My photo
ಕರಾವಳಿ ಹುಡುಗಿ :)

Wednesday, April 28, 2010

ಕಣ್ಣಿಗೆ ಹಬ್ಬ - ನಿಸರ್ಗ ಸೃಷ್ಟಿಯ ಗುಹೆಗಳು

ಸಲ ಅಡುಗೆ ಮನೆ ಬಿಟ್ಟು, ಸ್ವಲ್ಪ ಬೇರೆ ಬರೆಯೋಣ ಅಂತ ಅನ್ನಿಸ್ತು...ಅದಕ್ಕೆ ಇಲ್ಲಿನ (ಟೆಕ್ಸಾಸ್) ಗುಹೆಗಳನ್ನು ಪರಿಚಯಿಸುತ್ತಿದ್ದೇನೆ. ಟೆಕ್ಸಾಸ್ ಉರಿ ಬಿಸಿಲಿಗೆ ಹೆಸರು ವಾಸಿಯಾದರೂ ಕೂಡ, ಕಣ್ಣಿಗೆ ಮುದ ನೀಡುವ ಸುಂದರ ಗುಹೆಗಳು ಇಲ್ಲಿನ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಗುಹೆಗಳಿಗೆ ಮಿಲಿಯನ್ ವರ್ಷಗಳ ಇತಿಹಾಸವಿದೆ.


ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಭೂಮಿಯ ಪದರದ ನಡುವಿರುವ ಸುಣ್ಣದ ಕಲ್ಲಿನ (CaCO3) ಸಂಧಿಗಳಿಂದ ನುಸುಳುವ ಕಾರ್ಬೋನಿಕ್ ಆಮ್ಲ (H2CO3) ನಿಧಾನವಾಗಿ ಸುಣ್ಣದ ಕಲ್ಲನ್ನು ಕರಗಿಸುತ್ತಾ ಸಂಧಿಗಳನ್ನು ಅಗಲವಾಗಿಸುತ್ತ, ಗುಹೆಗಳ ನಿರ್ಮಾಣವಾಗುತ್ತದೆ. ವಾತಾವರಣ ಹಾಗೂ ಮಣ್ಣಿನಲ್ಲಿರುವ ಅಂಗಾರಾಮ್ಲ (CO2) ನೀರಿನೊಂದಿಗೆ (H2O) ಕರಗಿದಾಗ ಕಾರ್ಬೋನಿಕ್ ಆಮ್ಲ ತಯಾರಾಗುತ್ತದೆ. ಈ ಗುಹೆಗಳ ರಚನೆ ಬಹಳ ನಿಧಾನವಾದ ಪ್ರಕ್ರಿಯೆ. ಒಂದು ಅಂದಾಜಿನ ಪ್ರಕಾರ ಒಬ್ಬ ಮನುಷ್ಯ ನುಸುಳಬಹುದಾದ ಗುಹೆಯ ರಚನೆಗೆ ಸುಮಾರು ಒಂದು ಮಿಲಿಯ ವರ್ಷ ತಗಲುತ್ತದೆ.


First ಗೆ ಗುಹೆ ಯನ್ನು ಕಂಡು ಹಿಡಿದಾ ಹಗ್ಗದ ಮೂಲಕ ಕೆಳಕ್ಕಿಳಿಯಲು ಉಪಯೋಗಿಸುತ್ತಿದ್ದ ದಾರಿ. ಈಗ ಪಕ್ಕದಲ್ಲೇ ಮೆಟ್ಟಲುಗಳನ್ನು ಕಾಣಬಹುದು.



ಅದರಲ್ಲೂ ಸುಂದರವಾದ ಗುಹೆಯ ಒಳಗಿನ ರಚನೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.ಅಂತೆಯೇ ಗುಹೆಯ ಒಳಗೆ ಜಿನುಗುವ ನೀರಿನ ಹನಿಗಳು ತೊಟ್ಟಿಕ್ಕುತ್ತಾ ಶಿಲಾ ರಚನೆಗಳು ನಿರ್ಮಾಣ ಗೊಳ್ಳುತ್ತವೆ. ಈ ರಚನೆಗಳನ್ನು ಕೈಯಿಂದ ಸ್ಪರ್ಶಿಸ ಬಾರದು. ಏಕೆಂದರೆ, ನಮ್ಮ ಕೈಯಲ್ಲಿರುವ ಎಣ್ಣೆ/ಜಿಡ್ಡು, ಶಿಲೆಗಳ ಬೆಳವಣಿಗೆಯನ್ನು ಸ್ಥಗಿತಗೊಳಿಸುತ್ತವೆ. ನೆಲದಲ್ಲಿ ಉಧ್ಭವವಾದಂತೆ ಕಾಣುವ ಸುಂದರ ಶಿವಲಿಂಗಗಳು, ಅದ್ಭುತ ಗೋಪುರಗಳು, ಕಂಬದಂತೆ, ಗ್ಲಾಸಿನ ಸ್ಟ್ರಾದಂತೆ, ಸೀರೆಯ ನೆರಿಗೆಯಂತೆ ಕಾಣುತ್ತಾ ಮನಸೂರೆಗೊಳ್ಳುತ್ತವೆ. ಇದಕ್ಕನುಗುಣವಾಗಿ ಇವಕ್ಕೆ ಇಂಗ್ಲಿಷ್ ನಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ.


ಶಿಲ್ಪಿ ಕಡೆದ ಕಂಬಗಳಂತೆ ಗೋಚರಿಸುವ ಗುಹೆಯ ಒಳಾಂಗಣ


ಸೀರೆಯ ನೆರಿಗೆಗಳು
ಸ್ಟ್ರಾ (on the roof) ಮಾದರಿಯ ಒಳರಚನೆಗಳು

ಗುಹೆಯ ಒಳಗೆ ನೀರು ತೊಟ್ಟಿಕ್ಕುವ ದೃಶ್ಯ

ಗೈಡ್ ಪ್ರಕಾರ ನೀರನ್ನು ಕೈಯಲ್ಲಿ ಹಿಡಿದು ಕುಡಿದರೆ 'ತೀರ್ಥ' ಸಮಾನವಂತೆ..ಟೇಸ್ಟ್ ಮಾತ್ರ ಚೆನ್ನಾಗಿತ್ತು:)



ಗುಹೆಯ ಒಳಗಿನ ಜಲಪಾತ..ಮಳೆ ಬಂದಾಗ ಇದರಲ್ಲಿ ಹೆಚ್ಚಿನ ನೀರನ್ನು ಕಾಣಬಹುದು ಮತ್ತು ತೊಟ್ಟಿಯಲ್ಲಿ ನೀರು


ಗುಹೆಯ Roof..Beautiful ಆಲ್ವಾ..


ಇದರ ಒಳಗಡೆ ಬಾವಲಿ, ಸಲಮಾಂಡರ್ ನಂತಹ ನಿರುದ್ರಪವಿ ಜೀವಿಗಳು ವಾಸಿಸುತ್ತವೆ.

ಅಲ್ಲದೆ ಹಲವು ಜೀವಿಗಳ ಪಳೆಯುಳಿಕೆಗಳು ಕಾಣಸಿಗುತ್ತದೆ. ಗುಹೆಗಳು world war ಸಮಯದಲ್ಲಿ ಸೈನಿಕರ ವಾಸಸ್ಥಳವಾಗಿತ್ತು ಎನ್ನುವುದು ಗೈಡ್ ಮಾಹಿತಿ. ಗುಹೆಗಳು ಸಾಧಾರಣವಾಗಿ 1-2 ಕಿ ಮೀ. ಉದ್ದಕ್ಕಿರುತ್ತವೆ.



ಜೀವಿಗಳಿಗೂ ಇಲ್ಲಿ ನೆಲೆಯಿದೆ - A fern

ತೂಗಾಡುತ್ತಿರುವ ಬಾವಲಿ (Mexican bat)

ಗುಹೆಯ ಒಳಗೆ ಕಂಡು ಬಂದ ಆನೆ ದಂತದ ಪಳೆಯುಳಿಕೆ

ಫೋಟೋ ಗಳು ವಿನೋದ್ ಕ್ಯಾಮೆರಾ ಕಣ್ಣಿಂದ.

Tuesday, April 20, 2010

ಐಸ್ ಕ್ಯಾಂಡಿ ಮತ್ತು ಫ್ರುಟ್ ಚಾಟ್/ ICE CANDY AND FRUIT CHAT FOR SUMMER

Summer ಅಂದ್ರೆ ನೆನಪಾಗುವುದು ಏನಾರೂ ತಣ್ಣಗೆ ತಿನ್ನಲು ಅಥವಾ ಕುಡಿಯಲು.., ಸೊ ಸುಲಭವಾಗಿ ಮಾಡಬಹುದಾದ ಐಸ್ ಕ್ಯಾಂಡಿ ಮತ್ತು ಫ್ರುಟ್-ಚಾಟ್ ಇಲ್ಲಿದೆ.
ಮಕ್ಕಳಿಗೆ ನೀರು/ ಹಾಲು / ಜ್ಯೂಸ್ ಕುಡಿಯಲು ಕೊಟ್ಟರೆ ಅಷ್ಟಾಗಿ ಇಷ್ಟವಿರುವುದಿಲ್ಲ..ಅದೇ ಈ ಐಸ್ ಕ್ಯಾಂಡಿಯನ್ನು ನಿಮಿಷದಲ್ಲಿ ಖಾಲಿ ಮಾಡುತ್ತಾರೆ.

ಮನೆಯಲ್ಲಿರಬಹುದಾದ ಯಾವುದಾದರೂ ಫ್ರೆಶ್ ಜ್ಯೂಸ್ ಗೆ (Tropicana Orange juice / Mango juice- 2 ಗ್ಲಾಸ್ ನಷ್ಟು ) ಸ್ವಲ್ಪ ನೀರು ಸೇರಿಸಿ (½ ಗ್ಲಾಸ್) 4-5 ಚಮಚ ಸಕ್ಕರೆ ಸೇರಿಸಿ, ಒಂದು ಸಣ್ಣಗಿನ ಕಪ್/ ಗ್ಲಾಸ್ / ಅಥವಾ ಐಸ್ ಕ್ಯಾಂಡಿಯ ಅಚ್ಚಿ (mould)ನಲ್ಲಿ ಹಾಕಿ ಮಧ್ಯ ಒಂದು ಕಡ್ಡಿ ಇಟ್ಟು ಫ್ರೀಜರ್ ನಲ್ಲಿ 8-10 ಗಂಟೆ ಗಟ್ಟಿಯಾಗಲು ಬಿಡಿ. ಬೇಕಾದಾಗ ಹದ ಬಿಸಿಯ ಗ್ಲಾಸ್ ನೀರಿನಲ್ಲಿ 1-2 ನಿಮಿಷ ಇಟ್ಟು ನಂತರ ತೆಗೆದು ತಿನ್ನಲು ಕೊಡಿ.


ಇದೇ ರೀತಿ ಹಾಲನ್ನು ಸ್ವಲ್ಪ ಕುದಿಸಿ, ಅದಕ್ಕೆ ಪುಡಿ ಮಾಡಿದ ಗೋಡಂಬಿ, ಬಾದಾಮಿ ಹಾಕಿದರೆ ರುಚಿಯಾದ ಕುಲ್ಫಿ ಸಿದ್ದ.


ಅಲ್ಲಿಗೆ ಮಕ್ಕಳಿಗೆ ಬೇಕಾದ ಹಾಲು / ನೀರು/ ಜ್ಯೂಸ್ ಜೊತೆಗೆ ವಿಟಮಿನ್ - ಸಿ, ಕ್ಯಾಲ್ಸಿಯಂ, ಏನು ಬೇಕೋ ಎಲ್ಲ ಸಿಗುತ್ತದೆ. ಜೊತೆಗೆ ಅಮ್ಮನಿಗೆ ಕೂಡ ಇಷ್ಟದ ಕ್ಯಾಂಡಿ ಮಾಡಿಕೊಟ್ಟಿದ್ದಕ್ಕೆ ಒಂದು ಸ್ವೀಟ್ HUG ಕೂಡ.



ನಾಯಿ ಕೂಡ ಐಸ್ ಕ್ಯಾಂಡಿ ತಿನ್ನುತ್ತವೆ ಗೊತ್ತಾ.. ಬೆಂಗಳೂರಿನ ಅಕ್ಕನ ಮನೆಯ ನಾಯಿಮರಿಗೆ ಐಸ್ ಕ್ಯಾಂಡಿ ಬಲು ಇಷ್ಟ..


FRUIT CHAT
ಹಣ್ಣುಗಳು - Apple, Orange, Strawberry, Grapes, Pineapple, southekaayi……..
ಎಲ್ಲ ಹಣ್ಣುಗಳನ್ನು ತುಂಡು ಮಾಡಿಕೊಂಡು ಇದರ ಮೇಲೆ ಒಂದು ಚಮಚ ಚಾಟ್ ಮಸಾಲ ಬೆರೆಸಿ ತಿನ್ನಲು ಕೊಡಿ.



Sunday, April 11, 2010

ತೊಂಡೆಕಾಯಿ - ಕಡ್ಲೆ ಪಲ್ಯ (ತುಳುವಿನಲ್ಲಿ ಕಡ್ಲೆ - ಮನೋಳಿ ಆಜಾಯಿನ)

ಇದು ಮಂಗಳೂರಿನ ಅದರಲ್ಲೂ ತುಳುವರ ಮನೆಯ ಮದುವೆ, ಹಬ್ಬಗಳಲ್ಲಿ ಇರಲೇಬೇಕಾದ ಖಾದ್ಯ. ತೊಂಡೆಕಾಯಿಗೆ ತುಳುವಿನಲ್ಲಿಮನೋಳಿ’ ಹಾಗೂ ಪಲ್ಯಕ್ಕೆಆಜಾಯಿನ/ಸುಕ್ಕ’ ಎಂದು ಕರೆಯುತ್ತಾರೆ. ಪಲ್ಯಕ್ಕೆ ತೆಂಗಿನ ತುರಿಯನ್ನು ಮಸಾಲೆಯೊಂದಿಗೆ ಧಾರಾಳವಾಗಿ ಬಳಸಲಾಗುತ್ತದೆ. ಅದರಲ್ಲೂವಿಷುಹಬ್ಬ’ದಂದು ಇದೇ ರೀತಿ ತೊಂಡೆಕಾಯಿ ಮತ್ತು ಎಳೆ ಹಸಿ ಗೇರುಬೀಜದೊಂದಿಗೆ ಸೇರಿಸಿ ಪಲ್ಯವನ್ನು ತಯಾರಿಸುತ್ತಾರೆ. ಈ ಪಲ್ಯ ತಿನ್ನಲು ತುಂಬ ರುಚಿ.


ಬೇಕಾಗುವ ಸಾಮಗ್ರಿಗಳು:

ತೊಂಡೆಕಾಯಿ - ಕಪ್ (1/2 kg, ಉದ್ದಕ್ಕೆ ಸೀಳಿ)
ಈರುಳ್ಳಿ - 1 (ಸಣ್ಣಗೆ ಹೆಚ್ಚಿ)
ಟೊಮೇಟೊ - 1 (ಸಣ್ಣಗೆ ಹೆಚ್ಚಿ)
ಕಡ್ಲೆ (Kabuli Chana)- 1 ½ ಕಪ್
ತೆಂಗಿನಕಾಯಿ - 1 ಕಪ್ ತುರಿದು


ಮಸಾಲೆಗೆ:
ಎಣ್ಣೆ - ½ ಚಮಚ
ಮೆಂತೆ - ¼ ಚಮಚ
ಮೆಣಸು (ಬ್ಯಾಡಗಿ) - 6-8
ಕೊತ್ತಂಬರಿ ಬೀಜ - 3 ಚಮಚ
ಜೀರಿಗೆ - 1 ಚಮಚ
ಹಳದಿ ಪುಡಿ - ಚಿಟಿಕೆ

ಒಗ್ಗರಣೆಗೆ:
ಎಣ್ಣೆ - 1 ಚಮಚ
ಸಾಸಿವೆ- ½ ಚಮಚ
ಬೆಳ್ಳುಳ್ಳಿ - 2 ದೊಡ್ಡ ಎಸಳು

ಒಣ ಮೆಣಸು - 1
ಕರಿಬೇವು - 6 ಎಲೆ


ತಯಾರಿಸುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಮೆಂತೆಯನ್ನು ಸ್ವಲ್ಪಕೆಂಪಗೆ ಆಗುವಷ್ಟು ಹುರಿದು ನಂತರ ಇದಕ್ಕೆ ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹದ ಉರಿಯಲ್ಲಿ ಹುರಿಯಿರಿ. ಮೆಣಸನ್ನು ಪ್ರತ್ಯೇಕ ಹುರಿದಿಟ್ಟುಕೊಳ್ಳಬಹುದು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತಣ್ಣಗಾದ ನಂತರ ಮಸಾಲೆಯನ್ನು ನೀರು ಸೇರಿಸದೆ ಪುಡಿ ಮಾಡಿ.

ಕಡ್ಲೆಯನ್ನು 6-8 ಗಂಟೆ ನೀರಿನಲ್ಲಿ ನೆನೆಸಿಟ್ಟು ತೊಳೆದು ಕುಕ್ಕರಿನಲ್ಲಿ ½ ಚಮಚ ಉಪ್ಪು ಸೇರಿಸಿ ಬೇಯಿಸಿ.
ಇನ್ನೊಂದು ಪಾತ್ರೆಯಲ್ಲಿ, 2 ಚಮಚ ಎಣ್ಣೆ ಸೇರಿಸಿ, ಈರುಳ್ಳಿ ಸೇರಿಸಿ ಸ್ವಲ್ಪ ಕೆಂಪಗೆ ಆಗುವ ತನಕ ಹುರಿಯಿರಿ, ನಂತರ ಇದಕ್ಕೆ ಟೊಮೇಟೊ, ತೊಂಡೆಕಾಯಿ ಹಾಗು 1/4 ಕಪ್ ನೀರು ಸೇರಿಸಿ ಹದವಾಗಿ ಬೇಯಿಸಿ. ತೊಂಡೆಕಾಯಿ ಬೇಯುತ್ತ ಬಂದಾಗ, ಇದಕ್ಕೆ ಮಸಾಲೆ ಪುಡಿ, ಕಡ್ಲೆ, ತೆಂಗಿನತುರಿ, ಉಪ್ಪು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಒಗ್ಗರಣೆ ಸೇರಿಸಿ.
ಪಲ್ಯಕ್ಕೆ 10 ರಿಂದ 15 ಗೋಡಂಬಿಯನ್ನು ಹುರಿದು ಸೇರಿಸಿದರೆ ತುಂಬಾ ರುಚಿಯಾಗಿರುತ್ತದೆ.
ಹುರಿದು ಹದವಾಗಿ ಪುಡಿಮಾಡಿದ ಮಸಾಲೆ

ಇಲ್ಲಿ ಉತ್ತಮ ಗುಣ ಮಟ್ಟದ ಬ್ಯಾಡಗಿ ಮೆಣಸು ಸಿಗದ ಕಾರಣ ನಾನು ಮಸಾಲೆಯ ಪುಡಿಗಳನ್ನು ಮೆಣಸು ಸೇರಿಸದೆ ಹುರಿದು ಪುಡಿಮಾಡಿಟ್ಟುಕೊಳ್ಳುತ್ತನೆ. ಕೊನೆಯಲ್ಲಿ ನನ್ನ ಪ್ರೀತಿಯ ಅತ್ತೆ ಊರಿನಿಂದ ಕಳಿಸಿದ ಬ್ಯಾಡಗಿ ಮೆಣಸಿನ ಪುಡಿಯನ್ನು ಬಳಸುತ್ತೇನೆ.



ವಿಷು ಅಥವಾ ಸೌರಮಾನ ಯುಗಾದಿ ಎಂದರೆ ನನಗೆ ನೆನಪಾಗುವುದು ನನ್ನೂರು, ಕಾಸರಗೋಡು ಜಿಲ್ಲೆಯ ಪುಟ್ಟ ಗ್ರಾಮ 'ಕಯ್ಯಾರು', ಅದೇ ಹಿರಿಯ ಕವಿಗಳ ಹೆಸರಲ್ಲಿರೋ ಊರು. ಕೇರಳಿಗರ ಪ್ರಭಾವವೋ ತಿಳಿಯದು, ಇಲ್ಲಿರುವ ಹೆಚ್ಚಿನ ಹಿಂದೂಗಳೆಲ್ಲರೂ ಆಚರಿಸುವ ಹೊಸ ವರುಷದ ಹಬ್ಬ, ವಿಷು (ಬಿಸು = ತುಳು), ಅಥವಾ ಸೌರಮಾನ ಯುಗಾದಿ. ವಿಷು ಹಬ್ಬದಂದು ಅಮ್ಮ ಬೆಳಗ್ಗೆ ಎದ್ದು ಮನೆಯೆಲ್ಲ ಶುಚಿ ಮಾಡಿ, ಮನೆಯಲ್ಲಿ ಬೆಳೆದ ತೆಂಗಿನಕಾಯಿ, ಹಣ್ಣು, ತರಕಾರಿ, ಹೂವುಗಳೊಂದಿಗೆ ಅಕ್ಕಿ ಮತ್ತು ಕನ್ನಡಿ - ಇವೆಲ್ಲವನ್ನೂ ದೀಪದೊಂದಿಗೆ ದೇವರ ಕೋಣೆಯಲ್ಲಿ ಸಿದ್ದಪಡಿಸುತ್ತಾರೆ. ಇದನ್ನೇ ವಿಷುಕಣಿ ಎನ್ನುವುದು. ಬೆಳಿಗ್ಗೆದ್ದು ವಿಶುಕಣಿ ನೋಡಿ ನಂತರ ಮನೆಯ ಹಿರಿಯರಿಗೆಲ್ಲ ನಮಸ್ಕಾರ ಮಾಡಿ ಅವರ ಆಶೀರ್ವಾದ ಹಾಗೂ ಬಳುವಳಿ ಪಡೆಯುವ ದಿನ. ಅಂತೆಯ ಬೇರೆ ಊರಿನಲ್ಲಿರುವ ಹೆಣ್ಣು ಮಕ್ಕಳು, ತಂದೆ-ತಾಯಿ ಅಥವಾ ಅಣ್ಣನ ಮನೆಗೆ ಬಂದು ಆಶೀರ್ವಾದ ಪಡೆಯುತ್ತಾರೆ. ನಂತರ ಎಲ್ಲರೂ ಮನೆಯಲ್ಲಿ ಸೇರಿ ಮದ್ಯಾಹ್ನದ ಸಿಹಿ ಊಟ..ಅದರಂತೆಯೇ ಹಲವು ವರ್ಷಗಳಿಂದ ನಮ್ಮೊಂದಿಗೆ ಕುಟುಂಬದ ಸದಸ್ಯರಂತೆ ಬೆಳೆದ ಆತ್ಮೀಯ ಕೆಲಸದವರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ತಂದು ಆಚರಣೆಯಲ್ಲಿ ಪಾಲ್ಗೊಳುತ್ತಾರೆ.


ಹಲವು ವಿಷು ಹಬ್ಬ ಕಳೆದು ಹೋದರು ಕೂಡಾ ಅದರ ಸಿಹಿ ನೆನಪುಗಳು ಮಾಸಿಲ್ಲ....ಜೊತೆಗೆ ನಮ್ಮೊಂದಿಗಿದ್ದ ಆತ್ಮೀಯ ಹಿರಿಯರ ಅಗಲಿಕೆಯ ಕಹಿ ನೆನಪುಗಳು ....


ಏಪ್ರಿಲ್ ೧೪ ರಂದು ವಿಷು ಹಬ್ಬ (ಸೌರಮಾನ ಯುಗಾದಿ) ವನ್ನು ಆಚರಿಸುವ ಎಲ್ಲ ಮಿತ್ರರಿಗೂ ನನ್-ಪ್ರಪಂಚದ ಶುಭಾಶಯಗಳು.


Tuesday, April 6, 2010

ಉಡುಪಿ / ಮಂಗಳೂರು ಸಾಂಬಾರ್ (Sambar / Curry )


ಬೇಕಾಗುವ ಸಾಮಗ್ರಿಗಳು:

ತರಕಾರಿ - 2 ಕಪ್ (ಬದನೇಕಾಯಿ + ನುಗ್ಗೆಕಾಯಿ / ಮಂಗಳೂರು ಸೌತೆಕಾಯಿ / ಬೀನ್ಸ್+ ಕ್ಯಾರೆಟ್ - ಮುಂತಾದ ತರಕಾರಿಗಳನ್ನು ಉಪಯೋಗಿಸಬಹುದು)
ತೊಗರಿಬೇಳೆ -
¼ ಕಪ್

ಸಾಂಬಾರ್ ಈರುಳ್ಳಿ - 6-8 (ಇಲ್ಲದಿದ್ದರೆ 1 ಈರುಳ್ಳಿಯನ್ನು ಹೆಚ್ಚಿ ಉಪಯೋಗಿಸಬಹುದು)

ಟೊಮೇಟೊ - 1
ಬೆಲ್ಲ - 2 ಚಮಚ
ಹುಣಸೆ ರಸ - ಲಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು

ಎಣ್ಣೆ - 2 ಚಮಚ


ಮಸಾಲೆಗೆ:
ಎಣ್ಣೆ -
1 ಚಮಚ
ಮೆಂತೆ -
½ ಚಮಚ
ಉದ್ದಿನಬೇಳೆ-
1 ಚಮಚ
ಮೆಣಸು (ಬ್ಯಾಡಗಿ)
- 6-8
ಕೊತ್ತಂಬರಿ ಬೀಜ -
1 ½ ಚಮಚ
ಜೀರಿಗೆ -
½ ಚಮಚ
ಹಳದಿ ಪುಡಿ - ಚಿಟಿಕೆ

ಕರಿಬೇವು -
6 ಎಲೆ
ತೆಂಗಿನಕಾಯಿ -
¼ ಕಪ್ ತುರಿದು

ಒಗ್ಗರಣೆಗೆ
:
ಎಣ್ಣೆ -
2 ಚಮಚ
ಸಾಸಿವೆ
- ½ ಚಮಚ
ಹಿಂಗು
- ½ ಚಮಚ

ಒಣ ಮೆಣಸು - 1
ಕರಿಬೇವು -
6 ಎಲೆ


ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ
, ಮೆಂತೆ ಸ್ವಲ್ಪ ಬಣ್ಣ ಚೇಂಜ್ ಆಗುವ ತನಕ ಹುರಿದು, ನಂತರ ಉದ್ದಿನಬೇಳೆ ಸೇರಿಸಿ, ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಇದಕ್ಕೆ ಕರಿಬೇವು, ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹುರಿಯಿರಿ. ಮಸಾಲೆ ಹುರಿಯುವಾಗ ಸೀದು ಹೋಗದಂತೆ ನೋಡಿಕೊಳ್ಳಬೇಕು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತೆಂಗಿನತುರಿಯನ್ನು ಸ್ವಲ್ಪ ಕೆಂಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದ ನಂತರ ಈ ಮಸಾಲೆಯನ್ನು ರುಬ್ಬಿಡಿ.


ತೊಗರಿಬೇಳೆಯನ್ನು ತೊಳೆದುಕೊಂಡು ಕುಕ್ಕರಿನಲ್ಲಿ ಬೇಯಿಸಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಸೇರಿಸಿಕೊಂಡು ಈರುಳ್ಳಿಯನ್ನು ಹುರಿದು, ಇದಕ್ಕೆ
ಹೆಚ್ಚಿಟ್ಟ ತರಕಾರಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿಟ್ಟ ಟೊಮೇಟೊ ಹಾಗೂ ಒಂದು ಕಪ್ ನೀರು ಸೇರಿಸಿ ಬೇಯಿಸಲು ಇಡಿ. ತರಕಾರಿ ಬೇಯುತ್ತ ಬಂದಾಗ, ಇದಕ್ಕೆ ತೊಗರಿಬೇಳೆ, ರುಬ್ಬಿಟ್ಟ ಮಸಾಲೆ, ಹುಳಿ, ಉಪ್ಪು, ಬೆಲ್ಲ ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿ. ಈ ಸಾಂಬಾರನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.

ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ ಉಪಯೋಗಿಸ್ತೇನೆ...ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಇದೇ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ.
ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.