My photo
ಕರಾವಳಿ ಹುಡುಗಿ :)

Thursday, January 15, 2009

ಮಕರ ಸಂಕ್ರಾಂತಿ ಹಬ್ಬ (Makara Sankranthi)


ನಾನು ಈ ಸಲ ಮಾಡಿದ ಸಂಕ್ರಾಂತಿ ಹಬ್ಬದ ಸ್ಪೆಷಲ್ ಅಡುಗೆಗಳು: ಎಳ್ಳು-ಬೆಲ್ಲ, ಸಿಹಿ ಪೊಂಗಲ್, ಕೊಬ್ಬರಿ ಬರ್ಫಿ.

ಎಳ್ಳು-ಬೆಲ್ಲ ಕ್ಕೆ ಬೇಕಾಗುವ ಸಾಮಗ್ರಿಗಳು

ನೆಲಕಡಲೆ- ೧ ಕಪ್
ಹುರಿಗಡಲೆ- ೧ ಕಪ್
ಬೆಲ್ಲ -೧/೨ ಕಪ್
ಕೊಬ್ಬರಿ ತುಂಡು -೧/೨ ಕಪ್ (ಸಣ್ಣಗೆ ಆಯತಾಕಾರದ ತುಂಡುಗಳು)
ಎಳ್ಳು - ೧ ಹಿಡಿ

ಎಳ್ಳನ್ನು ಎಣ್ಣೆ ಹಾಕದೆ ಸಿಡಿಯುವ ತನಕ ಹುರಿದು ತೆಗೆದಿಡಿ.
ನೆಲಕಡಲೆಯನ್ನು ಎಣ್ಣೆ ಹಾಕದೆ ಹುರಿದು ತಣ್ಣಗಾದ ನಂತರ ಸಿಪ್ಪೆಯನ್ನು ತೆಗೆದು, ೨ ಭಾಗ ಮಾಡಿರಿ. ಕೊನೆಯಲ್ಲಿ ಎಳ್ಳು, ನೆಲ ಕಡಲೆ, ಹುರಿಕಡಲೆ, ಬೆಲ್ಲ ಹಾಗು ಕೊಬ್ಬರಿ ತುಂಡನ್ನು ಬೆರೆಸಿದರೆ ಎಳ್ಳು-ಬೆಲ್ಲ ಸಿದ್ದ.

ಸಿಹಿ ಪೊಂಗಲ್ ಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ - ೧/೨ ಕಪ್
ಹೆಸರುಬೇಳೆ- ೧/೨ ಕಪ್
ನೀರು- ೨ ಕಪ್
ಹಾಲು - ೨ ಕಪ್
ಏಲಕ್ಕಿ ಬೀಜ - ೬ (ಪುಡಿ ಮಾಡಿದ್ದು)
ಬೆಲ್ಲ - ೧/೨ ಕಪ್
ತುಪ್ಪ- ೨ ಚಮಚ
ದ್ರಾಕ್ಷಿ ಹಾಗು ಗೋಡಂಬಿ - ಸ್ವಲ್ಪ

ಹೆಸರು ಬೇಳೆ ಯನ್ನು ಘಮ್ ಪರಿಮಳ ಬರುವ ತನಕ ಹುರಿದು, ಅಕ್ಕಿ ಯ ಜೊತೆ ಸೇರಿಸಿ ಕುಕ್ಕರಿನಲ್ಲಿ ನೀರು ಹಾಗು ಹಾಲು ಸೇರಿಸಿ ಬೇಯಲು ಇಡಿ. ಅಕ್ಕಿ ಮತ್ತು ಬೇಳೆ ಬೆಂದ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಬೆಲ್ಲವನ್ನು ಕರಗಲು ಬಿಡಿರಿ. ಬೆಲ್ಲ ಕರಗಿದ ನಂತರ ಬೇಯಿಸಿದ ಅಕ್ಕಿ, ಬೇಳೆಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಬೆರೆಸಿರಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ದ್ರಾಕ್ಷಿ ಯನ್ನು ಸೇರಿಸಿದರೆ, ಸಿಹಿ ಪೊಂಗಲ್ ಸವಿಯಲು ರೆಡಿ.

ತೆಂಗಿನಕಾಯಿ ಬರ್ಫಿ

ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ- ೨ ಕಪ್
ನೀರು - ೨ ಕಪ್
ಹಾಲು - ೫ ಚಮಚ
ಸಕ್ಕರೆ - ೧- ೧೧/೨ ಕಪ್
ಏಲಕ್ಕಿ - ೬ (ಸಣ್ಣಗೆ ಪುಡಿ ಮಾಡಿ)
ತುಪ್ಪ - ೮ ಚಮಚ (೩ tablespoon)

ತೆಂಗಿನ ತುರಿಯನ್ನು ಘಮ್ ಎಂದು ಪರಿಮಳ ಬರುವ ತನಕ ಹುರಿದು, ಬದಿಯಲ್ಲಿಡಿ.
ಒಂದು ಬಾಣಲೆಯಲ್ಲಿ ನೀರು ಮತ್ತು ಸಕ್ಕರೆ ಹಾಕಿಕೊಂಡು ಒಂದೆಳೆ ಪಾಕ ಬರುವ ತನಕ ಕುದಿಸಬೇಕು.
ಈ ಹಂತದಲ್ಲಿ ಹಾಲು ಹಾಕಿ, ಏನಾದರು ಸಕ್ಕರೆಯಲ್ಲಿದ್ದ ಕಸ ಮೇಲೆ ಬಂದರೆ ತೆಗೆಯಬಹುದು.
ಒಂದೆಳೆ ಪಾಕಕ್ಕೆ ತೆಂಗಿನ ತುರಿಯನ್ನು ಸೇರಿಸಿಕೊಂಡು, ತುಪ್ಪ ಸೇರಿಸಿ ಥಳ ಬಿಡುವ ತನಕ (೫ ನಿಮಿಷ) ತಿರುಗಿಸಬೇಕು. ನಂತರ ಇದನ್ನು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ, ಸ್ವಲ್ಪ ತಣ್ಣಗಾದ ನಂತರ ತುಂಡು ಮಾಡಿದರೆ, ಸ್ವೀಟ್ ರೆಡಿ.