My photo
ಕರಾವಳಿ ಹುಡುಗಿ :)

Thursday, April 30, 2009

ಕಡಾಯಿ ಮಶ್ರೂಮ್ / KADAI MUSHROOM


ಬೇಕಾಗುವ ಸಾಮಗ್ರಿಗಳು:
ಮಶ್ರೂಮ್ (Button Mushroom) - 200 ಗ್ರಾಂ
ಕ್ಯಾಪ್ಸಿಕಂ (Capsicum / Bell pepper) - ¼ ಕಪ್ (ಉದ್ದಕ್ಕೆ ಹೆಚ್ಚಿದ್ದು)
ಬಟಾಣಿ - ¼ ಕಪ್ (ಬೇಯಿಸಿದ್ದು / Frozen)
ಈರುಳ್ಳಿ - 1 ಕಪ್
ಟೊಮೇಟೊ - ½ ಕಪ್ (ಹೆಚ್ಚಿದ್ದು)
ಟೊಮೇಟೊ ಪ್ಯೂರಿ (Tomato puree) – 5 ಚಮಚ
ಕ್ರೀಂ - ½ ಕಪ್ (Whipping cream)
ಶುಂಠಿ - 1 ಚಮಚ (ತುರಿದು)
ಬೆಳ್ಳುಳ್ಳಿ - 1 ಚಮಚ (ತುರಿದು)
ಜೀರಿಗೆ - ½ ಚಮಚ
ಜೀರಿಗೆ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಮೆಣಸಿನ ಪುಡಿ - 1- 2 ಚಮಚ
ಮೆಂತ್ಯ ಪುಡಿ - ಚಿಟಿಕೆ
ಅರಿಶಿನ ಪುಡಿ - ಚಿಟಿಕೆ
ಎಣ್ಣೆ - 1-2 ಟೇಬಲ್ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮಶ್ರೂಮ್ ನ್ನು, ಒದ್ದೆ ಬಟ್ಟೆಯಲ್ಲಿ ಒರೆಸಿ, ತುಂಡು ಮಾಡಿಟ್ಟುಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆಯನ್ನು ಹುರಿದುಕೊಂಡು, ಶುಂಠಿ- ಬೆಳ್ಳುಳ್ಳಿಯನ್ನು ಸೇರಿಸಿಕೊಂಡು, 1 ನಿಮಿಷ ಹುರಿಯಬೇಕು. ನಂತರ ಇದಕ್ಕೆ ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಬೇಕು. ನಂತರ ಎಲ್ಲಾ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿಕೊಂಡು, ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಬೇಕು. ಇದಕ್ಕೆ ಟೊಮೇಟೊ ಪ್ಯೂರಿ, ಟೊಮೇಟೊ ಸೇರಿಸಿ , 5 ನಿಮಿಷ ಹುರಿದುಕೊಂಡು, ನಂತರ ಕಟ್ ಮಾಡಿದ ಮಶ್ರೂಮ್, ಕ್ಯಾಪ್ಸಿಕಂ , ಬಟಾಣಿ ಸೇರಿಸಿ, ಸಣ್ಣ ಉರಿಯಲ್ಲಿ 30 ನಿಮಿಷ ಮುಚ್ಚಿ ಬೇಯಿಸಬೇಕು. ಕೊನೆಯಲ್ಲಿ ½ ಕಪ್ ಕ್ರೀಂ ಸೇರಿಸಿ, ಒಂದು ಸಲ ಕುದಿಸಿ, ಉಪ್ಪು ಸೇರಿಸಿ, ಒಲೆಯಿಂದ ಇಳಿಸಿದರೆ, ಕಡಾಯಿ ಮಶ್ರೂಮ್ ಸಿದ್ದ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ, ರೊಟ್ಟಿ ಯೊಂದಿಗೆ ತಿನ್ನಬಹುದು.

ಮಶ್ರೂಮ್ ನ್ನು ನೀರಿನಲ್ಲಿ ಮುಳುಗಿಸಿ ತೊಳೆದರೆ, ಅದು ಬೇಯಿಸುವಾಗ crispness ಕಳೆದುಕೊಳ್ಳುತ್ತದೆ. ಹಾಗೆಯೇ ಬೇಯಿಸುವಾಗ ಕೂಡ, ನೀರು ಸೇರಿಸಬಾರದು. ಸಣ್ಣ ಉರಿಯಲ್ಲಿ ಬೇಯಿಸಿದರೆ ಅದು ನೀರು ಬಿಟ್ಟುಕೊಳ್ಳುತ್ತದೆ. ಇದೇ ನೀರು ಬೇಯಲು ಸಾಕಾಗುತ್ತದೆ. ಇದನ್ನು ಕ್ರೀಂ ಸೇರಿಸದೆ ಕೂಡ ಮಾಡಬಹುದು.

ಮನೆಯಲ್ಲಿ ಟೊಮೇಟೊ ಪ್ಯೂರಿ ಮಾಡುವ ವಿಧಾನ - ಕುದಿಯುವ ನೀರಿಗೆ ಇಡೀ ಟೊಮೇಟೊವನ್ನು ಹಾಕಿಕೊಂಡು, 5-10 ನಿಮಿಷ ಕುದಿಸಬೇಕು. ತಣ್ಣಗಾದ ನಂತರ ಸಿಪ್ಪೆ ತೆಗೆದುಕೊಂಡು, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

Friday, April 24, 2009

ಹೆಸರುಕಾಳು ವಡೆ / MUNG BEAN VADA


ಬೇಕಾಗುವ ಸಾಮಗ್ರಿಗಳು:
ಹೆಸರುಕಾಳು - 2 ಕಪ್ (ಮೊಳಕೆ ಬರಿಸಿದ್ದು)
ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿ)
ಬೆಳ್ಳುಳ್ಳಿ ತುರಿದು - 1 ಚಮಚ
ಶುಂಠಿ ತುರಿದು - 1 ಚಮಚ
ಜೀರಿಗೆ - ½ ಚಮಚ
ಎಳ್ಳು - ½ ಚಮಚ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿ)
ಕರಿಬೇವು - 1 ಚಮಚ (ಸಣ್ಣಗೆ ಹೆಚ್ಚಿ)
ಹಸಿಮೆಣಸು - 1- 2 (ಸಣ್ಣಗೆ ಹೆಚ್ಚಿ)
ಕಾರದ ಪುಡಿ - ¼ ಚಮಚ
ಕಡ್ಲೆ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊಳಕೆ ಬರಿಸಿದ ಹೆಸರುಕಾಳನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಬೇಕು. ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ (ನೀರು ಹಾಕದೆ) ಚೆನ್ನಾಗಿ ಮಿಕ್ಸ್ ಮಾಡಬೇಕು. ಇದರಿಂದ 10 ಉಂಡೆಗಳನ್ನು ಮಾಡಿ ಬೇಕಾದ ಆಕಾರದಲ್ಲಿ ಕೈಯಿಂದ ಒತ್ತಿ, ಕೆಂಬಣ್ಣ ಬರುವವರೆಗೆ, ಕಾದ ಎಣ್ಣೆಯಲ್ಲಿ ಹದ ಉರಿಯಲ್ಲಿ ಕರಿದರೆ, ಹೆಸರುಕಾಳು ವಡೆ/ ಪಕೋಡ ಸಿದ್ದ. ಇದನ್ನು, ಟೊಮೇಟೊ ಸಾಸ್ / ತೆಂಗಿನ ಕಾಯಿ ಚಟ್ನಿ ಯೊಂದಿಗೆ ತಿನ್ನಬಹುದು.

ಇದಕ್ಕೆ ಎಲ್ಲಿಯೂ ನೀರು ಸೇರಿಸಬಾರದು. ಮೊಳಕೆ ಬರಿಸಿದ ಹೆಸರುಕಾಳು ಇಲ್ಲದಿದ್ದಲ್ಲಿ, ಹೆಸರುಕಾಳನ್ನು ನೀರಿನಲ್ಲಿ 5-6 ಗಂಟೆ ನೆನೆಸಿ ಉಪಯೋಗಿಸಬಹುದು. ಉಂಡೆ ಮಾಡುವಾಗ ಅಂಟು ಬರದಿದ್ದಲ್ಲಿ, ಸ್ವಲ್ಪ ಹಿಟ್ಟು ಜಾಸ್ತಿ ಹಾಕಿ ಉಂಡೆ ಮಾಡಬಹುದು.

Friday, April 10, 2009

ಅವಿಲ್ / ಅವಿಯಲ್ / AVIAL

ಅವಿಲ್ ಅಥವಾ ಆವಿಯಲ್ ಮಲಯಾಳಿಗರ ಓಣಂ ಊಟದ ಪ್ರಮುಖ ಡಿಶ್. ಮನೆಯಲ್ಲಿ ಎಲ್ಲಾ ತರಕಾರಿಗಳು ಸ್ವಲ್ಪ ಸ್ವಲ್ಪ ಇದ್ದರೆ, ಇದು ಒಂದು ರುಚಿಯಾದ ಅಡುಗೆ.




ಅವಿಲ್ ಮಾಡಲು ಬೇಕಾಗುವ ಸಾಮಗ್ರಿಗಳು:
ತರಕಾರಿಗಳು - 3-4 ಕಪ್ (ತೊಂಡೆಕಾಯಿ, ಬಾಳೆಕಾಯಿ, ಸುವರ್ಣಗಡ್ಡೆ, ಬೀನ್ಸ್, ಹೀರೆಕಾಯಿ, ಸೋರೆಕಾಯಿ, ಪಡುವಲಕಾಯಿ, ಸೌತೆಕಾಯಿ, ಆಲೂಗಡ್ಡೆ -ಎಲ್ಲಾ ತರಕಾರಿಗಳನ್ನು ಸ್ವಲ್ಪ ದೊಡ್ಡದಾಗಿ ಕಟ್ ಮಾಡಬೇಕು)
ನನಗೆ ಎಲ್ಲಾ ತರಕಾರಿಗಳು ಸಿಗದ ಕಾರಣ ಬಾಳೆಕಾಯಿ, ಬೀನ್ಸ್, ಆಲೂಗಡ್ಡೆ ಹಾಗು ಅವರೆಕಾಳು ಹಾಕಿ ಮಾಡಿದ್ದೇನೆ)
ತೆಂಗಿನ ತುರಿ - 1 ಕಪ್
ಹಸಿಮೆಣಸು - 3
ಜೀರಿಗೆ - 1 ಚಮಚ
ಶುಂಠಿ - 2 ಸೆ.ಮಿ ತುಂಡು
ಬೆಳ್ಳುಳ್ಳಿ - 1 ಎಸಳು (ಬೇಕಿದ್ದರೆ ಮಾತ್ರ)
ಮೊಸರು - ½ ಕಪ್

ಹಳದಿ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವು- 8- 10 ಎಲೆ
ತೆಂಗಿನ ಎಣ್ಣೆ - 2 ಚಮಚ

ಮಾಡುವ ವಿಧಾನ :
ತರಕಾರಿಯನ್ನು 2 ಹಸಿಮೆಣಸು, ಒಂದು ಕಪ್ ನೀರು ಸೇರಿಸಿ ಬೇಯಿಸಿ ಇಟ್ಟುಕೊಳ್ಳಬೇಕು.
ತೆಂಗಿನತುರಿಯನ್ನು 1 ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಹಳದಿ ಪುಡಿ ಸೇರಿಸಿ ರುಬ್ಬಬೇಕು. ಇದನ್ನು ಬೇಯಿಸಿದ ತರಕಾರಿಯೊಂದಿಗೆ ಬೆರೆಸಿ, ಉಪ್ಪು, ಕೊನೆಯಲ್ಲಿ ಮೊಸರು ಸೇರಿಸಿ, ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಎಣ್ಣೆ ಬಿಸಿ ಮಾಡಿ ಕರಿಬೇವಿನ ಒಗ್ಗರಣೆ ಕೊಟ್ಟರೆ ಅವಿಲ್ ಸಿದ್ದ.
ಅವಿಲ್ ಸಾಂಬಾರಿಗಿಂತ ಗಟ್ಟಿಯಾಗಿ ಇರುತ್ತದೆ. ಇದನ್ನು ಅನ್ನ ಹಾಗು ಚಪಾತಿಯೊಂದಿಗೆ ತಿನ್ನಬಹುದು.

ವೆಜಿಟೇಬಲ್ ಕಟ್ಲೆಟ್ / VEGETABLE CUTLET


ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಆಲೂಗಡ್ಡೆ - 2 ಕಪ್ (ಸಿಪ್ಪೆ ತೆಗೆದು ಸಣ್ಣಗೆ ಪುಡಿ ಮಾಡಿದ್ದು)
ಬೇಯಿಸಿದ ತರಕಾರಿಗಳು - 1 ಕಪ್ ( ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಬಟಾಣಿ)
ಕೊತ್ತಂಬರಿ ಸೊಪ್ಪು - ¼ ಕಪ್ (ಸಣ್ಣಗೆ ಹೆಚ್ಚಿದ್ದು)
ಶುಂಠಿ - 2 ಚಮಚ (ತುರಿದು)
ಹಸಿಮೆಣಸು - 1-2 (ಸಣ್ಣಗೆ ಹೆಚ್ಚಿದ್ದು)
ಗರಂ ಮಸಾಲ ಪುಡಿ - ¼ - ½ ಚಮಚ
ಚಾಟ್ ಮಸಾಲ ಪುಡಿ - ¼ ಚಮಚ
ಲಿಂಬೆ ರಸ- 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬ್ರೆಡ್ ಪುಡಿ * - ¼ ಕಪ್
ರವೆ - ¼ ಕಪ್
ಮೈದಾ - 3 ಚಮಚ
ಎಣ್ಣೆ - ಕರಿಯಲು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಬೇಯಿಸಿದ ಎಲ್ಲಾ ತರಕಾರಿಗಳನ್ನು(ತರಕಾರಿಯಲ್ಲಿ ಸ್ವಲ್ಪ ಕೂಡ ನೀರು ಇರಬಾರದು) ಹಾಕಿ, ಮಸಾಲೆಯ ಸಾಮಗ್ರಿಗಳನ್ನು ಹಾಗು ಹಸಿ ಮೆಣಸು, ಶುಂಠಿ, ಉಪ್ಪು, ಲಿಂಬೆ ರಸ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು 10 ಉಂಡೆ ಮಾಡಿ ಬೇಕಾದ ಆಕಾರದಲ್ಲಿ 1 ರಿಂದ 1.5 ಇಂಚು ದಪ್ಪಗೆ ತಟ್ಟಬೇಕು.
3 ಚಮಚ ಮೈದಾ ಹಿಟ್ಟಿಗೆ, ¼ ಕಪ್ ನೀರು ಸೇರಿಸಿ, ಚೆನ್ನಾಗಿ ಗಂಟಿಲ್ಲದೆ ಕಲಸಿ ಇಟ್ಟುಕೊಳ್ಳಬೇಕು.
ತಟ್ಟಿದ ಕಟ್ಲೆಟ್ ನ್ನು ಮೈದಾ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಪುಡಿ ಹಾಗು ರವೆ (1:1) ಪುಡಿಯಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕೆಂಬಣ್ಣ ಬರುವ ತನಕ ಕಾಯಿಸಿದರೆ ಕಟ್ಲೆಟ್ ರೆಡಿ. ಇದನ್ನು ಕಡಿಮೆ ಎಣ್ಣೆ ಉಪಯೋಗಿಸಿ, ಕಾವಲಿಯಲ್ಲಿ ಕರಿದು ಕೂಡ ಮಾಡಬಹುದು. . ಇದನ್ನು ಟೊಮೇಟೊ ಸಾಸ್ ಅಥವಾ ಸಿಹಿ ಚಟ್ನಿಯೊಂದಿಗೆ ತಿನ್ನಬಹುದು.
ತರಕಾರಿಯಲ್ಲಿ ನೀರಿನ ಅಂಶ ಇದ್ದರೆ ಕಟ್ಲೆಟ್ ಮಾಡುವಾಗ ಪುಡಿಯಾಗುತ್ತದೆ. ಹಾಗಾದಲ್ಲಿ ಸ್ವಲ್ಪ ಬ್ರೆಡ್ ಪುಡಿ ಸೇರಿಸಿ ಬೆರೆಸಬಹುದು.

ಬ್ರೆಡ್ ಪುಡಿ * /Bread crumbs/ ರಸ್ಕ್ ಪುಡಿ - ಇದು ಸೂಪರ್ ಮಾರ್ಕೆಟ್ ಗಳಲ್ಲಿ ಸಿಗುತ್ತದೆ.
ಮನೆಯಲ್ಲಿ ಬ್ರೆಡ್ ಪುಡಿ ಮಾಡುವ ವಿಧಾನ- ಬ್ರೆಡ್ ನ್ನು ಓವೆನ್ ನಲ್ಲಿ ಇಟ್ಟು ಚೆನ್ನಾಗಿ ರೋಸ್ಟ್ ಮಾಡಬೇಕು. ಇದನ್ನು ನಂತರ ಮಿಕ್ಸಿ ಯಲ್ಲಿ ಪುಡಿ ಮಾಡಿ ಇಟ್ಟು ಕೊಳ್ಳಬೇಕು.

Saturday, April 4, 2009

ಮಜ್ಜಿಗೆ ನೀರು / BUTTERMILK



ಬೇಕಾಗುವ ಸಾಮಗ್ರಿಗಳು:
ಮೊಸರು - 1 ಗ್ಲಾಸ್
ಶುಂಠಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸು - 1
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ -
ಎಣ್ಣೆ - 1 ಚಮಚ
ಸಾಸಿವೆ - ¼ ಚಮಚ
ಕರಿಬೇವು - 3-4 ಎಲೆಗಳು
ಹಿಂಗು - ಸ್ವಲ್ಪ

ಮಾಡುವ ವಿಧಾನ:
ಮೊಸರನ್ನು ಮಿಕ್ಸಿಯಲ್ಲಿ ಸ್ವಲ್ಪ ಕಡೆದುಕೊಳ್ಳಬೇಕು. ಇದನ್ನು ಒಂದು ಪಾತ್ರೆಗೆ ಹಾಕಿ, ಜಜ್ಜಿದ ಶುಂಠಿ, ಸೀಳಿದ ಹಸಿಮೆಣಸು, ಉಪ್ಪು, ಕೊತ್ತಂಬರಿ ಸೊಪ್ಪು, ಬೇಕಾದಷ್ಟು ನೀರು (2-3 ಗ್ಲಾಸ್) ಸೇರಿಸಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ, ರುಚಿಯಾದ ಮಜ್ಜಿಗೆ ನೀರು ರೆಡಿ.

Sunday, March 29, 2009

ಮಾವಿನಕಾಯಿ ಉಪ್ಪಿನಕಾಯಿ ಹಾಗು ಅಮೂಲ್ಯ ಮಲ್ಲಾಡಿ ಯವರ "The Mango Season"

ಇತ್ತೀಚೆಗೆ, ನಾನು ಓದಿದ ಪುಸ್ತಕ ‘ಅಮೂಲ್ಯ ಮಲ್ಲಾಡಿ’ಯವರ “The Mango Season”.
ಇದರಲ್ಲಿ ಪ್ರಿಯಾ ರಾವ್ ಎನ್ನುವ ಆಂದ್ರಪ್ರದೇಶದ ಹುಡುಗಿ ತೀರಾ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದು, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದು, ನಿಕ್ಕ್ ಎನ್ನುವ ಅಮೆರಿಕನ್ ಹುಡುಗನನ್ನು ಪ್ರೀತಿಸಿ ಅವನೊಂದಿಗೆ ವಾಸಿಸುವವಳ ಕಥೆ. ಕೆಲವು ವರ್ಷಗಳ ನಂತರ ಭಾರತಕ್ಕೆ ರಜೆಯಲ್ಲಿ ಮರಳಿದಾಗ ಅಲ್ಲಿ ಕೇವಲ ಒಂದು ವಾರದೊಳಗೆ ನಡೆಯುವ ಅವಳ ಬಾಳಿನ ಪ್ರಮುಖ ಘಟನೆಯನ್ನು ಈ ಕಾದಂಬರಿಯಲ್ಲಿ ಸರಳವಾದ ರೀತಿಯಲ್ಲಿ ಮಲ್ಲಾಡಿಯವರು ಮನಮುಟ್ಟುವಂತೆ ಬಿಚ್ಚಿಡುತ್ತಾರೆ. ಭಾರತಕ್ಕೆ ರಜೆಯಲ್ಲಿ ಬಂದಾಗ, ಬೇಸಗೆಕಾಲದಲ್ಲಿ ಹೇರಳವಾಗಿ ಲಭಿಸುವ, ಮಾವಿನಕಾಯಿಯೊಂದಿಗೆ ಬಿಚ್ಚಿಕೊಳ್ಳುವ ಅವಳ ಬಾಲ್ಯದ ನೆನಪುಗಳು, ಬಾಲ್ಯದಿಂದ ಬೆಳೆದು ಬಂದ, ಮತ್ತು ಮನೆಯವರೆಲ್ಲರು ಅನುಸರಿಸುವ ಭಾರತೀಯ ಸಂಸ್ಕೃತಿ, ಈಗ ನೆಲೆಸಿರುವ ಅಮೇರಿಕಾದಲ್ಲಿನ ಸಾಂಸ್ಕೃತಿಕ ಭಿನ್ನತೆಗಳು ಹಾಗು ಅವಳ ಪ್ರೇಮವನ್ನು Orthodox ನಂಬಿಕೆಯೊಂದಿಗೆ ಬೆಳೆದ, ಅಮ್ಮ, ಅಪ್ಪ, ಅಜ್ಜ, ಅಜ್ಜಿ ಯವರೊಂದಿಗೆ ಹೇಳಿಕೊಳ್ಳಲು ತೊಳಲಾಡುವ ಸಂಧಿಗ್ದತೆಯೇ ಕಥೆಯ ಪ್ರಮುಖ ಅಂಗ.

ನಾವು ಭಾರತೀಯರಾದ ಕಾರಣವೋ ಏನೋ, ಅವರ ಕಥೆಗಳು ಮನ ಮುಟ್ಟುತ್ತದೆ. ದೂರದ ದೇಶದಲ್ಲಿದ್ದು ಕೊಂಡೇ ನಮ್ಮೂರಿಗೆ ಹೋದ ಅನುಭವವನ್ನು ಕೊಡುತ್ತದೆ. ಇದರಲ್ಲಿ ಪ್ರತಿ Chapterನ ಆರಂಭ ದಲ್ಲೂ ಆವರು ಆಂದ್ರಪ್ರದೇಶದ ಮಾವಿನಕಾಯಿ ಉಪ್ಪಿನಕಾಯಿ (ಆವಕ್ಕಾಯಿ), ದಾಲ್, ರವೆ ಲಡ್ಡು ……ಹೀಗೆ ಸಾಂಪ್ರದಾಯಿಕ ಆಂದ್ರ ಅಡುಗೆಗಳ ಬಗ್ಗೆಯೂ ತಿಳಿಸುತ್ತ ಹೋಗುತ್ತಾರೆ.

ಇದು ಉಪ್ಪಿನಕಾಯಿ ಮಾಡುವ ಸಿಂಪಲ್ ವಿಧಾನ. ನಾನು ಅದೇ ರೀತಿ ಮಾವಿನಕಾಯಿ ಉಪ್ಪಿನಕಾಯಿ ಮನೆಯಲ್ಲಿ ಮಾಡಿದಾಗ ತುಂಬ ಚೆನ್ನಾಗೇ ಬಂತು. ಹಾಗಾಗಿ ಇಲ್ಲಿ ಬರೆಯುತ್ತಾ ಇದ್ದೇನೆ.

ಮಾವಿನಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು:
ಹುಳಿಮಾವಿನ ಕಾಯಿ - 5 ಕಪ್
ಸಾಸಿವೆ ಪುಡಿ - 1 ಕಪ್
ಮೆಣಸಿನ ಪುಡಿ - 1 ಕಪ್
ಉಪ್ಪು- 1 ಕಪ್
ಹಳದಿ ಪುಡಿ - ಸ್ವಲ್ಪ
ಮೆಂತೆ ಪುಡಿ - 1 ಚಮಚ
ಎಣ್ಣೆ - 3 ಕಪ್

ಮಾಡುವ ವಿಧಾನ :
ಮಾವಿನಕಾಯಿಯನ್ನು ಸಣ್ಣದಾಗಿ ಕಟ್ ಮಾಡಿಟ್ಟುಕೊಂಡು, ಮೇಲಿನ ಎಲ್ಲ ಪುಡಿಗಳನ್ನು ಬೆರೆಸಿ, ಕೊನೆಯಲ್ಲಿ ಎಣ್ಣೆ ಸೇರಿಸಿ, 4 ವಾರಗಳ ಕಾಲ ಮುಚ್ಚಿ ಇಡಬೇಕು.
ಉಪ್ಪಿನಕಾಯಿ ಮಾಡುವಾಗ ಗಮನಿಸಬೇಕಾದ ಅಂಶ ವೆಂದರೆ, ಯಾವುದೇ ಪಾತ್ರೆ, ಚಮಚ ಹಾಗು ಕೈಯಲ್ಲಿ ಸ್ವಲ್ಪ ಕೂಡ ನೀರಿನ ಅಂಶ ಇರಬಾರದು. ಇದರಿಂದ ಉಪ್ಪಿನಕಾಯಿ ಬೇಗ ಕೆಡುತ್ತದೆ.

Saturday, March 28, 2009

BROCCOLI STIR FRY


ಬೇಕಾಗುವ ಸಾಮಗ್ರಿಗಳು:
Broccoli – ½ ಕೆ. ಜಿ.
ಬೆಳ್ಳುಳ್ಳಿ - 10 ಎಸಳು (ಸಣ್ಣಗೆ ಹೆಚ್ಚಿದ್ದು)
ಬೆಣ್ಣೆ - ಸ್ವಲ್ಪ
ಲಿಂಬೆರಸ - 3 ಚಮಚ
ಕರಿಮೆಣಸಿನ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
Broccoliಯನ್ನು, ತೊಳೆದು ನೀರು ಒರೆಸಿಕೊಂಡು, ಸಣ್ಣ ಸಣ್ಣ ತುಂಡು ಮಾಡಬೇಕು.
ಒಂದು ನಾನ್ ಸ್ಟಿಕ್ ಪಾತ್ರೆಯಲ್ಲಿ, ಸ್ವಲ್ಪ ಬೆಣ್ಣೆ ಹಾಕಿಕೊಂಡು, ಇದರಲ್ಲಿ ಬೆಳ್ಳುಳ್ಳಿಯನ್ನು ಕೆಂಬಣ್ಣ ಬರುವ ತನಕ ಕಾಯಿಸಿಕೊಂಡು, Broccoliಯನ್ನು ಸೇರಿಸಿ, 10 ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಬೇಕು. ಕೊನೆಯಲ್ಲಿ ಸ್ವಲ್ಪ ಉಪ್ಪು, ಕರಿಮೆಣಸಿನ ಪುಡಿ, ಲಿಂಬೆ ರಸ ಸೇರಿಸಿದರೆ Broccoli stir fry ಸಿದ್ದ. ಇದನ್ನು starter ಆಗಿ ಉಪಯೋಗಿಸಬಹುದು.

Broccoliಯಲ್ಲಿ ವಿಟಮಿನ್ ಸಿ, ಕೆ ಹಾಗು ಬಿಯು ಧಾರಾಳವಾಗಿ ಸಿಗುತ್ತದೆ (http://en.wikipedia.org/wiki/Broccoli).


ಇದೇ ರೀತಿ Broccoliಯೊಂದಿಗೆ cauliflowerನ್ನು ಸೇರಿಸಿ ಕೂಡ ಮಾಡಬಹುದು.

Friday, March 27, 2009

ಮೆಂತೆ ಸೊಪ್ಪು - ಹೆಸರುಕಾಳು ಪಲ್ಯ


ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 1 ಕಪ್
ಮೆಂತೆ ಸೊಪ್ಪು - 3-4 ಕಪ್ (ಹೆಚ್ಚಿದ್ದು)
ಮೊಳಕೆ ಬರಿಸಿದ ಹೆಸರುಕಾಳು - 1 ½ ಕಪ್
ಟೊಮೇಟೊ - ¼ ಕಪ್
ಮಸಾಲೆಗೆ:
ಕೊತ್ತಂಬರಿ ಬೀಜ - 3 ಚಮಚ
ಜೀರಿಗೆ - 1 ಚಮಚ
ಮೆಂತೆ - 10 ಕಾಳು
ಬ್ಯಾಡಗಿ ಮೆಣಸಿನಕಾಯಿ - 8-10
ಬೆಳ್ಳುಳ್ಳಿ - 3 ದೊಡ್ಡ ಎಸಳು
ಹಳದಿ - ಸ್ವಲ್ಪ
ತೆಂಗಿನ ತುರಿ - 1- 1 ½ ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಾಡುವ ವಿಧಾನ:
ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಹಾಗು ಮೆಣಸನ್ನು ಬೇರೆ ಬೇರೆಯಾಗಿ ಸ್ವಲ್ಪ ಎಣ್ಣೆ ಹಾಕಿ ಘಮ್ ಎನ್ನುವ ತನಕ ಹುರಿಯಬೇಕು. ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ತೆಗೆದು ಇಟ್ಟುಕೊಳ್ಳಬೇಕು. ನಂತರ ತೆಂಗಿನ ತುರಿ ಹಾಗು ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಸೇರಿಸಿ, ನೀರು ಹಾಕದೆ ಮಿಕ್ಸಿಯಲ್ಲಿ 10 ಸೆಕೆಂಡ್ ರುಬ್ಬಬೇಕು. ತೆಂಗಿನ ತುರಿ ಸ್ವಲ್ಪ ಸಣ್ಣಗಾದರೆ ಸಾಕು, ಹೆಚ್ಚು ನುಣ್ಣಗೆ ಆಗಬಾರದು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಇದರಲ್ಲಿ ಈರುಳ್ಳಿಯನ್ನು 2 ನಿಮಿಷ ಹುರಿದುಕೊಂಡು, ಹೆಸರುಕಾಳನ್ನು ಸೇರಿಸಿ ½ ಕಪ್ ನೀರು ಹಾಗು ಟೊಮೇಟೊ, ಸೇರಿಸಿ, 15- 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ, ಸಣ್ಣಗೆ ಕಟ್ ಮಾಡಿದ ಸೊಪ್ಪು, ಉಪ್ಪು, ತೆಂಗಿನಕಾಯಿ ಹಾಗು ಮಸಾಲೆ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ, ಒಗ್ಗರಣೆ ಸೇರಿಸಿದರೆ, ಪಲ್ಯ ಸಿದ್ದ. ಕೊನೆಯಲ್ಲಿ ಸ್ವಲ್ಪ ಕಹಿ ಅನಿಸಿದರೆ, 1ಚಮಚ ಸಕ್ಕರೆ/ಬೆಲ್ಲ ಸೇರಿಸಬಹುದು.

Saturday, March 21, 2009

ಸಮೋಸ (SAMOSA)

ಬೇಕಾಗುವ ಸಾಮಗ್ರಿಗಳು
ಮೈದಾ - 2 ಕಪ್
ಆಲೂಗಡ್ಡೆ - 2 ಕಪ್ (ಬೇಯಿಸಿ, ಸಣ್ಣದಾಗಿ ಚೂರು ಮಾಡಿದ್ದು)
ಬೇಯಿಸಿದ ತರಕಾರಿಗಳು - ½ ಕಪ್ (ಬಟಾಣಿ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್)
ಈರುಳ್ಳಿ - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಹಸಿಮೆಣಸು - 1-2 (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಪುಡಿ - ¼ ಚಮಚ
ಜೀರಿಗೆ ಪುಡಿ - ¼ ಚಮಚ
ಖಾರ ಪುಡಿ - ¼ - ½ ಚಮಚ
ಗರಂ ಮಸಾಲ ಪುಡಿ - ¼ - ½ ಚಮಚ
ಚಾಟ್ ಮಸಾಲ ಪುಡಿ - ¼ ಚಮಚ
ಸೋಂಪು - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಸಾಲೆ ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಸೋಂಪು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಇದಕ್ಕೆ ಬೇಯಿಸಿದ ತರಕಾರಿಗಳನ್ನು (ಬೇಯಿಸಿದ ತರಕಾರಿಯನ್ನು, ಒಂದು ಬಟ್ಟೆಗೆ ಹಾಕಿ ನೀರಿನ ಅಂಶವನ್ನೆಲ್ಲಾ ತೆಗೆಯಬೇಕು) ಹಾಕಿ 2 ನಿಮಿಷ ಹುರಿದುಕೊಂಡು, ಕೊನೆಯಲ್ಲಿ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಹಾಗು ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಒಲೆಯಿಂದ ತೆಗೆದು ಇಡಬೇಕು.

ಸಮೋಸ ಮಾಡುವ ವಿಧಾನ:
ಮೈದಾಪುಡಿಗೆ ಸ್ವಲ್ಪ ಉಪ್ಪು ಸೇರಿಸಿ, 3-4 ಚಮಚ ಎಣ್ಣೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಬೇಕು, ಕೊನೆಯಲ್ಲಿ ಸ್ವಲ್ಪ ನೀರು ಸೇರಿಸಿಕೊಂಡು, ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಂಡು, ಒಂದು ಪಾತ್ರೆಯಲ್ಲಿ 30 ನಿಮಿಷ ಮುಚ್ಚಿಡಬೇಕು.
ಮೈದಾ ಹಿಟ್ಟಿನ ಸಣ್ಣ ಗೋಲಿಗಳನ್ನು ಮಾಡಿ, ಚಪಾತಿಯಂತೆ ಲಟ್ಟಿಸಬೇಕು. ಇದನ್ನು ಚಾಕುವಿನಿಂದ ಅರ್ಧ ಚಂದ್ರಾಕೃತಿಗೆ ಕತ್ತರಿಸಿ, ಎಲ್ಲಾ ಬದಿಗಳಿಗೆ ತೆಳ್ಳಗೆ ನೀರು ಸವರಬೇಕು. ನಂತರ coneನ ಶೇಪ್ ನಲ್ಲಿ ಮಡಚಿ ಒಳಗೆ ಮಸಾಲೆಯನ್ನು ತುಂಬಿ, ಕೊನೆಗೆ ಮೇಲಿನ ಭಾಗವನ್ನು, ಸ್ವಲ್ಪ ನೀರು ಮುಟ್ಟಿಸಿಕೊಂಡು ಮುಚ್ಚಬೇಕು. ಇದನ್ನು ಎಣ್ಣೆಯಲ್ಲಿ ಕರಿದರೆ ಸಮೋಸ ಸಿದ್ದ.
ಆದರೆ ಇದಕ್ಕೆ ಎಣ್ಣೆ ಜಾಸ್ತಿ ಕಾಯಬಾರದು. ಸಣ್ಣ ತುಂಡು, ಚಪಾತಿಯನ್ನು ಹಾಕಿದಾಗ ಅದು ಮೇಲಕ್ಕೆ ಬರಬಾರದು. ಇದನ್ನು ಟೊಮೇಟೊ ಸಾಸ್ ಅಥವಾ ಸಿಹಿ ಚಟ್ನಿ ಮತ್ತು ಖಾರ ಚಟ್ನಿಯ ಜೊತೆ ಸವಿಯಬೇಕು.

ಸಿಹಿ ಚಟ್ನಿ ಮಾಡುವ ವಿಧಾನ
ಖರ್ಜೂರ - 4-5
ಹುಣಸೆ ಹಣ್ಣು - ಸಣ್ಣ ನಿಂಬೆಯ ಗಾತ್ರದ್ದು
ಬೆಲ್ಲ - 1-2 ಟೇಬಲ್ ಸ್ಪೂನ್
ಉಪ್ಪು - ಸ್ವಲ್ಪ
ಮೆಣಸಿನ ಪುಡಿ - 1/2 ಚಮಚ
ಖರ್ಜೂರ ಹಾಗು ಹುಣಸೆಹಣ್ಣನ್ನು ಸ್ವಲ್ಪ ನೀರಿನೊಂದಿಗೆ ಬೇಯಿಸಬೇಕು. ನಂತರ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು, ಪುನ: ಪಾತ್ರೆಗೆ ಹಾಕಿ ಬೆಲ್ಲ ಸೇರಿಸಿ, ಚೆನ್ನಾಗಿ ಸ್ವಲ್ಪ ಗಟ್ಟಿಯಾಗುವ ತನಕ ಕುದಿಸಬೇಕು. ಕೊನೆಯಲ್ಲಿ ಉಪ್ಪು ಹಾಗು ಮೆಣಸಿನ ಪುಡಿ ಸೇರಿಸಿ, ಒಮ್ಮೆ ಕುದಿಸಿ ತೆಗೆಯಬೇಕು.

ವೆಜ್ ಪಫ್ಫ್ಸ್ (VEG PUFFS)

ಬೇಕಾಗುವ ಸಾಮಗ್ರಿಗಳು:
ಪಫ್ಫ್ಸ್ ಪೇಸ್ತ್ರೀ ಶೀಟುಗಳು (Puff Pastry sheets, super marketಗಳ frozen sectionನಲ್ಲಿ ಸಿಗುತ್ತದೆ)
ಆಲೂಗಡ್ಡೆ - 2 ಕಪ್ (ಬೇಯಿಸಿ, ಸಣ್ಣದಾಗಿ ಚೂರು ಮಾಡಿದ್ದು)
ಬೇಯಿಸಿದ ತರಕಾರಿಗಳು - ½ ಕಪ್ (ಬಟಾಣಿ, ಸಣ್ಣಗೆ ಹೆಚ್ಚಿದ ಕ್ಯಾರೆಟ್, ಬೀನ್ಸ್)
ಈರುಳ್ಳಿ - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಸೊಪ್ಪು - ¼ ಕಪ್ (ಸಣ್ಣಕೆ ಹೆಚ್ಚಿದ್ದು)
ಹಸಿಮೆಣಸು - 1-2 (ಸಣ್ಣಕೆ ಹೆಚ್ಚಿದ್ದು)
ಕೊತ್ತಂಬರಿ ಪುಡಿ - ¼ ಚಮಚ
ಜೀರಿಗೆ ಪುಡಿ - ¼ ಚಮಚ
ಖಾರ ಪುಡಿ - ¼ - ½ ಚಮಚ
ಗರಂ ಮಸಾಲ ಪುಡಿ - ¼ - ½ ಚಮಚ
ಚಾಟ್ ಮಸಾಲ ಪುಡಿ - ¼ ಚಮಚ
ಸೋಂಪು - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಸಾಲೆ ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಸೋಂಪು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಇದಕ್ಕೆ ಬೇಯಿಸಿದ ತರಕಾರಿಗಳನ್ನು (ಬೇಯಿಸಿದ ತರಕಾರಿಯನ್ನು, ಒಂದು ಬಟ್ಟೆಗೆ ಹಾಕಿ ನೀರಿನ ಅಂಶವನ್ನೆಲ್ಲಾ ತೆಗೆಯಬೇಕು) ಹಾಕಿ 2 ನಿಮಿಷ ಹುರಿದುಕೊಂಡು, ಕೊನೆಯಲ್ಲಿ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಹಾಗು ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಒಲೆಯಿಂದ ತೆಗೆದು ಇಡಬೇಕು.

ಪಫ್ಫ್ಸ್ ಮಾಡುವ ವಿಧಾನ - ಪಫ್ಫ್ ಪೇಸ್ತ್ರೀ ಶೀಟುಗಳನ್ನು, ಫ್ರಿಜ್ ನಿಂದ ಹೊರಗೆ ತೆಗೆದು 40 ನಿಮಿಷ ಇಡಬೇಕು.
ಇದನ್ನು ಉದ್ದಕ್ಕೆ ಬಿಡಿಸಿಕೊಂಡು, ಆಯತಾಕಾರದಲ್ಲಿ ಕತ್ತರಿಸಬೇಕು. ಇದರ ಒಂದು ಬಾಗದಲ್ಲಿ ಮಸಾಲೆಯನ್ನು ಇಟ್ಟು, 4 sideಗೆ ಬೆರಳಿನಿಂದ ನೀರು ಸವರಿ, ಇನ್ನೊಂದು ಬಾಗವನ್ನು ಮಡಚಿ ಮುಚ್ಚಬೇಕು. ನಂತರ ಎಲ್ಲ ಬದಿಯನ್ನು ಚೆನ್ನಾಗಿ seal ಮಾಡಬೇಕು. ಒಂದು Aluminium ಶೀಟ್ ನಲ್ಲಿ ಇಟ್ಟು ಓವೆನ್ ನಲ್ಲಿ 350 - 450 Fನಲ್ಲಿ, 30 ನಿಮಿಷ ಬೇಯಿಸಬೇಕು.

ಟಿಪ್ಸ್: ಬೇಯಿಸಿದ ಮೊಟ್ಟೆಯನ್ನು ಅರ್ಧ ಕತ್ತರಿಸಿ, ಅಥವಾ ಚಿಕನ್ ತುಂಡುಗಳನ್ನು (roasted) ಮಸಾಲೆಯ ಜೊತೆಗೆ ಬೆರೆಸಿ ಇಟ್ಟರೆ, Egg/ Chicken ಪಫ್ಫ್ ತಯಾರು. ಈ ಮಸಾಲೆಗೆ, ಸ್ವಲ್ಪ ಜಾಸ್ತಿ ಗರಂ ಮಸಾಲ ಹಾಗು ಕರಿಮೆಣಸಿನಪುಡಿಯನ್ನು ಹಾಕಿದರೆ ಚೆನ್ನಾಗಿರುತ್ತದೆ.