಗೋಧಿಪುಡಿಯನ್ನು ಸೇರಿಸಿ, ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವ ತನಕ (15-20 ನಿಮಿಷ) ಹುರಿಯಿರಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಯಲ್ಲಿ ಹಾಲು ಸೇರಿಸಿ. ಈ ಮಿಶ್ರಣ ತಳ ಬಿಡುವಾಗ (5 ನಿಮಿಷ) ಒಂದು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಸ್ವಲ್ಪ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿ. ಮೇಲಿನಿಂದ ಗೋಡಂಬಿ-ಬಾದಾಮಿ ಪೌಡರ್ ನ್ನು ಉದುರಿಸಿ ಅಥವಾ ಇಡೀ ಗೋಡಂಬಿಯಿಂದ ಅಲಂಕರಿಸಿ.

ಖರ್ಜೂರ ಪಾಯಸ

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 15
ತೆಂಗಿನ ಹಾಲು - 3 ಕಪ್ (½ ತೆಂಗಿನಕಾಯಿಯನ್ನು ತುರಿದು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿ, ಹಾಲನ್ನು ಹಿಂಡಿ ತೆಗೆಯಿರಿ. ಪುನ ಇದಕ್ಕೆ ನೀರು ಸೇರಿಸಿ ಇನ್ನೊಮ್ಮೆ ಹಾಲು ತೆಗೆದಿಡಿ.)
ಸಕ್ಕರೆ ಅಥವಾ ಬೆಲ್ಲ - ½ ಕಪ್ (ಸಿಹಿಗೆ ತಕ್ಕಂತೆ)
ಏಲಕ್ಕಿ ಪುಡಿ - 1 ಚಮಚ

ಸ್ವಲ್ಪ ಗೋಡಂಬಿ ಹಾಗು ಒಣ ದ್ರಾಕ್ಷೆ

ಖರ್ಜೂರದ ಬೀಜ ತೆಗೆದು ಸಣ್ಣಗೆ ತುಂಡು ಮಾಡಿಕೊಂಡು ಅರ್ಧ ಕಪ್ ನೀರಿನಲ್ಲಿ 5 ನಿಮಿಷ ಕುದಿಸಿರಿ. ತಣ್ಣಗಾದ ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಇದಕ್ಕೆ ತೆಂಗಿನ ಹಾಲು ಮತ್ತು ಸಕ್ಕರೆ ಸೇರಿಸಿ 5 ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಏಲಕ್ಕಿಪುಡಿ ಹಾಗು ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ಒಣ ದ್ರಾಕ್ಷೆಯನ್ನು ಸೇರಿಸಿ, ಬಿಸಿ ಅಥವಾ ತಣ್ಣಗಾದ ನಂತರ ಸವಿಯಲು ಕೊಡಿ. ಪಾಯಸ ಗಟ್ಟಿಯಾಗಿದ್ದರೆ, ಕೊನೆಯಲ್ಲಿ ½ - 1 ಕಪ್ ಹಾಲು ಕೂಡ ಸೇರಿಸಬಹುದು.ಈ ಎರಡು ಸ್ವೀಟ್ಸ್ಗಳನ್ನು ಮಾಡಲು ತುಂಬಾ ಸುಲಭ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದು.

Recipe source: Vidyakka



ನನ್- ಪ್ರಪಂಚದ ಓದುಗರೆಲ್ಲರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳೊಂದಿಗೆ,
ವನಿತಾ.

Tuesday, March 16, 2010

ಹೋಳಿಗೆ / HOLIGE

ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 1 ಕಪ್
ನೀರು - ½ ಕಪ್
ಬೆಲ್ಲದ ಪುಡಿ - 1 ಕಪ್
ಏಲಕ್ಕಿ ಪುಡಿ - ½ ಚಮಚ

ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾ- 1½ ಕಪ್
ನೀರು - ¾ -1 ಕಪ್
ಹಳದಿ ಪುಡಿ - ಚಿಟಿಕೆ
ಉಪ್ಪು - ಚಿಟಿಕೆ
ಎಣ್ಣೆ - 2-3 ಟೇಬಲ್ ಚಮಚ

ಹೂರಣ ತಯಾರಿಸುವ ವಿಧಾನ:
ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ.
ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ.
ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.

ಕನಕ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.

ಹೋಳಿಗೆ ತಯಾರಿಸುವ ವಿಧಾನ:
ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ.
ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.

ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.


ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹರುಷ ತರಲಿ :)
ವನಿತಾ.

Saturday, January 16, 2010

ಮ್ಯಾಕರೋನ್ಸ್ / CASHEW MACAROONS


ದಕ್ಷಿಣ ಕನ್ನಡ, ಕಾಸರಗೊಡು ಸಮೀಪ ಬೆಳೆಯಲಾಗುವ ಒಂದು ಪ್ರಮುಖ ವಾಣಿಜ್ಯ ಬೆಳೆ - ಗೇರು.
ಬಾಲ್ಯದಲ್ಲಿ ಗೇರುಹಣ್ಣನ್ನು ಉಪ್ಪು ಹಾಕಿ ತಿನ್ನುವುದೆಂದರೆ ಏನೋ ವಿಶೇಷ ಸಂಬ್ರಮ. ಅಂತೆಯೇ ಮಂಗಳೂರಿನಲ್ಲಿ ಯುಗಾದಿ ಆಚರಣೆಯಲ್ಲಿ ತಯಾರಿಸಲಾಗುವ ಖಾದ್ಯಗಳಲ್ಲಿ ಹಸಿ ಗೋಡಂಬಿ ತಿರುಳಿನಿಂದ ತಯಾರಿಸಲಾಗುವ ಪಲ್ಯ, ಪಾಯಸಗಳಿಗೆ ಪ್ರಮುಖ ಆದ್ಯತೆ.

ಒಣ ಗೋಡಂಬಿಯನ್ನು ಸಿಪ್ಪೆಯಿಂದ ಬೇರ್ಪಡಿಸಲು ಗೇರುಬೀಜವನ್ನು ಮಣ್ಣಿನ ಪಾತ್ರೆಯಲ್ಲಿ ಅಥವಾ ಕೆಂಡದಲ್ಲಿ ಹುರಿಯಬೇಕು. ಇದರ ಸಿಪ್ಪೆಯಿಂದ ಹೊರಸೂಸುವ ಎಣ್ಣೆಯಲ್ಲಿ ಚರ್ಮಕ್ಕೆ allergyಯಾಗುವಂತಹ ಅಸಿಡ್ ಗಳಿರುತ್ತದೆ. ತಣ್ಣಗಾದ ನಂತರ ಗೋಡಂಬಿ ತಿರುಳನ್ನು ಸಿಪ್ಪೆಯಿಂದ ಬೇರ್ಪಡಿಸಬೇಕು. ಈ ರೀತಿ ಬಿಸಿ ಬಿಸಿ ತೆಗೆದ ಗೋಡಂಬಿ ತಿನ್ನಲು ಬಹಳ ರುಚಿ.

ಮಂಗಳೂರಿನ ಬೇಕರಿಗಳಲ್ಲಿ ಈ ಗೋಡಂಬಿ
ಮತ್ತು ಮೊಟ್ಟೆಯಿಂದ ತಯಾರಿಸಲಾಗುವ 'ಮ್ಯಾಕರೋನ್ಸ್ ' (Cashew Macaroons) ಎಂಬ ಸಿಹಿ ತಿಂಡಿ ಬಹಳ ಹೆಸರುವಾಸಿ. ಬಹಳಷ್ಟು ಜನರಿಗೆ ಈ ಸಿಹಿತಿಂಡಿ ಮಾಡಲು ಮೊಟ್ಟೆ ಉಪಯೋಗಿಸುತ್ತಾರೆ ಎಂದು ತಿಳಿದಿರಲಿಕ್ಕಿಲ್ಲ..ಇದನ್ನು ತಯಾರಿಸುವುದು ತುಂಬಾ ಸುಲಭ.

ಬೇಕಾಗುವ ಸಾಮಗ್ರಿಗಳು:
ಮೊಟ್ಟೆಯ ಬಿಳಿ ಭಾಗ - 2 ಮೊಟ್ಟೆಯಿಂದ ಸ್ವಲ್ಪ ಕೂಡ ಹಳದಿ ಭಾಗ ಬರದಂತೆ ಬೇರ್ಪಡಿಸಬೇಕು
ಸಕ್ಕರೆ - 3/4 ಕಪ್
ಗೋಡಂಬಿ - 3/4 ಕಪ್ (ಗೋಡಂಬಿಯನ್ನು ಮಿಕ್ಸಿ ಯಲ್ಲಿ
ಹಾಕಿ ಸ್ವಲ್ಪ ಪುಡಿ ಮಾಡಬೇಕು )
ವೆ
ನಿಲ್ಲ ಎಸ್ಸೆನ್ಸ್ - 1/4 ಚಮಚ
ಲಿಂಬೆ ರಸ -
1/4 ಚಮಚ
ಉಪ್ಪು - ಚಿಟಿಕೆ

ಮಾಡುವ ವಿಧಾನ :

ಒಂದು ಪಾತ್ರೆಗೆ ಲಿಂಬೆ ರಸವನ್ನು ಒಳಗಿನಿಂದ ಸವರಿಕೊಂಡು ಇದರಲ್ಲಿ ಮೊಟ್ಟೆಯ
ಬಿಳಿಭಾಗ
ಮತ್ತು ಚಿಟಿಕೆ ಉಪ್ಪು ಸೇರಿಸಿಕೊಂಡು electric egg beater
ನಲ್ಲಿ low speedನಲ್ಲಿ 2-3 ನಿಮಿಷ ಹಾಗು high speedನಲ್ಲಿ 3ನಿಮಿಷದಷ್ಟು ಮಿಕ್ಸ್ ಮಾಡಿದರೆ, ಈ ಮಿಶ್ರಣವು ದಪ್ಪದ ಹಿಟ್ಟಿನ ಹದಕ್ಕೆ ಬಂದಿರುತ್ತದೆ. ಇದಕ್ಕೆ ಸ್ವಲ್ಪ ಸ್ವಲ್ಪವೇ ಸಕ್ಕರೆ ಸೇರಿಸುತ್ತಾ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ಗೋಡಂಬಿ ಪುಡಿಯನ್ನು ಸೇರಿಸಿಕೊಂಡು ಒಂದು ಚಮಚದಲ್ಲಿ ನಿದಾನದಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು.
ಒಂದು ಚಮಚದಷ್ಟು ಈ ಮಿಶ್ರಣವನ್ನು ಒಂದು ಬೇಕಿಂಗ್ ಶೀಟ್ ನ ಮೇಲಿಟ್ಟು ಮೊದಲೇ ಆನ್ ಮಾಡಿದ ಓವೆನ್ ನ ಮಧ್ಯದ
rackನಲ್ಲಿಟ್ಟು 325F ನಲ್ಲಿ 15-20 ನಿಮಿಷ ಬೇಯಿಸಿರಿ.
ಓವೆನ್ ನಿಂದ ತೆಗೆದಾಗ ಮ್ಯಾಕರೋನ್ಸ್
ತುಂಬಾ ಸಾಫ್ಟ್ ಆಗಿರುತ್ತದೆ. ಅರ್ಧ ಗಂಟೆಯ ನಂತರ, ಸ್ವಲ್ಪ ತಣ್ಣಗಾದ ಮೇಲೆ ಬೇಕಿಂಗ್ ಶೀಟ್ ನಿಂದ ಬೇರ್ಪಡಿಸಿ ಒಂದು ಡಬ್ಬದಲ್ಲಿ ತುಂಬಿ ಫ್ರಿಜ್ ನಲ್ಲಿಟ್ಟು ಬೇಕಾದಾಗ ಸವಿಯಿರಿ.
ಈ ರೀತಿ 10- 15 ಮ್ಯಾಕರೋನ್
ನ್ನು ಮಾಡಬಹುದು.
ಗೋಡಂಬಿಯ ಬದಲು ನೆಲ ಕಡಲೆ ಕೂಡ
ಉಪಯೋಗಿಸಬಹುದು.

ಉಪಯುಕ್ತ ಮಾಹಿತಿಯುಳ್ಳ ವೆಬ್ ಸೈಟ್ ಗಳು,
Tuticorin Cashew macaroon
coconut macaroons


ನನ್ - ಪ್ರಪಂಚದ ಓದುಗರಿಗೆಲ್ಲ ಹೊಸವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತಾ,
ವನಿತಾ.


Tuesday, August 18, 2009

ಗುಳಿಅಪ್ಪ / ಗುಳಿಯಪ್ಪ


ಮಂಗಳೂರಿನ ತಿಂಡಿಗಳಲ್ಲಿ ತರಕಾರಿಗಳು ಸಾಮಾನ್ಯ. ಇದರಲ್ಲಿ ಪ್ರಮುಖವಾದುವುಗಳೆಂದರೆ ಸೌತೆಕಾಯಿ (ಮಂಗಳೂರು ಸೌತೆ), ಮುಳ್ಳುಸೌತೆ (ಸೌತೆಕಾಯಿ), ಸೋರೆಕಾಯಿ, ಹಲಸಿನ ಹಣ್ಣು/ ಕಾಯಿ - ಮುಂತಾದುವುಗಳಿಂದ ತಯಾರಿಸಿದ ದೋಸೆ ಹಾಗು ಕಡುಬುಗಳು (ಅಡ್ಯ =ತುಳು). ಗುಳಿಅಪ್ಪವನ್ನು ಗುಂಡಿಗಳಿರುವ ಕಬ್ಬಿಣದ/Nonstick ಕಾವಲಿಗೆಯಲ್ಲಿ ಮಾಡುತ್ತಾರೆ.

ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ನಾವು ಚಿಕ್ಕವರಿದ್ದಾಗ ನಮಗೆ ಗುಳಿಯಪ್ಪ ಬಹಳ ಇಷ್ಟದ ತಿಂಡಿಯಾದುದರಿಂದ, ಬೆಳಗ್ಗಿನ ದೋಸೆ ಅಥವಾ ಇಡ್ಲಿ ಹಿಟ್ಟು (ಅಕ್ಕಿ ಅಥವಾ ರವೆ) ಉಳಿದಿದ್ದರೆ, ಅದಕ್ಕೆ ಸಂಜೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಅಮ್ಮ ಗುಳಿಅಪ್ಪ ಮಾಡುತ್ತಿದ್ದರು.

ಇನ್ನೊಂದು ರೀತಿಯ ಗುಳಿಅಪ್ಪ ಸೌತೆ ಕಾಯಿ (ಮುಳ್ಳುಸೌತೆ) ಹಾಕಿ ಮಾಡುವುದು. ಇದನ್ನು ಖಾರ ಅಥವಾ ಸಿಹಿಯಾಗಿ ಮಾಡಬಹುದು. ಖಾರ ಗುಳಿಯಪ್ಪ (ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ) ಬೆಳಗ್ಗಿನ ತಿಂಡಿಯಾದರೆ, ಸಿಹಿ ಗುಳಿಅಪ್ಪ ಹೆಚ್ಚಾಗಿ ಸಂಜೆ ಮಾಡುತ್ತಾರೆ. ಸೌತೆಕಾಯಿಯ ಬದಲು ಹಲಸಿನ ಹಣ್ಣು ಅಥವಾ ಬಾಳೆಹಣ್ಣು ಸೇರಿಸಿಕೊಂಡು ಅಕ್ಕಿಯ ಜೊತೆಗೆ ರುಬ್ಬಿ ಕೂಡ ಮಾಡಬಹುದು.

ಗುಳಿಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್
ಸೌತೆ ಕಾಯಿ - ½ ಕಪ್ (ಸಿಪ್ಪೆ ತೆಗೆದು ತುರಿದುಕೊಂಡು)
ಬೆಲ್ಲ - ¼ ಕಪ್
ತೆಂಗಿನ ತುರಿ - ¼ ಕಪ್ (ತುರಿದು)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ- ಸ್ವಲ್ಪ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಇದಕ್ಕೆ ಸೌತೆಕಾಯಿಯ ನೀರನ್ನು ಉಪಯೋಗಿಸಬಹುದು. ಕೊನೆಯಲ್ಲಿ ಬೆಲ್ಲ ಹಾಗು ತೆಂಗಿನ ತುರಿ ಸೇರಿಸಿಕೊಂಡು 1ನಿಮಿಷ ರುಬ್ಬಿಕೊಂಡು ಈ ಮಿಶ್ರಣವನ್ನು ಸೌತೆಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಬಿಸಿ ಯಾಗಿರುವ ಗುಳಿಯಪ್ಪದ ಕಾವಲಿಗೆ ¼ ಚಮಚ ಎಣ್ಣೆ /ತುಪ್ಪ ಹಾಕಿಕೊಂಡು ಗುಳಿಯ ¾ ಭಾಗದ ವರೆಗೆ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಬೇಕು. 3-4 ನಿಮಿಷದ ನಂತರ ಇದನ್ನು ತಿರುವಿ ಹಾಕಿ ಪುನ: 1-2 ನಿಮಿಷ ಬೇಯಿಸಿದರೆ ಗುಳಿಯಪ್ಪ ತಿನ್ನಲು ಸಿದ್ದ. ಇದನ್ನು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಬಹುದು.

Tuesday, July 28, 2009

Gendadadya / Kendadadya - ಕೆಂಡದಡ್ಯ / ಗೆಂಡದಡ್ಯ

Gendadadya or Kendadadya is a traditional delicacy of Mangalore. Genda (=tulu) or Kenda (=Kannada) reffers to ‘burning charcoal’ and Adya is ‘Kadubu or steamed rice dumpling/cake’. The name Kendadadya derives from the way it is prepared. Unlike other preparations, the speciality of this dish is that, it is baked on both the sides (top & bottom).


The main ingredients needed for this dish are cucumber, rice, jaggery, coconut and oil/Ghee. The batter prepared with the mentioned ingredinets is poured on a flat earthen vessel placed on a traditional fire place (called Ole in Kannada /Chula in Hindi). Another earthen vessel filled with hot red burning charcoal is placed just above the batter. The bottom vessel is heated using a slow and steady flame with a non smoky wood.


The blend of oil (preferably coconut oil), coconut, cucumber and Jaggery gives an amazing flavour to this dish. This is a great evening snack along with hot Coffee or Tea. This dish is slowly getting extinct our villages because of the fact that preparation method needs lot of skills interms of two side cooking and time required for the preparation. Here I have tried to adopt a simple and convenient method to make this preparation.





Ingredients:
White Rice - 2 cups
Grated cucumber - ~2 cup (In general, yellowish, ready to ripe cucumbers are being used. I have used 2 green cucumbers)
Jaggery - ½ - ¾ cup scrapped (can be changed according to your taste)
Grated cocnut – ¼ cup
Salt- ½ spoon
Oil or Ghee – 3-4 table spoon

Preperation:
1. Soak rice in sufficient amount of water for 4-5 hours.
2. Peel and grate the cucumber.
3. Squeeze the grated cucmber by hand and take out maximum amount of water. This water can be used for grinding rice.
4. Now grind rice by adding minimum amount of cucumber water. (Once you add Jaggery, the batter turns out watery, so try to use minimum amount of water).
5. To this thick ground rice batter, add scrapped Jaggery, coconut, salt and grated cucumber and mix nicely. The consistency should be thicker than Idly batter.
5. Centre a rack in the oven and preheat the oven to 400F
6. Add 2 tablespoon of oil in a baking pan (I have used 8x4x2 inch pan) and pour the batter. Cover the top with a thin layer of oil. At this point fried onion slices can also be sprinkled at the top.
7. Bake this for 40 - 45 minutes. Kendadadya is ready when it turns golden brown color.
8. Once cooled, Slice it using a long knife, and enjoy with hot tea or Coffee.

Serves- 10-12 Pieces




Sending this to RCI-UDUPI & MANGALOREAN CUISINE hosted by SIA an event started by LAKSHMI.


ಕೆಂಡದಡ್ಯ / ಗೆಂಡದಡ್ಯ [ಕೆಂಡ (=ಕನ್ನಡ); ಗೆಂಡ (=ತುಳು); ಅಡ್ಯ = ಕಡುಬು (ತುಳು)] :
ಮಳೆಗಾಲ ಬಂತೆಂದರೆ ಮಂಗಳೂರಿನಲ್ಲಿ ಹೆಚ್ಚಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿಯೂ ಸೌತೆಕಾಯಿ (ಮಂಗಳೂರುಸೌತೆ), ಮುಳ್ಳುಸೌತೆ (ಸೌತೆಕಾಯಿ), ಬೆಂಡೆಕಾಯಿ, ತೊಂಡೆಕಾಯಿ, ಸೋರೆಕಾಯಿ, ಪಡುವಲಕಾಯಿ, ಹೀರೆಕಾಯಿ, ಅಲಸಂಡೆ ಮುಂತಾದ ತರಕಾರಿಗಳನ್ನು ಬೆಳೆಸುತ್ತಾರೆ. ಚೆನ್ನಾಗಿ ಬಲಿತ (ಹಣ್ಣಾಗಲು ತಯಾರಾದ, ಹಳದಿ ಬಣ್ಣದ) ಮುಳ್ಳುಸೌತೆ ಕೆಂಡದಡ್ಯ ಮಾಡಲು ಉತ್ತಮ. ಈ ತಿಂಡಿಯ ವಿಶೀಷತೆಯೆಂದರೆ, ಇದನ್ನು ಮೇಲೆ ಹಾಗು ಕೆಳಗೆ ಎರಡೂ ಕಡೆಯಿಂದ ಬೇಯಿಸಬೇಕು.
ಸಾಂಪ್ರದಾಯಿಕವಾಗಿ ಕೆಂಡದಡ್ಯ ಮಾಡುವ ವಿಧಾನ ತಲೆತಲಾಂತರಗಳಿಂದ ಬಂದುದು. ಇದನ್ನು ಹೆಚ್ಚಾಗಿ ದಪ್ಪ ತಳದ ಮಣ್ಣಿನ ಪಾತ್ರೆಯಲ್ಲಿ ಮಾಡುತ್ತಾರೆ. ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಮಿಶ್ರಣವನ್ನು ಹರಡಿ, ಈ ಮಿಶ್ರಣದ ಸ್ವಲ್ಪವೇ ಮೇಲ್ಭಾಗದಲ್ಲಿ ಇನ್ನೊಂದು ಪಾತ್ರೆಯನ್ನಿಟ್ಟು ನಿಗಿನಿಗಿಸುವ ಕೆಂಡವನ್ನು ಮೇಲಿನ ಪಾತ್ರೆಯಲ್ಲಿ ತುಂಬುತ್ತಾರೆ. ಇದೇ ಸಮಯದಲ್ಲಿ ಕೆಳಭಾಗದ ಪಾತ್ರೆಯನ್ನು ಸ್ವಲ್ಪ ಉರಿಯಲ್ಲಿ ಅಥವಾ ಕೆಂಡದಲ್ಲಿ ಹದವಾಗಿ ಬೇಯಿಸಲಾಗುತ್ತದೆ.
ಹೀಗೆ ತಯಾರಾದ ಈ ತಿಂಡಿಯ ರುಚಿಯನ್ನು ಓವೆನ್ ನಲ್ಲಿ ಮಾಡಿದರೆ ಬರಲು ಸಾಧ್ಯವಿಲ್ಲವಾದರೂ, ಓವೆನ್ ವಿಧಾನ ನಗರದ ಅಡುಗೆ ಮನೆಯಲ್ಲೂ ಮಾಡಲು ಸುಲಭ.

ಕೆಂಡದಡ್ಯ / ಗೆಂಡದಡ್ಯ ಮಾಡಲು ಬೇಕಾಗುವ ಸಾಮಗ್ರಿಗಳು:

ಅಕ್ಕಿ - 2 ಕಪ್
ಮುಳ್ಳುಸೌತೆ / ಸೌತೆಕಾಯಿ - 2 ಕಪ್, ತುರಿದು
ಬೆಲ್ಲ - ½ - ¾ ಕಪ್ (ಸಿಹಿಗೆ ಹೊಂದಿಕೊಂಡು)
ತೆಂಗಿನಕಾಯಿ - ¼ ಕಪ್, ತುರಿದು
ಉಪ್ಪು - ½ - ಚಮಚ
ಎಣ್ಣೆ / ತುಪ್ಪ - 3-4 ಟೇಬಲ್ ಚಮಚ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ
ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು.
ನಂತರ ತುರಿದ ಸೌತೆ ಕಾಯಿ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಈ ಮಿಶ್ರಣದಲ್ಲಿ ನೀರಿನ ಅಂಶ ಹೆಚ್ಚಾಗದಂತೆ ತುಂಬಾ ಎಚ್ಚರ ವಹಿಸಬೇಕು.
ಒಂದು ಓವೆನ್ ನಲ್ಲಿ ಇಡಬಹುದಾದ ಪಾತ್ರೆಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಂಡು ಕಲಸಿಟ್ಟ ಅಕ್ಕಿ ಮಿಶ್ರಣವನ್ನು ಸುರಿಯಬೇಕು. ಇದರ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಲ್ಲಾ ಭಾಗಕ್ಕೆ ಹರಡಬೇಕು. ಬೇಕಿದ್ದರೆ ಹುರಿದ ಈರುಳ್ಳಿಯನ್ನು ಸೇರಿಸಬಹುದು.
ಈ ಪಾತ್ರೆಯನ್ನು ಓವೆನ್ ನ ಮಧ್ಯದ rackನಲ್ಲಿಟ್ಟು 400Fನಲ್ಲಿ 40-45 ನಿಮಿಷ ಬೇಯಿಸಬೇಕು.
ಬೇಕಿದ್ದರೆ 30ನಿಮಿಷದ ನಂತರ ಕೆಂಡದಡ್ಯವನ್ನು ಮಗುಚಿ ಪುನ ಬೇಯಿಸಬಹುದು.
ಚೆನ್ನಾಗಿ ಬೆಂದ ಕೆಂಡದಡ್ಯದ ಮೇಲ್ಭಾಗ ಹೊಂಬಣ್ಣಕ್ಕೆ ತಿರುಗಿರುತ್ತದೆ. ಸ್ವಲ್ಪ ತಣ್ಣಗಾದ ನಂತರ ಇದನ್ನು ತುಂಡು ಮಾಡಿಕೊಂಡು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಲು ಕೊಡಿ.

ಈ ತಿಂಡಿ ಹಳ್ಳಿಯಲ್ಲೂ ಈಗ ಕಾಣಸಿಗಲು ಕಷ್ಟವಾಗಿದೆ. ಅಂಥಹ ನಶಿಸುತ್ತಿರುವ ತಿಂಡಿ ಕೆಲವಾದರೂ ಅಡುಗೆ ಮನೆಗಳಲ್ಲಿ ಮತ್ತೆ ಕಾಣಬಂದರೆ ತುಂಬಾ ಸಂತೋಷ..
(ಮಂಗಳೂರಿನ ಎ. ಬಿ. ಶೆಟ್ಟಿ ಸರ್ಕಲ್ ಬಳಿ ಇರುವ Kochin Bakeryಯಲ್ಲಿ ಒಳ್ಳೆಯ ಕೆಂಡದಡ್ಯ ಸಿಗುತ್ತದೆ)

Thursday, July 23, 2009

ಕ್ಯಾರೆಟ್ ಹಲ್ವ / CARROT HALWA

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ (ತುರಿದುಕೊಂಡು) – 4 ಕಪ್
ಹಾಲು - 2 ಕಪ್
ಸಕ್ಕರೆ - 1 ಕಪ್
ಏಲಕ್ಕಿ ಪುಡಿ - ಸ್ವಲ್ಪ
ಗೋಡಂಬಿ - 2 ಟೇಬಲ್ ಚಮಚ
ದ್ರಾಕ್ಷಿ - 2 ಟೇಬಲ್ ಚಮಚ
ತುಪ್ಪ - 2 ಟೇಬಲ್ ಚಮಚ

ಮಾಡುವ ವಿಧಾನ :
ಕ್ಯಾರೆಟ್ ನ್ನು ತೊಳೆದು ಒರೆಸಿಕೊಂಡು, ತುರಿದಿಟ್ಟುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿಕೊಂಡು ಗೋಡಂಬಿಯನ್ನು ಹುರಿದು ಬದಿಯಲ್ಲಿಡಿ. ನಂತರ ಇದಕ್ಕೆ ತುರಿದ ಕ್ಯಾರೆಟ್ ನ್ನು ಹಾಕಿ 10 ನಿಮಿಷ ಬಾಡಿಸಿಕೊಳ್ಳಿ. ಈ ತುರಿಗೆ ಹಾಲು ಸೇರಿಸಿ, ಚೆನ್ನಾಗಿ ಬೇಯಲು ಬಿಡಿ. (ಹಾಲು ಮತ್ತು ತುರಿದ ಕ್ಯಾರೆಟ್ ನ್ನು ಕುಕ್ಕರಿನಲ್ಲಿ ಕೂಡ ಬೇಯಿಸಬಹುದು) . ಹಾಲು ಆವಿಯಾದ ನಂತರ ಇದಕ್ಕೆ ಸಕ್ಕರೆ ಮತ್ತು ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಗುಚಿರಿ. ಕೊನೆಯಲ್ಲಿ ಇದು ತಳ ಬಿಡಲು ಶುರುವಾದಾಗ, ಏಲಕ್ಕಿ ಪುಡಿ ಹಾಗು ಗೋಡಂಬಿ ಸೇರಿಸಿ, ಒಲೆಯಿಂದ ಇಳಿಸಿ, ಬೇಕಾದ ಪಾತ್ರೆಗೆ ಹಾಕಿ ಇಡಿರಿ. ಇದನ್ನು ಬಿಸಿಯಾಗಿ ಅಥವಾ ಫ್ರಿಜ್ ನಲ್ಲಿಟ್ಟು ತಂಪಾದ ನಂತರ ಕೂಡ ತಿನ್ನಬಹುದು.

Monday, June 8, 2009

ಖರ್ಜೂರ ಹಲ್ವ / DATE HALWA

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 10
ಹಾಲು - 1 ಕಪ್ (160 ml)
ಸಕ್ಕರೆ - ½ ಕಪ್ (ನಿಮ್ಮ ರುಚಿಗೆ ಹೊಂದಿಕೊಂಡು)
Dry fruits (ಬಾದಾಮಿ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿ-ಎಲ್ಲ ಸಣ್ಣಗೆ ಕಟ್ ಮಾಡಿ) - 1ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ:
ಸಣ್ಣಗೆ ತುಂಡು ಮಾಡಿದ ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ತೆಗೆದಿಡಬೇಕು. ಖರ್ಜೂರದ ಬೀಜ ತೆಗೆದು, ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ದಪ್ಪತಳದ ಪಾತ್ರೆಯಲ್ಲಿ, ಹಾಲು ಮತ್ತು ಖರ್ಜೂರವನ್ನು ಹದಉರಿಯಲ್ಲಿ ಖರ್ಜೂರ ಮೆತ್ತಗೆ ಆಗುವ ತನಕ (10 ನಿಮಿಷ) ಕುದಿಸಬೇಕು. ಇದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ, ತಳ ಬಿಡುವ ತನಕ (20 ನಿಮಿಷ) ಕಾಯಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ, ಹುರಿದಿಟ್ಟ ಡ್ರೈ fruit ಗಳನ್ನು ಸೇರಿಸಿ, ತುಪ್ಪ ಸವರಿದ ಪ್ಲೇಟ್ ನಲ್ಲಿ ಹರಡಿ ಫ್ರೀಜರ್ ನಲ್ಲಿ 30 ನಿಮಿಷ ಇಟ್ಟು, ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿದರೆ, ಖರ್ಜೂರ ಹಲ್ವ ಸಿದ್ದ. ಇದನ್ನು ಫ್ರಿಜ್ ನಲ್ಲಿ ಇಟ್ಟರೆ ತಿನ್ನಲು ತುಂಬ ರುಚಿಯಾಗಿರುತ್ತದೆ.

Thursday, February 5, 2009

ಸೆವೆನ್ ಕಪ್ ಸ್ವೀಟ್ (Seven Cup Sweet)

ಇದು ಒಂದು ಸಿಂಪಲ್ ಆದರೆ ರುಚಿಯಾದ ಸ್ವೀಟ್.

ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು - 1 ಕಪ್
ಹಾಲು - 1 ಕಪ್
ಕಾಯಿ ತುರಿ - 1 ಕಪ್
ತುಪ್ಪ - 1 ಕಪ್
ಸಕ್ಕರೆ - 3 ಕಪ್
ಇದರಲ್ಲಿ 7 ಕಪ್ ಸಾಮಗ್ರಿಗಳು ಸೇರಿರುವ ಕಾರಣ ಬಹುಶ: ಈ ಹೆಸರು ಬಂದಿರಬಹುದು. ಆದರೆ, 3 ಕಪ್ ಸ್ವೀಟ್ ಹಾಕಿದರೆ ತುಂಬ ಸಿಹಿ ಆಗುವುದರಿಂದ 2-21/4 ಕಪ್ ಸಕ್ಕರೆ ಹಾಕಿದರೆ ಸಾಕಾಗುತ್ತದೆ.
ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ, ಹದ ಹುರಿಯಲ್ಲಿ 25-30 ನಿಮಿಷ (ತಳ ಬಿಟ್ಟುಕೊಂಡು ಬರುವ ತನಕ) ಕಾಯಿಸಿಕೊಂಡು, ಕೊನೆಯಲಿ ತುಪ್ಪ ಸವರಿದ ಬಟ್ಟಲಿಗೆ ಹಾಕಬೇಕು. ಸ್ವಲ್ಪ ಬಿಸಿ ಆರಿದ ಮೇಲೆ, ಬೇಕಾದ ಆಕಾರಕ್ಕೆ ತುಂಡು ಮಾಡಿಟ್ಟುಕೊಳ್ಳಬೇಕು.

Thursday, January 15, 2009

ಮಕರ ಸಂಕ್ರಾಂತಿ ಹಬ್ಬ (Makara Sankranthi)


ನಾನು ಈ ಸಲ ಮಾಡಿದ ಸಂಕ್ರಾಂತಿ ಹಬ್ಬದ ಸ್ಪೆಷಲ್ ಅಡುಗೆಗಳು: ಎಳ್ಳು-ಬೆಲ್ಲ, ಸಿಹಿ ಪೊಂಗಲ್, ಕೊಬ್ಬರಿ ಬರ್ಫಿ.

ಎಳ್ಳು-ಬೆಲ್ಲ ಕ್ಕೆ ಬೇಕಾಗುವ ಸಾಮಗ್ರಿಗಳು

ನೆಲಕಡಲೆ- ೧ ಕಪ್
ಹುರಿಗಡಲೆ- ೧ ಕಪ್
ಬೆಲ್ಲ -೧/೨ ಕಪ್
ಕೊಬ್ಬರಿ ತುಂಡು -೧/೨ ಕಪ್ (ಸಣ್ಣಗೆ ಆಯತಾಕಾರದ ತುಂಡುಗಳು)
ಎಳ್ಳು - ೧ ಹಿಡಿ

ಎಳ್ಳನ್ನು ಎಣ್ಣೆ ಹಾಕದೆ ಸಿಡಿಯುವ ತನಕ ಹುರಿದು ತೆಗೆದಿಡಿ.
ನೆಲಕಡಲೆಯನ್ನು ಎಣ್ಣೆ ಹಾಕದೆ ಹುರಿದು ತಣ್ಣಗಾದ ನಂತರ ಸಿಪ್ಪೆಯನ್ನು ತೆಗೆದು, ೨ ಭಾಗ ಮಾಡಿರಿ. ಕೊನೆಯಲ್ಲಿ ಎಳ್ಳು, ನೆಲ ಕಡಲೆ, ಹುರಿಕಡಲೆ, ಬೆಲ್ಲ ಹಾಗು ಕೊಬ್ಬರಿ ತುಂಡನ್ನು ಬೆರೆಸಿದರೆ ಎಳ್ಳು-ಬೆಲ್ಲ ಸಿದ್ದ.

ಸಿಹಿ ಪೊಂಗಲ್ ಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ - ೧/೨ ಕಪ್
ಹೆಸರುಬೇಳೆ- ೧/೨ ಕಪ್
ನೀರು- ೨ ಕಪ್
ಹಾಲು - ೨ ಕಪ್
ಏಲಕ್ಕಿ ಬೀಜ - ೬ (ಪುಡಿ ಮಾಡಿದ್ದು)
ಬೆಲ್ಲ - ೧/೨ ಕಪ್
ತುಪ್ಪ- ೨ ಚಮಚ
ದ್ರಾಕ್ಷಿ ಹಾಗು ಗೋಡಂಬಿ - ಸ್ವಲ್ಪ

ಹೆಸರು ಬೇಳೆ ಯನ್ನು ಘಮ್ ಪರಿಮಳ ಬರುವ ತನಕ ಹುರಿದು, ಅಕ್ಕಿ ಯ ಜೊತೆ ಸೇರಿಸಿ ಕುಕ್ಕರಿನಲ್ಲಿ ನೀರು ಹಾಗು ಹಾಲು ಸೇರಿಸಿ ಬೇಯಲು ಇಡಿ. ಅಕ್ಕಿ ಮತ್ತು ಬೇಳೆ ಬೆಂದ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಬೆಲ್ಲವನ್ನು ಕರಗಲು ಬಿಡಿರಿ. ಬೆಲ್ಲ ಕರಗಿದ ನಂತರ ಬೇಯಿಸಿದ ಅಕ್ಕಿ, ಬೇಳೆಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಬೆರೆಸಿರಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ದ್ರಾಕ್ಷಿ ಯನ್ನು ಸೇರಿಸಿದರೆ, ಸಿಹಿ ಪೊಂಗಲ್ ಸವಿಯಲು ರೆಡಿ.

ತೆಂಗಿನಕಾಯಿ ಬರ್ಫಿ

ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ- ೨ ಕಪ್
ನೀರು - ೨ ಕಪ್
ಹಾಲು - ೫ ಚಮಚ
ಸಕ್ಕರೆ - ೧- ೧೧/೨ ಕಪ್
ಏಲಕ್ಕಿ - ೬ (ಸಣ್ಣಗೆ ಪುಡಿ ಮಾಡಿ)
ತುಪ್ಪ - ೮ ಚಮಚ (೩ tablespoon)

ತೆಂಗಿನ ತುರಿಯನ್ನು ಘಮ್ ಎಂದು ಪರಿಮಳ ಬರುವ ತನಕ ಹುರಿದು, ಬದಿಯಲ್ಲಿಡಿ.
ಒಂದು ಬಾಣಲೆಯಲ್ಲಿ ನೀರು ಮತ್ತು ಸಕ್ಕರೆ ಹಾಕಿಕೊಂಡು ಒಂದೆಳೆ ಪಾಕ ಬರುವ ತನಕ ಕುದಿಸಬೇಕು.
ಈ ಹಂತದಲ್ಲಿ ಹಾಲು ಹಾಕಿ, ಏನಾದರು ಸಕ್ಕರೆಯಲ್ಲಿದ್ದ ಕಸ ಮೇಲೆ ಬಂದರೆ ತೆಗೆಯಬಹುದು.
ಒಂದೆಳೆ ಪಾಕಕ್ಕೆ ತೆಂಗಿನ ತುರಿಯನ್ನು ಸೇರಿಸಿಕೊಂಡು, ತುಪ್ಪ ಸೇರಿಸಿ ಥಳ ಬಿಡುವ ತನಕ (೫ ನಿಮಿಷ) ತಿರುಗಿಸಬೇಕು. ನಂತರ ಇದನ್ನು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ, ಸ್ವಲ್ಪ ತಣ್ಣಗಾದ ನಂತರ ತುಂಡು ಮಾಡಿದರೆ, ಸ್ವೀಟ್ ರೆಡಿ.