My photo
ಕರಾವಳಿ ಹುಡುಗಿ :)

Sunday, August 30, 2009

ಕೋಸಂಬರಿ / KOSAMBARI

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ -1 ತುರಿದುಕೊಂಡು
ಹೆಸರುಬೇಳೆ - ¼ ಕಪ್

ತೆಂಗಿನ ತುರಿ - ಸ್ವಲ್ಪ
ಹಸಿಮೆಣಸು - 1 ಸಣ್ಣಗೆ ಹೆಚ್ಚಿ
ಉಪ್ಪು - ರುಚಿಗೆ ತಕ್ಕಷ್ಟು
ಲಿಂಬೆ ರಸ - ಸ್ವಲ್ಪ
ಒಗ್ಗರೆಣೆಗೆ - ಎಣ್ಣೆ, ಸಾಸಿವೆ, 1 ಒಣಮೆಣಸು, ಹಿಂಗು ಹಾಗು ಕರಿಬೇವು

ಮಾಡುವ ವಿಧಾನ:
ಹೆಸರುಬೇಳೆಯನ್ನು 2-3 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ತೊಳೆದು, ಬಸಿದುಕೊಂಡು ಮೇಲಿನ ಎಲ್ಲ ಸಾಮಗ್ರಿಗಳೊಂದಿಗೆ ಸೇರಿಸಿ, ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ ಕೋಸಂಬರಿ ಸಿದ್ದ. ಇದು ಆರೋಗ್ಯಕ್ಕೆ ತುಂಬ ಉತ್ತಮ.
ಇದಕ್ಕೆ ಬೇಕಿದ್ದರೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಕೂಡ ಸೇರಿಸಬಹುದು.

ಆಗಸ್ಟ್ 30, 2009 ರಂದು ಬರೆದಿದ್ದ ಇದನ್ನು ಅನಿವಾರ್ಯ ಕಾರಣಗಳಿಂದಾಗಿ ಪೋಸ್ಟ್ ಮಾಡಲಾಗಲಿಲ್ಲ.
ಇವತ್ತು ಸೆಪ್ಟೆಂಬರ್ 5, ಶಿಕ್ಷಕರ ದಿನ..ತಮ್ಮ ಬಾಳಿನುದ್ದಕ್ಕೂ ಆದರ್ಶ ಶಿಕ್ಷಕರಾಗಿ ದುಡಿದ ನನ್ನ ಪ್ರೀತಿಯ ಅಪ್ಪನ ಸವಿನೆನಪಿನೊಂದಿಗೆ.......

Tuesday, August 18, 2009

ಗುಳಿಅಪ್ಪ / ಗುಳಿಯಪ್ಪ


ಮಂಗಳೂರಿನ ತಿಂಡಿಗಳಲ್ಲಿ ತರಕಾರಿಗಳು ಸಾಮಾನ್ಯ. ಇದರಲ್ಲಿ ಪ್ರಮುಖವಾದುವುಗಳೆಂದರೆ ಸೌತೆಕಾಯಿ (ಮಂಗಳೂರು ಸೌತೆ), ಮುಳ್ಳುಸೌತೆ (ಸೌತೆಕಾಯಿ), ಸೋರೆಕಾಯಿ, ಹಲಸಿನ ಹಣ್ಣು/ ಕಾಯಿ - ಮುಂತಾದುವುಗಳಿಂದ ತಯಾರಿಸಿದ ದೋಸೆ ಹಾಗು ಕಡುಬುಗಳು (ಅಡ್ಯ =ತುಳು). ಗುಳಿಅಪ್ಪವನ್ನು ಗುಂಡಿಗಳಿರುವ ಕಬ್ಬಿಣದ/Nonstick ಕಾವಲಿಗೆಯಲ್ಲಿ ಮಾಡುತ್ತಾರೆ.

ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ನಾವು ಚಿಕ್ಕವರಿದ್ದಾಗ ನಮಗೆ ಗುಳಿಯಪ್ಪ ಬಹಳ ಇಷ್ಟದ ತಿಂಡಿಯಾದುದರಿಂದ, ಬೆಳಗ್ಗಿನ ದೋಸೆ ಅಥವಾ ಇಡ್ಲಿ ಹಿಟ್ಟು (ಅಕ್ಕಿ ಅಥವಾ ರವೆ) ಉಳಿದಿದ್ದರೆ, ಅದಕ್ಕೆ ಸಂಜೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಅಮ್ಮ ಗುಳಿಅಪ್ಪ ಮಾಡುತ್ತಿದ್ದರು.

ಇನ್ನೊಂದು ರೀತಿಯ ಗುಳಿಅಪ್ಪ ಸೌತೆ ಕಾಯಿ (ಮುಳ್ಳುಸೌತೆ) ಹಾಕಿ ಮಾಡುವುದು. ಇದನ್ನು ಖಾರ ಅಥವಾ ಸಿಹಿಯಾಗಿ ಮಾಡಬಹುದು. ಖಾರ ಗುಳಿಯಪ್ಪ (ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ) ಬೆಳಗ್ಗಿನ ತಿಂಡಿಯಾದರೆ, ಸಿಹಿ ಗುಳಿಅಪ್ಪ ಹೆಚ್ಚಾಗಿ ಸಂಜೆ ಮಾಡುತ್ತಾರೆ. ಸೌತೆಕಾಯಿಯ ಬದಲು ಹಲಸಿನ ಹಣ್ಣು ಅಥವಾ ಬಾಳೆಹಣ್ಣು ಸೇರಿಸಿಕೊಂಡು ಅಕ್ಕಿಯ ಜೊತೆಗೆ ರುಬ್ಬಿ ಕೂಡ ಮಾಡಬಹುದು.

ಗುಳಿಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್
ಸೌತೆ ಕಾಯಿ - ½ ಕಪ್ (ಸಿಪ್ಪೆ ತೆಗೆದು ತುರಿದುಕೊಂಡು)
ಬೆಲ್ಲ - ¼ ಕಪ್
ತೆಂಗಿನ ತುರಿ - ¼ ಕಪ್ (ತುರಿದು)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ- ಸ್ವಲ್ಪ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಇದಕ್ಕೆ ಸೌತೆಕಾಯಿಯ ನೀರನ್ನು ಉಪಯೋಗಿಸಬಹುದು. ಕೊನೆಯಲ್ಲಿ ಬೆಲ್ಲ ಹಾಗು ತೆಂಗಿನ ತುರಿ ಸೇರಿಸಿಕೊಂಡು 1ನಿಮಿಷ ರುಬ್ಬಿಕೊಂಡು ಈ ಮಿಶ್ರಣವನ್ನು ಸೌತೆಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಬಿಸಿ ಯಾಗಿರುವ ಗುಳಿಯಪ್ಪದ ಕಾವಲಿಗೆ ¼ ಚಮಚ ಎಣ್ಣೆ /ತುಪ್ಪ ಹಾಕಿಕೊಂಡು ಗುಳಿಯ ¾ ಭಾಗದ ವರೆಗೆ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಬೇಕು. 3-4 ನಿಮಿಷದ ನಂತರ ಇದನ್ನು ತಿರುವಿ ಹಾಕಿ ಪುನ: 1-2 ನಿಮಿಷ ಬೇಯಿಸಿದರೆ ಗುಳಿಯಪ್ಪ ತಿನ್ನಲು ಸಿದ್ದ. ಇದನ್ನು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಬಹುದು.

Saturday, August 15, 2009

Egg Pepper Fry

ಈ ರೆಸಿಪಿ ಸಿಕ್ಕಿದ್ದು ಒಬ್ಬ ಕೇರಳದ ಸಹೋದ್ಯೋಗಿಯಿಂದ. ಫ್ರಿಜ್ ಇರುವವರು ಮೊಟ್ಟೆಯನ್ನು boil ಮಾಡಿ ಶೇಖರಿಸಿಟ್ಟರೆ ಇದನ್ನು ಕೇವಲ 10 ನಿಮಿಷದಲ್ಲಿ ಮಾಡಬಹುದು. ಈರುಳ್ಳಿಯನ್ನು ಚೆನ್ನಾಗಿ ಕೆಂಪಗೆ ಆಗುವ ತನಕ ಹುರಿದರೆ flavour ಬಹಳ ಚೆನ್ನಾಗಿ ಬರುತ್ತದೆ.


ಬೇಕಾಗುವ ಸಾಮಗ್ರಿಗಳು:
ಮೊಟ್ಟೆ / Egg - 6
ಈರುಳ್ಳಿ - ½ ಕಪ್
ಕರಿಮೆಣಸಿನ ಪುಡಿ / Pepper - ½ -1 ಚಮಚ
ಹಳದಿ ಪುಡಿ - ಸ್ವಲ್ಪ
ಜೀರಿಗೆ -½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು


ಮಾಡುವ ವಿಧಾನ:
ಮೊಟ್ಟೆಗಳನ್ನು ಕುದಿಯುವ ನೀರಿನಲ್ಲಿ ಸ್ವಲ್ಪ ಉಪ್ಪು ಸೇರಿಸಿಕೊಂಡು 10-15 ನಿಮಿಷ ಬೇಯಿಸಿಕೊಳ್ಳಿ. ಇದು ತಣ್ಣಗಾದ ನಂತರ ಸಿಪ್ಪೆ ಬೇರ್ಪಡಿಸಿ, ಬೇಕಾದ ರೀತಿಯಲ್ಲಿ ತುಂಡು ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 2-3 ಚಮಚ ಎಣ್ಣೆ ಹಾಕಿ, ಬಿಸಿಯಾದ ನಂತರ ½ ಚಮಚ ಜೀರಿಗೆ ಹಾಗು ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಿರಿ. ಕೊನೆಯಲ್ಲಿ ಸ್ವಲ್ಪ ಹಳದಿ ಪುಡಿ ಸೇರಿಸಿ 1 ನಿಮಿಷ ಹುರಿದುಕೊಂಡು ತುಂಡು ಮಾಡಿಟ್ಟ ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಗು ಕರಿಮೆಣಸಿನ ಪುಡಿ ಯನ್ನು ಸೇರಿಸಿ, 5 ನಿಮಿಷ ಸಣ್ಣ ಉರಿಯಲ್ಲಿ , ಮೊಟ್ಟೆ ಹಳದಿ ಬೇರ್ಪಡದಂತೆ ಮೆಲ್ಲಗೆ ತಿರುವಿದರೆ, egg pepper fry ರೆಡಿ. ಬೇಕಿದ್ದರೆ ½ ಚಮಚ ನಿಂಬೆ ರಸ ಹಾಗು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.ಇದನ್ನು ಪಲ್ಯದಂತೆ ಅನ್ನ ಅಥವಾ ಚಪಾತಿ ಜೊತೆಗೆ ತಿನ್ನಬಹುದು.

Sunday, August 2, 2009

ಪಾಸ್ತಾ / PASTA (Kids Favuorite; Indian Version)


ಬೇಕಾಗುವ ಸಾಮಗ್ರಿಗಳು:
ಪಾಸ್ತಾ - 200g
ಈರುಳ್ಳಿ - ½ ಕಪ್
ಕ್ಯಾಬೇಜ್ - ½ ಕಪ್ (ಉದ್ದಕೆ ತೆಳ್ಳಗೆ ಹೆಚ್ಚಿ)
Capsicum – ¼ ಕಪ್ (ಉದ್ದಕೆ ತೆಳ್ಳಗೆ ಹೆಚ್ಚಿ)
ತರಕಾರಿಗಳು - 1 ಕಪ್ (ಬೀನ್ಸ್, ಕ್ಯಾರೆಟ್, ಬಟಾಣಿ - ಸಣ್ಣಗೆ ಹೆಚ್ಚಿ ಬೇಯಿಸಿಟ್ಟುಕೊಳ್ಳಬೇಕು)
ಟೊಮೇಟೊ ಸಾಸ್ - 1-2 ಚಮಚ
ಸೋಯಾ ಸಾಸ್ - ½ ಚಮಚ
Heavy whipping cream - 2 ಟೇಬಲ್ ಸ್ಪೂನ್
Paramesan Cheese grated– 2-3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪಾಸ್ತಾವನ್ನು ಪ್ಯಾಕೆಟ್ ನಲ್ಲಿರುವ ಸೂಚನೆಯಂತೆ 10-12 ನಿಮಿಷ ಬೇಯಿಸಿ, ನೀರನ್ನು ಬಸಿಯಬೇಕು. ಪಾಸ್ತಾ ಬೇಯಿಸುವಾಗ ಕುದಿಯುವ ನೀರಿಗೆ ಸ್ವಲ್ಪಉಪ್ಪು ಹಾಗು 2 ಚಮಚ ಎಣ್ಣೆ ಹಾಕಿದರೆ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಬಸಿದಿಟ್ಟ ಪಾಸ್ತಾಕ್ಕೆ 2 ಚಮಚ ಎಣ್ಣೆ (olive oil ಹಾಕಿದರೆ ಉತ್ತಮ) ಹಾಕಿ ಮಗುಚಿಕೊಂಡು ಬದಿಯಲ್ಲಿಡಬೇಕು.
ಇದೇ ಸಮಯದಲ್ಲಿ ಒಂದು ದಪ್ಪ ತಳದ ಪಾತ್ರೆಗೆ 4 ಚಮಚ ಎಣ್ಣೆ ಹಾಕಿ, ಈರುಳ್ಳಿಯನ್ನು ಕೆಂಬಣ್ಣ ಬರುವವರೆಗೆ ಹುರಿಯಬೇಕು. ಇದಕ್ಕೆ ಕ್ಯಾಬೇಜ್, ನಂತರ Capsicum ಸೇರಿಸಿಕೊಂಡು 3-4 ನಿಮಿಷ ಹುರಿಯಬೇಕು. ಬೇಯಿಸಿದ ತರಕಾರಿಗಳನ್ನು (ನೀರು ಸೇರಿಸಬಾರದು) ಸೇರಿಸಿಕೊಂಡು, ½ ಚಮಚ ಉಪ್ಪು, ಟೊಮೇಟೊ ಮತ್ತು ಸೋಯಾ ಸಾಸ್ ಸೇರಿಸಿಕೊಂಡು ಚೆನ್ನಾಗಿ ಮಗುಚಬೇಕು. ಕೊನೆಯಲ್ಲಿ 2 ಟೇಬಲ್ ಚಮಚ ಕ್ರೀಂ ಹಾಗು cheeseನ್ನು ಸೇರಿಸಿ, ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ.
ಬೇಕಿದ್ದರೆ ಹಸಿಮೆಣಸನ್ನು (ಸಣ್ಣಗೆ ಹೆಚ್ಚಿ, ತರಕಾರಿಯೊಂದಿಗೆ fry ಮಾಡಿ) ಅಥವಾ ಕರಿಮೆಣಸಿನ ಪುಡಿಯನ್ನು (ಕೊನೆಯಲ್ಲಿ) ಸೇರಿಸಿಕೊಳ್ಳಬಹುದು.

ಇದು ಮಕ್ಕಳಿಗೆ ತುಂಬಾ ಇಷ್ಟವಾಗುವ ತಿಂಡಿ.

Honey Dew Melon Juice / milkshake


ಬೇಕಾಗುವ ಸಾಮಗ್ರಿಗಳು:
Honey Dew Melon - 1/2
ಸಕ್ಕರೆ - 4 ಚಮಚ
ಹಾಲು - 1 ಕಪ್
Ice-cube - 4

ಮಾಡುವ ವಿಧಾನ:

ಸಿಪ್ಪೆ ತೆಗೆದ honey Dew melon ನ್ನು ಮಧ್ಯದಲ್ಲಿ ಕತ್ತರಿಸಿ, ಬೀಜಗಳನ್ನು ತೆಗೆಯಬೇಕು. ಇದನ್ನು ಹೋಳುಗಳನ್ನಾಗಿ ಮಾಡಿ, ಮಿಕ್ಸಿಯಲ್ಲಿ ಸಕ್ಕರೆ, Ice-cube ಜೊತೆಗೆ ರುಬ್ಬಿಕೊಳ್ಳಬೇಕು. ಇದಕ್ಕೆ ತಣ್ಣಗಿನ ಹಾಲು ಸೇರಿಸಿಕೊಂಡು ಅಥವಾ ಸೇರಿಸದೆಯೇ ಕುಡಿಯಬಹುದು.