ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು:ಕಡಲೆಬೇಳೆ - 1 ಕಪ್
ನೀರು - ½ ಕಪ್
ಬೆಲ್ಲದ ಪುಡಿ - 1 ಕಪ್
ಏಲಕ್ಕಿ ಪುಡಿ - ½ ಚಮಚ
ಕನಕ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಮೈದಾ- 1½ ಕಪ್
ನೀರು - ¾ -1 ಕಪ್
ಹಳದಿ ಪುಡಿ - ಚಿಟಿಕೆ
ಉಪ್ಪು - ಚಿಟಿಕೆ
ಎಣ್ಣೆ - 2-3 ಟೇಬಲ್ ಚಮಚ
ಹೂರಣ ತಯಾರಿಸುವ ವಿಧಾನ:
ಕಡಲೇಬೇಳೆಯನ್ನು 1-2 ಘಂಟೆ ನೀರಿನಲ್ಲಿ ನೆನೆಸಿಡಿ.
ನಂತರ ಇದನ್ನು ತೊಳೆದುಕೊಂಡು ½ ಕಪ್ ನೀರು ಸೇರಿಸಿ, ಕುಕ್ಕರಿನಲ್ಲಿ ಬೇಯಲು ಇಡಿ.
ಕುಕ್ಕರಿನ steam ಬಂದ ನಂತರ weight ಹಾಕಿ ಸಣ್ಣ ಉರಿಯಲ್ಲಿ (whistle ಬರದಂತೆ) 15-20 ನಿಮಿಷ ಬೇಯಿಸಿ. ತಣ್ಣಗಾದ ನಂತರ ಬೇಯಿಸಿದ ಕಡಲೇಬೇಳೆಗೆ ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ, 12-15 ಉಂಡೆ ಮಾಡಿಟ್ಟುಕೊಳ್ಳಿ.
ಕನಕ ತಯಾರಿಸುವ ವಿಧಾನ:
ಮೈದಾ ಹಿಟ್ಟಿಗೆ, ಉಪ್ಪು, ಹಳದಿ ಪುಡಿ ಸೇರಿಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿ. ಕೊನೆಯಲ್ಲಿ ಇದಕ್ಕೆ ಎಣ್ಣೆ ಸೇರಿಸಿ ½ ಘಂಟೆ ಮುಚ್ಚಿಡಿ. ಇದರಿಂದ 12-15 ಉಂಡೆ ಮಾಡಿ.
ಹೋಳಿಗೆ ತಯಾರಿಸುವ ವಿಧಾನ:
ಕೈಗೆ ಎಣ್ಣೆ ಹಚ್ಚಿಕೊಂಡು ಕನಕದ ಒಂದು ಉಂಡೆ ತೆಗೆದುಕೊಂಡು ಅಂಗೈ ಯಲ್ಲಿ ಸ್ವಲ್ಪ ತಟ್ಟಿ, ಇದರಲ್ಲಿ ಒಂದು ಹೂರಣದ ಉಂಡೆಯನ್ನು ತುಂಬಿಸಿ ಇಡಿ.
ಎಲ್ಲಾ ಉಂಡೆಗಳಿಗೂ ಇದೇ ತರ ತುಂಬಿಸಿಕೊಂಡು ಎಣ್ಣೆ ಸವರಿದ ಪ್ಲೇಟ್ ನಲ್ಲಿಡಿ. ಈ ಉಂಡೆಗಳನ್ನು ಮೈದಾ ಪುಡಿ ಬಳಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಚಪಾತಿಯಂತೆ ಲಟ್ಟಿಸಿ.
ಲಟ್ಟಿಸಿದ ಹೋಳಿಗೆಯನ್ನು ಹದ ಬಿಸಿಯಾದ ಕಬ್ಬಿಣದ ಕಾವಲಿಯಲ್ಲಿ ಮೇಲಿನಿಂದ ಸ್ವಲ್ಪ ತುಪ್ಪ ಸವರಿಕೊಂಡು ಎರಡೂ ಕಡೆ ಸ್ವಲ್ಪ ಕೆಂಪಾಗುವ ತನಕ ಬೇಯಿಸಿ, ಬಿಸಿಯಾರುವ ತನಕ ಹೋಳಿಗೆಯನ್ನು ಒಂದು ಪೇಪರ್ ನಲ್ಲಿ ಹರಡಿಡಿ. ನಂತರ ಇದನ್ನು ತುಪ್ಪ ಅಥವಾ ತೆಂಗಿನ ಹಾಲಿನೊಂದಿಗೆ ಸವಿಯಲು ಕೊಡಿ.
ಮಂಗಳೂರು ಕಡೆಯಲ್ಲಿ ಹೆಚ್ಹಾಗಿ ಹೋಳಿಗೆಯನ್ನು ಮದುವೆ ಸಮಾರಂಭಗಳಲ್ಲಿ ಮಾಡುತ್ತಾರೆ. ಈ ಹೋಳಿಗೆಗಳು ತುಂಬಾ ತೆಳ್ಳಗೆ ಪದರ ಪದರ ವಾಗಿರುತ್ತದೆ. ಕರ್ನಾಟಕದ ಉಳಿದ ಭಾಗದಲ್ಲಿ ಹೋಳಿಗೆಗೆ 'ಒಬ್ಬಟ್ಟು' ಎಂದು ಕರೆಯುತ್ತಾರೆ. ಇಲ್ಲಿ ಬೆಲ್ಲದೊಂದಿಗೆ ಹೂರಣವನ್ನು ಬೇಯಿಸಿ, ನೀರು ಆರಿದ ನಂತರ ಉಪಯೋಗಿಸುತ್ತಾರೆ. ಇದನ್ನು ಕಡಲೆಬೇಳೆ ಅಥವಾ ತೊಗರಿ ಬೇಳೆಯಿಂದಲೂ ಮಾಡಬಹುದು. ಬೇಳೆಯನ್ನು ಹೆಚ್ಚಿನ ನೀರಿನಲ್ಲಿ ಬೇಯಿಸಿ, ನಂತರ ಈ ನೀರನ್ನು ತೆಗೆದುಕೊಂಡು ರುಚಿಯಾದ ಒಬ್ಬಟ್ಟು ಸಾರು / ಕಟ್ಟು ಸಾರನ್ನು ಕೂಡ ಮಾಡುತ್ತಾರೆ.
ನನ್- ಪ್ರಪಂಚದ ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ಹೊಸ ವರುಷ ಎಲ್ಲರಿಗೂ ಹರುಷ ತರಲಿ :)
ವನಿತಾ.



