My photo
ಕರಾವಳಿ ಹುಡುಗಿ :)

Friday, December 25, 2009

ಖರ್ಜೂರ ಕೇಕ್ ಮತ್ತು ಬಾಳೆಹಣ್ಣು ಕೇಕ್ (DATE CAKE & BANANA NUT CAKE) - EGGLESS

ಖರ್ಜೂರ ಕೇಕ್ :

ಈ ಖರ್ಜೂರದ ಕೇಕ್ ರೆಸಿಪಿ ಇಲ್ಲಿಂದ. ಇದು ನಮ್ಮ ಮನೆಯಲ್ಲಿ ಫೇವರಿಟ್ ಕೇಕ್ ಹಾಗು ನನ್ನ ಹೆಚ್ಚಿನ ಫ್ರೆಂಡ್ಸ್ ಗಳಿಗೆ ಇಷ್ಟವಾದ ಕೇಕ್. ಮಾಡಲು ಸುಲಭ, ಹಾಗು ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 18 (ಬೀಜ ತೆಗೆದು)
ಹಾಲು - ¾ ಕಪ್
ಸಕ್ಕರೆ - ¾ ಕಪ್
ಮೈದಾ ಹಿಟ್ಟು - 1 ಕಪ್
ಎಣ್ಣೆ / ಬೆಣ್ಣೆ - ¼ ಕಪ್
ಬೇಕಿಂಗ್ ಸೋಡಾ - 1 ಚಮಚ
Dry Fruits (ಗೋಡಂಬಿ, ಒಣ ದ್ರಾಕ್ಷಿ, ವಾಲ್ ನಟ್ಸ್) - ¼ ಕಪ್



ಮಾಡುವ ವಿಧಾನ:
ಹಾಲಿನಲ್ಲಿ ಖರ್ಜೂರವನ್ನು ಸೇರಿಸಿಕೊಂಡು ಎರಡು ನಿಮಿಷ ಕುದಿಸಿರಿ. ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡು, ಈ ಮಿಶ್ರಣದೊಂದಿಗೆ ಸಕ್ಕರೆ, ಎಣ್ಣೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಜರಡಿಯಾಡಿಸಿದ ಮೈದಾವನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ನಿಧಾನದಲ್ಲಿ ಬೆರೆಸಿರಿ. ಕೊನೆಯಲ್ಲಿ ಬೇಕಿಂಗ್ ಸೋಡಾ, ತುಂಡು ಮಾಡಿಟ್ಟ Dry fruits ಗಳನ್ನು ಸೇರಿಸಿ.


ಒಂದು ಬೇಕಿಂಗ್ ಪಾನ್ ಗೆ ಬೇಕಿಂಗ್ sprayಯನ್ನು ಸವರಿಕೊಂಡು ನಂತರ ಕೇಕ್ ನ ಮಿಶ್ರಣವನ್ನು ಸುರಿದು ಓವೆನ್ ನಲ್ಲಿ ಮಧ್ಯದ rackನಲ್ಲಿಟ್ಟು 350 F ನಲ್ಲಿ 35- 40 ನಿಮಿಷ ಬೇಯಿಸಿರಿ. ಕೇಕ್ ನ ಒಳಗಡೆ ಒಂದು ಚಾಕು ಅಥವಾ tooth pickನ್ನು ಹಾಕಿದಾಗ ಅದು ಸರಾಗವಾಗಿ ಬಂದರೆ ಕೇಕ್ ರೆಡಿಯಾಗಿದೆ. ಇದನ್ನು ಅರ್ಧ ಗಂಟೆ ತಣ್ಣಗಾಗಲು ಬಿಟ್ಟು ನಂತರ ಬೇಕಾದ ರೀತಿಯಲ್ಲಿ ತುಂಡು ಮಾಡಿಕೊಂಡು ತಿನ್ನಬಹುದು.

ಬೇಕಿಂಗ್ ಪಾನ್ ಇಲ್ಲದಿದ್ದರೆ ಯಾವುದೇ ಪಿಂಗಾಣಿಯ Oven safe ಪಾತ್ರೆಯಲ್ಲಿ ಕೇಕ್ ನ್ನು ಮಾಡಬಹುದು.
ಬೇಕಿಂಗ್ sprayಯ ಬದಲು ಪಾತ್ರೆಗೆ (ಒಂದು aluminium foil ಹಾಕಿ ಅಥವಾ ಹಾಕದೆ) ಎಣ್ಣೆ ಸವರಿಕೊಂಡು ಇದರ ಮೇಲೆ ಸ್ವಲ್ಪ ಮೈದಾಪುಡಿಯನ್ನು ಹರಡಿ ಕೊಂಡು ನಂತರ ಪಾತ್ರೆಯನ್ನು ಕವುಚಿ ಹಾಕಿ ಹೆಚ್ಚಾಗಿರುವ ಮೈದಾ ಪುಡಿಯನ್ನು ತೆಗೆದರೆ ಬೇಕಿಂಗ್ ಪಾನ್ ಸಿದ್ದ. ನಂತರ ಇದರಲ್ಲಿ ಕೇಕ್ ಮಿಶ್ರಣವನ್ನು ಹಾಕಬೇಕು. ಕೇಕ್ ಮಿಕ್ಸ್ ಕೊನೆಯಲ್ಲಿ ಇಡ್ಲಿ ಹಿಟ್ಟಿ ಗಿಂತಲೂ ಹೆಚ್ಚು ಗಟ್ಟಿಯಾಗಿರಬೇಕು.
ಬೇಕಿಂಗ್ ಪಾನ್ ನಲ್ಲಿ 2-2½ ಇಂಚು ದಪ್ಪಕ್ಕೆ ಹಿಟ್ಟು ಹಾಕಿದರೆ ಕೇಕ್ ಚೆನ್ನಾಗಿ ಬರುತ್ತದೆ. ಕೇಕ್ ಗೆ white sugar ಮತ್ತು brown sugarನ್ನು ಸಮಪ್ರಮಾಣದಲ್ಲಿ ಹಾಕಿದರೆ ಕೇಕ್ ಹೆಚ್ಚು ರುಚಿಯಾಗುತ್ತದೆ.

ಬಾಳೆಹಣ್ಣು ಕೇಕ್ / BANANA – NUT CAKE

ಬೇಕಾಗುವ ಸಾಮಗ್ರಿಗಳು:
ಬಾಳೆಹಣ್ಣು - 3 (ಪಚ್ಚೆ ಬಾಳೆ)
ಮೈದಾ ಹಿಟ್ಟು - 1¼ ಕಪ್
ಸಕ್ಕರೆ - ½ ಕಪ್
ಎಣ್ಣೆ / ಬೆಣ್ಣೆ - ¼ ಕಪ್
ಬೇಕಿಂಗ್ ಸೋಡಾ - 1 ಚಮಚ

ವೆನಿಲ್ಲಾ ಎಸೆನ್ಸ್ - 1 ಚಮಚ
ಹಾಲು - ¼ ಕಪ್
Dry Fruits (ಗೋಡಂಬಿ, ಒಣ ದ್ರಾಕ್ಷಿ, ವಾಲ್ ನಟ್ಸ್) - ¼ ಕಪ್


ಮಾಡುವ ವಿಧಾನ:
ಸಿಪ್ಪೆ ಸುಲಿದ ಬಾಳೆಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿರಿ.
ನಂತರ ಒಂದು ಬೇಕಿಂಗ್ ಪಾನ್ ನಲ್ಲಿ ಹಾಕಿ ಓವೆನ್ನಲ್ಲಿ 350 F ನಲ್ಲಿ 35- 40 ನಿಮಿಷ ಬೇಯಿಸಿರಿ.

ತಣ್ಣಗಾದ ನಂತರ ಬೇಕಾದ ರೀತಿಯಲ್ಲಿ ತುಂಡು ಮಾಡಿಕೊಂಡು ತಿನ್ನಬಹುದು.

Tuesday, December 8, 2009

ನೀರು ದೋಸೆ ಮತ್ತು ಸೌತೆಕಾಯಿ ದೋಸೆ (neer Dose & Southekayi Dose)

ನೀರು ದೋಸೆ ಮಂಗಳೂರಿಗರ ಫೇವರಿಟ್ ದೋಸೆ. ಇದರ ಹಿಟ್ಟು ಉಳಿದ ದೋಸೆ ಹಿಟ್ಟಿಗಿಂತ ತುಂಬಾ ತೆಳ್ಳಗಾಗಿರುವ ಕಾರಣ ಈ ಹೆಸರು. ಇನ್ನೊಂದು ವಿಶೇಷ ಎಂದರೆ ಇದನ್ನು ಅಕ್ಕಿ ರುಬ್ಬಿದ ತಕ್ಷಣವೇ ಮಾಡಬೇಕು.


ಸಾಮಗ್ರಿಗಳು:
ಅಕ್ಕಿ – 1 ಕಪ್
ತೆಂಗಿನ ತುರಿ – ¼ ಕಪ್ (ತೆಂಗಿನ ತುರಿ ಸೇರಿಸದೆ ಕೂಡ ಮಾಡಬಹುದು)
ಉಪ್ಪು – ¾ ಚಮಚ / ರುಚಿಗೆ ತಕ್ಕಷ್ಟು
ನೀರು – 1 ½ ಕಪ್ ನಷ್ಟು

ವಿಧಾನ:

ಅಕ್ಕಿಯನ್ನು ಮುಳುಗವಷ್ಟು ನೀರಿನಲ್ಲಿ 6-8 ಗಂಟೆ ನೆನೆಸಿರಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ತೆಂಗಿನ ತುರಿ ಹಾಗು ½ ಕಪ್ ನಷ್ಟು ನೀರು ಸೇರಿಸಿಕೊಂಡು ಮಿಕ್ಸಿಯಲ್ಲಿ ನಯವಾಗಿ ರುಬ್ಬಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗು 1 ಕಪ್ ನಷ್ಟು ನೀರು ಸೇರಿಸಿ ಹಿಟ್ಟನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ.

ಎಣ್ಣೆ ಸವರಿದ ಕಾದ ಕಾವಲಿಯಲ್ಲಿ ಒಂದು ಸೌಟು ಹಿಟ್ಟನ್ನು ತೆಗೆದುಕೊಂಡು ದೋಸೆಯನ್ನು ಮಾಡಬೇಕು. ಈ ದೋಸೆಯನ್ನು ಪುನ: ಮಗುಚಿ ಹಾಕುವ ಅಗತ್ಯ ಇರುವುದಿಲ್ಲ.

ಸಾಮಾನ್ಯವಾಗಿ, ನೀರುದೋಸೆ ಮಾಡುವಾಗ ಕಾವಲಿಯ ಒಂದು ಕೊನೆಯಲ್ಲಿ ಹಿಟ್ಟನ್ನು ಹಾಕಿ, ಕಾವಲಿಯನ್ನು ಕೈಯಿಂದ ಅಲ್ಲಾಡಿಸಿದರೆ ದೋಸೆಹಿಟ್ಟು ಇಡೀ ಕಾವಲಿಯಲ್ಲಿ ಹರಡಿಕೊಳ್ಳುತ್ತದೆ. ಈ ರೀತಿ ಮಾಡಲು ಹೊಸಬರಿಗೆ ಕಷ್ಟವಾದುದರಿಂದ, ದೋಸೆ ಹಿಟ್ಟನ್ನು ಮಧ್ಯದಲ್ಲಿ ಉಳಿದ ದೋಸೆಯಂತೆಯೇ ಹಾಕಿಕೊಂಡು ಮಾಡಬಹುದು. ಅದರ ಸಣ್ಣ ತುಣುಕನ್ನು ಈ ಕೊಂಡಿಯಲ್ಲಿ ನೋಡಬಹುದು.



A Variation : ಸೌತೆಕಾಯಿ ದೋಸೆ

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 2 ಕಪ್

1 ಸಣ್ಣ ಸೌತೆಕಾಯಿ(=ಮುಳ್ಳುಸೌತೆಕಾಯಿ)
ಉಪ್ಪು – ರುಚಿಗೆ ತಕ್ಕಷ್ಟು
ನೀರು

ವಿಧಾನ :
ಎಳೆ ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಅಕ್ಕಿಯೊಂದಿಗೆ ರುಬ್ಬಿಕೊಂಡು, ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಬೇಕು. ಸೌತೆಕಾಯಿಯು ದೋಸೆಗೆ ಒಳ್ಳೆಯ ಪರಿಮಳ ಹಾಗು ರುಚಿಯನ್ನು ಕೊಡುತ್ತದೆ.

ಹೆಚ್ಚಾಗಿ ಈ ದೋಸೆಗಳನ್ನು ತೆಂಗಿನ ಕಾಯಿ ಚಟ್ನಿ, ಅಥವಾ ಕಾಯಿತುರಿ-ಬೆಲ್ಲದ ಮಿಶ್ರಣದೊಂದಿಗೆ ತಿನ್ನುವುದು ವಾಡಿಕೆ.

ಒಂದು ವರ್ಷದ ಹಿಂದೆ ಈ " ನನ್- ಪ್ರಪಂಚ" ವನ್ನು ಕುತೂಹಲ, ಉತ್ಸಾಹದಿಂದ ಶುರು ಮಾಡಿದ್ದೆ. ಇದು ನನಗೆ ಹಲವಾರು ಸಹೃದಯಿ ಬ್ಲಾಗ್ ಗೆಳೆಯರನ್ನು ಪರಿಚಯಿಸಿದೆ. ಈ ಮೂಲಕ ನನ್ನ ಸಣ್ಣ ಪ್ರಯತ್ನವು ಸ್ವಲ್ಪವಾದರೂ ಉಪಯೋಗವಾದಲ್ಲಿ ತುಂಬಾ ಸಂತೋಷ..ಇದುವರೆಗೆ ಪ್ರೋತ್ಸಾಹಿಸಿದ ಎಲ್ಲ ಆತ್ಮೀಯರಿಗೆ ನಾನು ಆಭಾರಿ. ಹಾಗೆಯೇ ಮುಂದೆಯೂ ಕೂಡ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ವನಿತಾ.