My photo
ಕರಾವಳಿ ಹುಡುಗಿ :)

Saturday, June 27, 2009

ಚಕ್ಕುಲಿ / CHAKKULI



ಮನೆಯಲ್ಲಿದ್ದಾಗ ಅಮ್ಮ ಮಾಡಿದ ಚಕ್ಕುಲಿಯನ್ನು ಡಬ್ಬ ಖಾಲಿಯಾಗುವ ತನಕ ತಿನ್ನೋದು ಬಿಟ್ರೆ, ಹೇಗೆ ಮಾಡುವುದು ಎಂದು ತಿಳಿಯುವ ಗೋಜಿಗೆ ಹೋಗಿರಲಿಲ್ಲ. ನಂತರ ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿದ್ದಾಗ, ಅಯ್ಯಂಗಾರ್ಸ್ ಬೇಕರಿ, ಶ್ರೀಕೃಷ್ಣ ಬೇಕರಿ, ಮಹಾಲಕ್ಷ್ಮಿ ಸ್ವೀಟ್ಸ್, ಲಾಯಲ್ ವರ್ಲ್ಡ್...ಹೀಗೆ ಎಲ್ಲಾ ಕಡೆ ಒಳ್ಳೆಯ ತಿಂಡಿಗಳು ಸಿಕ್ತಾ ಇದ್ದಾಗ ನಿಜವಾಗಿಯೂ ಮನೆಯಲ್ಲಿ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಕೊನೆಗೂ ಇಲ್ಲಿ ಬಂದ ಮೇಲೆ ಸ್ವಂತ ಮಾಡಿದ್ರೆನೇ ತಿನ್ನೋ ಭಾಗ್ಯ, ಹೀಗೆ ಶುರುವಾಯಿತು ಚಕ್ಕುಲಿ ಪ್ರಯೋಗ.
(ಫ್ರೆಂಡ್ ಕೃಷ್ಣವೇಣಿಯ ಬ್ಲಾಗ್ ನೋಡಿ ಮಾಡಿದ್ದು)
ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 2 ಕಪ್
ಉದ್ದಿನಬೇಳೆ - 1 ಕಪ್ (ಅಥವಾ 1½ ಕಪ್ ನಷ್ಟು ಉದ್ದಿನ ಪುಡಿ)
ಜೀರಿಗೆ - 1 ಚಮಚ
ಬೆಣ್ಣೆ - 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ:
ಅಕ್ಕಿಯನ್ನು 3-4 ಗಂಟೆ ಅಥವಾ ಇಡೀ ರಾತ್ರಿ ನೀರಿನಲ್ಲಿ ನೆನಸಿಡಬೇಕು. ನಂತರ ಅದನ್ನು ತೊಳೆದುಕೊಂದು, ಸ್ವಲ್ಪ ನೀರು ಸೇರಿಸಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಉದ್ದಿನಬೇಳೆಯನ್ನು ಘಂ ಎನ್ನುವ ತನಕ ಹುರಿದುಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ಕೊನೆಯಲ್ಲಿ ರುಬ್ಬಿದ ಅಕ್ಕಿಗೆ, ಉದ್ದಿನಬೇಳೆ ಪುಡಿ, ಬೆಣ್ಣೆ, ಜೀರಿಗೆ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 30 ನಿಮಿಷ ಮುಚ್ಚಿ ಇಡಬೇಕು.
ಈ ಹಿಟ್ಟನ್ನು ಚಕ್ಕುಲಿ ಅಚ್ಚಿನಲ್ಲಿ ತುಂಬಿಸಿ, ಒಂದು wax ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ನ ಮೇಲೆ ಒತ್ತಿಕೊಂಡು, ಎಣ್ಣೆಯಲ್ಲಿ ಕರಿದರೆ, ಚಕ್ಕುಲಿ ಸಿದ್ದ.

Thursday, June 18, 2009

ಕಲ್ಲಂಗಡಿ ಹಣ್ಣಿನ ಸಿಪ್ಪೆ ಪಲ್ಯ



ನನ್ನ ಅಮ್ಮ ಈ ಪಲ್ಯ ಮಾಡ್ತಿದ್ದರು. ಆದ್ರೆ ಈ ಪಲ್ಯ ಬೇರೆ ಕಡೆಯಲ್ಲೂ ಫೇಮಸ್ ಇದೆ ಎಂದು ಪಾಕಚಂದ್ರಿಕೆ ಯಲ್ಲಿ ನೋಡಿ ತಿಳಿಯಿತು. ಕಲ್ಲಂಗಡಿ ಹಣ್ಣು ತಿಂದಾದ ನಂತರ ಉಳಿಯುವ ಸಿಪ್ಪೆಯನ್ನು ಬಳಸಿ ಈ ಪಲ್ಯವನ್ನು ಮಾಡಬಹುದು.

ಬೇಕಾಗುವ ಸಾಮಗ್ರಿಗಳು :
ಕಲ್ಲಂಗಡಿ ಹಣ್ಣಿನ ಸಿಪ್ಪೆ - 2-3 ಕಪ್ (ಸಿಪ್ಪೆಯನ್ನು ಒಂದು ಸಲ ನೀರಲ್ಲಿ ತೊಳೆದು ಸಣ್ಣಗೆ ಹೆಚ್ಚಬೇಕು)
ಈರುಳ್ಳಿ - ಸ್ವಲ್ಪ (ಸಣ್ಣಗೆ ಕಟ್ ಮಾಡಿ)
ಟೊಮೇಟೊ - ಸ್ವಲ್ಪ (ಸಣ್ಣಗೆ ಕಟ್ ಮಾಡಿ)

ಮಸಾಲೆಗೆ
ಕೊತ್ತಂಬರಿ ಪುಡಿ - ¾ ಚಮಚ
ಜೀರಿಗೆ ಪುಡಿ - ¾ ಚಮಚ
ಮೆಣಸಿನ ಪುಡಿ (ಬ್ಯಾಡಗಿ) - ¾ ಚಮಚ
ಅರಿಶಿನ ಪುಡಿ - ಸ್ವಲ್ಪ
ತೆಂಗಿನ ಕಾಯಿ ತುರಿ - ¾ ಕಪ್
ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರೆಣೆಗೆ
ಎಣ್ಣೆ, ಸಾಸಿವೆ, ಉದ್ದಿನಬೇಳೆ, ಬೆಳ್ಳುಳ್ಳಿ, ಕರಿಬೇವಿನ ಎಲೆ.

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಒಗ್ಗರಣೆ ಸೇರಿಸಿ, ಕೊನೆಯಲ್ಲಿ ಈರುಳ್ಳಿ ಹಾಕಿ ಸ್ವಲ್ಪ ಹುರಿಯಬೇಕು. ನಂತರ ಟೊಮೇಟೊ (ಅಥವಾ ಸ್ವಲ್ಪ ಹುಣಸೆ ರಸ) , ಹೆಚ್ಚಿದ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗು ¼ ಕಪ್ ನೀರು ಸೇರಿಸಿ, 10-15 ನಿಮಿಷ ಹದ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ ನೀರು ಆವಿಯಾದ ನಂತರ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿ, ಉಪ್ಪು, ಕಾಯಿತುರಿ ಸೇರಿಸಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಒಲೆಯಿಂದ ಇಳಿಸಿದರೆ ಪಲ್ಯ ಸಿದ್ದ.

Monday, June 8, 2009

ಖರ್ಜೂರ ಹಲ್ವ / DATE HALWA

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 10
ಹಾಲು - 1 ಕಪ್ (160 ml)
ಸಕ್ಕರೆ - ½ ಕಪ್ (ನಿಮ್ಮ ರುಚಿಗೆ ಹೊಂದಿಕೊಂಡು)
Dry fruits (ಬಾದಾಮಿ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿ-ಎಲ್ಲ ಸಣ್ಣಗೆ ಕಟ್ ಮಾಡಿ) - 1ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ:
ಸಣ್ಣಗೆ ತುಂಡು ಮಾಡಿದ ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ತೆಗೆದಿಡಬೇಕು. ಖರ್ಜೂರದ ಬೀಜ ತೆಗೆದು, ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ದಪ್ಪತಳದ ಪಾತ್ರೆಯಲ್ಲಿ, ಹಾಲು ಮತ್ತು ಖರ್ಜೂರವನ್ನು ಹದಉರಿಯಲ್ಲಿ ಖರ್ಜೂರ ಮೆತ್ತಗೆ ಆಗುವ ತನಕ (10 ನಿಮಿಷ) ಕುದಿಸಬೇಕು. ಇದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ, ತಳ ಬಿಡುವ ತನಕ (20 ನಿಮಿಷ) ಕಾಯಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ, ಹುರಿದಿಟ್ಟ ಡ್ರೈ fruit ಗಳನ್ನು ಸೇರಿಸಿ, ತುಪ್ಪ ಸವರಿದ ಪ್ಲೇಟ್ ನಲ್ಲಿ ಹರಡಿ ಫ್ರೀಜರ್ ನಲ್ಲಿ 30 ನಿಮಿಷ ಇಟ್ಟು, ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿದರೆ, ಖರ್ಜೂರ ಹಲ್ವ ಸಿದ್ದ. ಇದನ್ನು ಫ್ರಿಜ್ ನಲ್ಲಿ ಇಟ್ಟರೆ ತಿನ್ನಲು ತುಂಬ ರುಚಿಯಾಗಿರುತ್ತದೆ.

Tuesday, June 2, 2009

ಮೊಳಕೆ ಕಾಳು - ಬಸಳೆ ಸೊಪ್ಪು ಸಾಂಬಾರ್


ಬೇಕಾಗುವ ಸಾಮಗ್ರಿಗಳು:
ಬಸಳೆ - ½ ಕೆ. ಜಿ.
ಮೊಳಕೆ ಕಾಳು (ಹೆಸರು ಕಾಳು ಅಥವಾ ಹುರುಳಿ ಕಾಳು)- 1 ಕಪ್
ಈರುಳ್ಳಿ - ¼ ಕಪ್
ಟೊಮೇಟೊ - ¼ ಕಪ್
ಹುಣಸೆಹಣ್ಣಿನ ರಸ - ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಬೆಲ್ಲ - ಸ್ವಲ್ಪ (ಬೇಕಿದ್ದರೆ ಮಾತ್ರ)
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ- ಎಣ್ಣೆ, ಕರಿಬೇವು, ಸಾಸಿವೆ, ಬೆಳ್ಳುಳ್ಳಿ,

ಮಸಾಲೆಗೆ:
ತೆಂಗಿನಕಾಯಿ ತುರಿ - 1 ಕಪ್
ಬ್ಯಾಡಗಿ ಮೆಣಸು - 5-6
ಕೊತ್ತಂಬರಿ ಬೀಜ - 2 ಚಮಚ
ಜೀರಿಗೆ - 1 ಚಮಚ
ಮೆಂತೆ - 6-8 ಬೀಜ
ಹಳದಿ ಪುಡಿ - ಚಿಟಿಕೆ

ಮಾಡುವ ವಿಧಾನ:
ಬಸಳೆ ಸೊಪ್ಪನ್ನು ದಂಟಿನಿಂದ ಬೇರ್ಪಡಿಸಿ, ತೊಳೆದು ಇಟ್ಟುಕೊಳ್ಳಬೇಕು.
ಬಸಳೆ ದಂಟನ್ನು 2-3 ಇಂಚು ಉದ್ದದ ತುಂಡು ಮಾಡಿಕೊಂಡು, ಮೊಳಕೆ ಕಾಳು ಸೇರಿಸಿ, ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.
ಮಸಾಲೆಯ ಎಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಪರಿಮಳ ಬರುವ ತನಕ ಹುರಿಯಬೇಕು. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೆಣಸನ್ನು ಹುರಿಯಬೇಕು. ಈ ಮಸಾಲೆ ಸಾಮಗ್ರಿಗಳನ್ನು ತೆಂಗಿನತುರಿ ಸೇರಿಸಿ , ಸ್ವಲ್ಪ ನೀರು ಸೇರಿಸಿಕೊಂಡು ರುಬ್ಬಿಟ್ಟು ಕೊಳ್ಳಬೇಕು.
ಬೇಯಿಸಿದ ದಂಟು, ಕಾಳು, ತುಂಡು ಮಾಡಿದ ಸೊಪ್ಪು, ಟೊಮೇಟೊ, ಈರುಳ್ಳಿ, ಹುಣಸೆ ರಸ, ಉಪ್ಪು, ಸ್ವಲ್ಪ ಬೆಲ್ಲ ಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ರುಬ್ಬಿದ ಮಸಾಲೆ ಸೇರಿಸಿ, 5-10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಒಲೆಯಿಂದ ಇಳಿಸಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿ.