My photo
ಕರಾವಳಿ ಹುಡುಗಿ :)

Friday, December 19, 2008

ಬದನೆಕಾಯಿ ಗೊಜ್ಜು / BRINJAL GOJJU / BAINGAN BARTHA


ಬೇಕಾಗುವ ಸಾಮಗ್ರಿಗಳು:

ಗುಳ್ಳ ಬದನೆ - 1
ಈರುಳ್ಳಿ (ಸಣ್ಣಗೆ ಹೆಚ್ಚಿದ್ದು) - 1 ಕಪ್
ಹಸಿ ಮೆಣಸು- 2 (ಸಣ್ಣಗೆ ಸೀಳಿದ್ದು)
ಹುಣಸೆ ಹಣ್ಣಿನ ರಸ- 4 ಚಮಚ
ಬೆಲ್ಲ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 5 ಚಮಚ
ಒಗ್ಗರಣೆಗೆ - ಸ್ವಲ್ಪ ಎಣ್ಣೆ, ಸಾಸಿವೆ, ಹಿಂಗು, ಕರಿಬೇವು, ಬೆಳ್ಳುಳ್ಳಿ
ಬದನೇಕಾಯಿಯನ್ನು ತೊಳೆದುಕೊಂಡು, ಸ್ವಲ್ಪ ಎಣ್ಣೆಯನ್ನು ಸವರಬೇಕು. ನಂತರ ಒಲೆಯ ಕೆಂಡದಲ್ಲಿ ಇಟ್ಟು 5 ನಿಮಿಷಕ್ಕೊಮ್ಮೆ ಬದನೆಕಾಯಿಯ ಬದಿಯನ್ನು ತಿರುಗಿಸುತ್ತಾ ಸಿಪ್ಪೆ ಚೆನ್ನಾಗಿ ಬಾಡುವ ತನಕ ಸುಡಬೇಕು. ಒಲೆ ಇಲ್ಲದಿದ್ದರೆ, ಕಾವಲಿಗೆಯಲ್ಲಿ ಎಣ್ಣೆ ಸವರಿ ಮಾಡಬಹುದು. ಎಲ್ಲಾ ಬದಿಗಳನ್ನು ಸಮವಾಗಿ ಸುಟ್ಟ ನಂತರ, ತಣ್ಣಗೆ ಅದ ಮೇಲೆ, ಸಿಪ್ಪೆಯನ್ನು ಕೈಯಿಂದ ಎಳೆದು ತೆಗೆಯಬೇಕು. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ, ಕೈಯಿಂದ ಅಥವಾ ಸೌಟಿನ ಸಹಾಯದಿಂದ, ಸಣ್ಣಗೆ ಜಜ್ಜಿ, ಬದಿಯಲ್ಲಿಡಿ.
ಇನ್ನು, ಒಂದು ಬಾಣಲೆಗೆ, ಎಣ್ಣೆಯನ್ನು ಹಾಕಿ, ಹಸಿಮೆಣಸು ಸೇರಿಸಿ, ಈರುಳ್ಳಿಯನ್ನು ಚೆನ್ನಾಗಿ ಬಣ್ಣ ಬರುವ ತನಕ ಹುರಿಯಿರಿ. ಕೊನೆಯಲ್ಲಿ ಇದಕ್ಕೆ ಜಜ್ಜಿದ ಬದನೆಕಾಯಿಯನ್ನು ಸೇರಿಸಿ, ಹುಣಸೆ ರಸ, ಸ್ವಲ್ಪ ಬೆಲ್ಲ ಹಾಗು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ, 5 ನಿಮಿಷ ಬೇಯಿಸಿರಿ. ಇದಕ್ಕೆ ಒಗ್ಗರಣೆ ಸೇರಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ, ಸವಿಯಲು ಕೊಡಿರಿ.
ಇದನ್ನು ಚಪಾತಿ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.

Thursday, December 18, 2008

ಪಾಲಕ್ ಪರೋಟ ಹಾಗು ಎಲೆಕೋಸು ಚಟ್ನಿ (Palak Parota and Cabbage chutny)

ಬೇಕಾಗುವ ಸಾಮಗ್ರಿಗಳು:
ಪಾಲಕ್ ಸೊಪ್ಪು (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಗೋಧಿ ಹಿಟ್ಟು- ೩ ಕಪ್
ಉಪ್ಪು- ರುಚಿಗೆ ತಕ್ಕಷ್ಟು
ಮೇಲಿನ ಎಲ್ಲ ಸಾಮಗ್ರಿಗಳನ್ನು, ಬೇಕಾದಷ್ಟು ನೀರು ಬೆರೆಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ನಾದಿ ಇಟ್ಟುಕೊಳ್ಳಬೇಕು. ಸಣ್ಣ ಉಂಡೆಯನ್ನು ಮಾಡಿಕೊಂಡು, ಮೇಲುಗಡೆಗೆ ಸ್ವಲ್ಪ ಗೋಧಿ ಪುಡಿಯನ್ನು ಹರಡಿ, ಚಪಾತಿಯನ್ನು ಲಟ್ಟಿಸಿಕೊಂಡು, ಕಾದ ಕಾವಲಿಯಲ್ಲಿ ಹಾಕಿ ಎರಡು ಬದಿ ಬೇಯಿಸಿದರೆ, ಪಾಲಕ್ ಚಪಾತಿ ಅಥವಾ ಪಾಲಕ್ ಪರೋಟ ತಿನ್ನಲು ರೆಡಿ.

ಪಾಲಕ್ ಅತ್ಯಂತ ಆರೋಗ್ಯಕರ ತರಕಾರಿ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಎ ಹಾಗು ಸಿ ಹೇರಳವಾಗಿ ಲಭಿಸುತ್ತದೆ (http://en.wikipedia.org/wiki/Spinach).


ಚಟ್ನಿ ಗೆ ಬೇಕಾಗುವ ಸಾಮಗ್ರಿಗಳು:
ಎಲೆಕೋಸು (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಟೊಮೇಟೊ (ಸಣ್ಣಗೆ ಹೆಚ್ಚಿದ್ದು)- ೧ ಕಪ್
ಹಸಿಮೆಣಸಿನ ಕಾಯಿ-೨
ಎಣ್ಣೆ- ೫ ಚಮಚ
ಜೀರಿಗೆ- ೧/೨ ಚಮಚ
ಕಡಲೆಬೇಳೆ- ೧/೨ ಚಮಚ
ಉದ್ದಿನಬೇಳೆ- ೧/೨ ಚಮಚ
ಉಪ್ಪು- ರುಚಿಗೆ ತಕ್ಕಷ್ಟು


ಒಗ್ಗರೆಣೆಗೆ:
ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಎಲೆ.

ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಜೀರಿಗೆ ಕಡಲೆಬೇಳೆ, ಉದ್ದಿನಬೇಳೆ ಸೇರಿಸಿ ಕೆಂಪಾಗುವ ತನಕ ಹುರಿಯಬೇಕು. ನಂತರ ಈರುಳ್ಳಿ, ಎಲೆಕೋಸು, ಟೊಮೇಟೊ, ಒಂದೊಂದೇ ಸೇರಿಸಿಕೊಂಡು ಸ್ವಲ್ಪ ಹುರಿಯಬೇಕು. ಬಿಸಿ ಆರಿದ ಮೇಲೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಿಕ್ಸಿ ಯಲ್ಲಿ ಚಟ್ನಿ ಹದಕ್ಕೆ ರುಬ್ಬಬೇಕು. ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ ಚಟ್ನಿ ಸವಿಯಲು ಸಿದ್ದ.
ಸೂಚನೆ: ಭಾರತದಲ್ಲಿ ಕ್ಯಾಬೇಜ್ ಚಟ್ನಿ ಮಾಡುವವರು, ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕ್ಯಾಬೇಜ್ ತೆಗೆದುಕೊಂಡು, ಜಾಸ್ತಿ ಹೊತ್ತು ಹುರಿದರೆ ಒಳ್ಳೆಯದು.

Monday, December 8, 2008

ಮೆಣಸುಕಾಯಿ


ಇದಕ್ಕೆ ಯಾಕೆ ಈ ಹೆಸರು ಬಂತು ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಅಮ್ಮ ಇದನ್ನು ಮಾಡುತ್ತ ಇದ್ದುದನ್ನು ನೋಡಿ ನಾನು ಕಲಿತೆ. ಇದು ಹವ್ಯಕ ಸಮಾಜ ಬಾಂಧವರ ಒಂದು ಸ್ಪೆಷಲ್ ಅಡುಗೆ.

ಬೇಕಾಗುವ ಸಾಮಗ್ರಿಗಳು:
ಅನಾನಸು ಹೋಳುಗಳು-೧ ಕಪ್
ತೆಂಗಿನತುರಿ-೧ ಕಪ್
ಮೆಣಸು- ೮-೧೦
ಎಳ್ಳು-೨ ಚಮಚ
ಉದ್ದಿನಬೇಳೆ-೧ ಚಮಚ
ಹುಣಿಸೇಹಣ್ಣು- ಸ್ವಲ್ಪ
ಬೆಲ್ಲ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಒಗ್ಗರೆಣೆಗೆ:ಸಾಸಿವೆ, 1-ಮೆಣಸು, ಕರಿಬೇವು, ಹಿಂಗು.

ಉದ್ದಿನಬೇಳೆ ಹಾಗು ಎಳ್ಳನ್ನು ಎಣ್ಣೆ ಹಾಕದೆ ಪ್ರತ್ಯೇಕವಾಗಿ ಹುರಿಯಿರಿ. ಕಪ್ಪು ಎಳ್ಳನ್ನು ಉಪಯೋಗಿಸಿದರೆ ಅದರ ಸಿಪ್ಪೆಯನ್ನು ಕೈಯಿಂದ ಉಜ್ಜಿ ಬೇರ್ಪಡಿಸಿ. ನಂತರ ಸ್ವಲ್ಪ ಎಣ್ಣೆ ಹಾಕಿ ಮೆಣಸನ್ನು ಹುರಿದಿಡಿ. ಹಾಗೆಯೆ ತೆಂಗಿನಕಾಯಿ ತುರಿಯನ್ನು ಸ್ವಲ್ಪ ಬಾಡಿಸಿ. ನಂತರ ಇದನ್ನು ನುಣ್ಣಗೆ ರುಬ್ಬಿಡಿರಿ.ಒಂದು ಪಾತ್ರೆಯಲ್ಲಿ ಅನಾನಸು ಹೋಳುಗಳನ್ನು ಸ್ವಲ್ಪ ನೀರು ಸೇರಿಸಿ 5-8 ನಿಮಿಷ ಬೇಯಿಸಿರಿ. ಇದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ, ಬೇಕಾದಷ್ಟು ಪ್ರಮಾಣದಲ್ಲಿ ಉಪ್ಪು, ಹುಳಿ, ಬೆಲ್ಲ ಹಾಗು ನೀರು ಸೇರಿಸಿ ೫ ನಿಮಿಷ ಕುದಿಸಿರಿ. ಸ್ವಲ್ಪ ಎಣ್ಣೆಯಲ್ಲಿ ಸಾಸಿವೆ, ಹಿಂಗು ಮತ್ತು ಕರಿಬೇವು ಸೇರಿಸಿ ಒಗ್ಗರಣೆ ಕೊಡಿರಿ. ಇದು ಅನ್ನದೊಂದಿಗೆ ಸವಿಯಲು ರುಚಿ.
ಮೆಣಸುಕಾಯಿಯನ್ನು ಹಾಗಲಕಾಯಿ ಅಥವಾ ಮಾವಿನ ಹಣ್ಣಿನಿಂದ ಕೂಡ ಮಾಡಬಹುದು.

Sunday, December 7, 2008

ಬಾಳೆಹಣ್ಣು ದೋಸೆ (Banana / Balehannu Dose)



ಬೇಕಾಗುವ ಸಾಮಗ್ರಿಗಳು:

ದೋಸೆ ಅಕ್ಕಿ-೧ ಕಪ್
ಬಾಳೆಹಣ್ಣು-೧ (ನೇಂದ್ರ ಬಾಳೆಹಣ್ಣಿನ ಗಾತ್ರದ್ದು)
ಉಪ್ಪು- ರುಚಿಗೆ ತಕ್ಕಷ್ಟು

ಅಕ್ಕಿಯನ್ನು ೪-೫ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು ರುಬ್ಬಿರಿ, ಕೊನೆಯಲ್ಲಿ ಬಾಳೆಹಣ್ಣು ಸೇರಿಸಿ ರುಬ್ಬಿರಿ. ಉಪ್ಪು ಸೇರಿಸಿಕೊಂಡು, ದೋಸೆಯ ಹಿಟ್ಟಿನ ಹದಕ್ಕೆ ಬೇಕಾದಷ್ಟು ನೀರು ಸೇರಿಸಿ. ಒಲೆಯ ಮೇಲೆ ಕಾವಲಿ ಇಟ್ಟು, ಕಾವಲಿಗೆ ಬೆಣ್ಣೆ ಅಥವಾ ಎಣ್ಣೆಯನ್ನು ಸವರಿ, ಒಂದು ಸೌಟಿನಷ್ಟು ಹಿಟ್ಟನ್ನು ಹೆಂಚಿನ ಮೇಲೆ ಹಾಕಿ ಮಗಚುವಕೈಯಲ್ಲಿ ಎರಡೂ ಬದಿ ಬೇಯಿಸಿದರೆ, ಬಾಳೆಹಣ್ಣು ದೋಸೆ ರೆಡಿ. ತೆಂಗಿನಕಾಯಿಯ ಚಟ್ನಿಯ ಜೊತೆಗೆ ಸವಿಯಲು ಕೊಡಿರಿ.
ಇದಕ್ಕೆ ಕೊನೆಯಲ್ಲಿ 1/4 ಕಪ್ ರವೆ ಸೇರಿಸಿಕೊಂಡರೆ, ದೋಸೆ ಚೆನ್ನಾಗಿ ಗರಿ ಗರಿಯಾಗಿರುತ್ತದೆ.