My photo
ಕರಾವಳಿ ಹುಡುಗಿ :)

Tuesday, August 18, 2009

ಗುಳಿಅಪ್ಪ / ಗುಳಿಯಪ್ಪ


ಮಂಗಳೂರಿನ ತಿಂಡಿಗಳಲ್ಲಿ ತರಕಾರಿಗಳು ಸಾಮಾನ್ಯ. ಇದರಲ್ಲಿ ಪ್ರಮುಖವಾದುವುಗಳೆಂದರೆ ಸೌತೆಕಾಯಿ (ಮಂಗಳೂರು ಸೌತೆ), ಮುಳ್ಳುಸೌತೆ (ಸೌತೆಕಾಯಿ), ಸೋರೆಕಾಯಿ, ಹಲಸಿನ ಹಣ್ಣು/ ಕಾಯಿ - ಮುಂತಾದುವುಗಳಿಂದ ತಯಾರಿಸಿದ ದೋಸೆ ಹಾಗು ಕಡುಬುಗಳು (ಅಡ್ಯ =ತುಳು). ಗುಳಿಅಪ್ಪವನ್ನು ಗುಂಡಿಗಳಿರುವ ಕಬ್ಬಿಣದ/Nonstick ಕಾವಲಿಗೆಯಲ್ಲಿ ಮಾಡುತ್ತಾರೆ.

ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ನಾವು ಚಿಕ್ಕವರಿದ್ದಾಗ ನಮಗೆ ಗುಳಿಯಪ್ಪ ಬಹಳ ಇಷ್ಟದ ತಿಂಡಿಯಾದುದರಿಂದ, ಬೆಳಗ್ಗಿನ ದೋಸೆ ಅಥವಾ ಇಡ್ಲಿ ಹಿಟ್ಟು (ಅಕ್ಕಿ ಅಥವಾ ರವೆ) ಉಳಿದಿದ್ದರೆ, ಅದಕ್ಕೆ ಸಂಜೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಅಮ್ಮ ಗುಳಿಅಪ್ಪ ಮಾಡುತ್ತಿದ್ದರು.

ಇನ್ನೊಂದು ರೀತಿಯ ಗುಳಿಅಪ್ಪ ಸೌತೆ ಕಾಯಿ (ಮುಳ್ಳುಸೌತೆ) ಹಾಕಿ ಮಾಡುವುದು. ಇದನ್ನು ಖಾರ ಅಥವಾ ಸಿಹಿಯಾಗಿ ಮಾಡಬಹುದು. ಖಾರ ಗುಳಿಯಪ್ಪ (ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ) ಬೆಳಗ್ಗಿನ ತಿಂಡಿಯಾದರೆ, ಸಿಹಿ ಗುಳಿಅಪ್ಪ ಹೆಚ್ಚಾಗಿ ಸಂಜೆ ಮಾಡುತ್ತಾರೆ. ಸೌತೆಕಾಯಿಯ ಬದಲು ಹಲಸಿನ ಹಣ್ಣು ಅಥವಾ ಬಾಳೆಹಣ್ಣು ಸೇರಿಸಿಕೊಂಡು ಅಕ್ಕಿಯ ಜೊತೆಗೆ ರುಬ್ಬಿ ಕೂಡ ಮಾಡಬಹುದು.

ಗುಳಿಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್
ಸೌತೆ ಕಾಯಿ - ½ ಕಪ್ (ಸಿಪ್ಪೆ ತೆಗೆದು ತುರಿದುಕೊಂಡು)
ಬೆಲ್ಲ - ¼ ಕಪ್
ತೆಂಗಿನ ತುರಿ - ¼ ಕಪ್ (ತುರಿದು)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ- ಸ್ವಲ್ಪ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಇದಕ್ಕೆ ಸೌತೆಕಾಯಿಯ ನೀರನ್ನು ಉಪಯೋಗಿಸಬಹುದು. ಕೊನೆಯಲ್ಲಿ ಬೆಲ್ಲ ಹಾಗು ತೆಂಗಿನ ತುರಿ ಸೇರಿಸಿಕೊಂಡು 1ನಿಮಿಷ ರುಬ್ಬಿಕೊಂಡು ಈ ಮಿಶ್ರಣವನ್ನು ಸೌತೆಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಬಿಸಿ ಯಾಗಿರುವ ಗುಳಿಯಪ್ಪದ ಕಾವಲಿಗೆ ¼ ಚಮಚ ಎಣ್ಣೆ /ತುಪ್ಪ ಹಾಕಿಕೊಂಡು ಗುಳಿಯ ¾ ಭಾಗದ ವರೆಗೆ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಬೇಕು. 3-4 ನಿಮಿಷದ ನಂತರ ಇದನ್ನು ತಿರುವಿ ಹಾಕಿ ಪುನ: 1-2 ನಿಮಿಷ ಬೇಯಿಸಿದರೆ ಗುಳಿಯಪ್ಪ ತಿನ್ನಲು ಸಿದ್ದ. ಇದನ್ನು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಬಹುದು.

15 comments:

ಪಾಚು-ಪ್ರಪಂಚ said...

ವನಿತಾ ಅವರೇ,

ಚೌತಿ ಹಬ್ಬ ಹತ್ತಿರ ಬಂದಿದೆ, ಹಬ್ಬದ ಸಡಗರದಲ್ಲಿ ನಮ್ಮ ಮನೆಯಲ್ಲಿ ಗುಳಿಯಪ್ಪ ಮಾಡುತ್ತಾರೆ. ಖಂಡಿತ ಈ ಸಲ ಗುಳಿಯಪ್ಪ ಸವಿಯನ್ನು ಸವಿಯುವುದೇ. ಫೋಟೋ ನೋಡುತ್ತಿದ್ದರೆ ಹಾಗೆ ತಿನ್ನುವ ಆಸೆ ಆಗುತ್ತಿದೆ.

ಗೌರಿ-ಗಣೇಶ ಹಬ್ಬಕ್ಕೆ ಮತ್ತಷ್ಟು ಸಿಹಿ ತಿನಿಸುಗಳು ನಿಮ್ಮ ಬ್ಲಾಗ್ ನಲ್ಲಿ ಬರಲಿ.

ಹಬ್ಬದ ಶುಭಾಶಯಗಳು.

Panchpakwan said...

Hi Vanitha,

Modal bari nimma blog entry madini...tumba changi ide.
kannada blog nodi nanage yestoo santosh wagidee....:)

ವನಿತಾ / Vanitha said...

ಧನ್ಯವಾದಗಳು ಪ್ರಶಾಂತ್, ಹೀಗೆ ಬರುತ್ತಾ ಇರಿ..ನಿಮಗೂ ಕೂಡ ಹಬ್ಬದ ಶುಭಾಶಯಗಳು

ವನಿತಾ / Vanitha said...

@Panchpakwan..
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು

ಧರಿತ್ರಿ said...

ವನಿತಕ್ಕ ಆಸೆಯಾಗುತ್ತಿದೆ.
-ಧರಿತ್ರಿ

shivu said...

ವನಿತಾ,

ಗಣೇಶನ ಹಬ್ಬದ ಇದನ್ನು ಮಾಡಿ ತಿನ್ನೋಣವೇ...

ಮಲ್ಲಿಕಾರ್ಜುನ.ಡಿ.ಜಿ. said...

ವನಿತಾ ಅವರೆ,
ಗೌರಿಗಣೇಶ ಹಬ್ಬದ ಶುಭಾಶಯಗಳು.
ಗುಳಿಯಪ್ಪ ನನಗೆ ತಿಳಿದಿರಲಿಲ್ಲ. ನಿಮ್ಮ ಬರಹ ಓದಿದರೆ ತುಂಬ ರುಚಿಯಿರಬೇಕು ಅನಿಸುತ್ತೆ. ನಿಮ್ಮ ಬ್ಲಾಗಿಂದ ಆಯ್ದು ಒಳ್ಳೆ ಅಡುಗೆ ಪುಸ್ತಕ ಮಾಡಿ. ರುಚಿಕರ ಬರಹದ ತಿನಿಸು ಎಲ್ಲರಿಗೂ ಸಿಗುವಂತಾಗಲಿ.

ವನಿತಾ / Vanitha said...

ಧರಿತ್ರಿ..ಖಂಡಿತಾ ಬಂದರೆ ಮಾಡಿ ಕೊಡುವೆ..

ಶಿವು ಹಬ್ಬ ಜೋರಾ..??

ಮಲ್ಲಿಕಾರ್ಜುನ ಅವರೇ, ನಿಮಗೆ ಕೂಡಾ ಗೌರಿಗಣೇಶ ಹಬ್ಬದ ಶುಭಾಶಯಗಳು. ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು..

shivu said...

ವನಿತಾ ಗಣೇಶನ ಹಬ್ಬ ನಮ್ಮನೆಯಲ್ಲಿ ಜೋರು. ಗಣೇಶನನ್ನು ತಂದು ಬಿಡುವಾಗ ಕೆರಗಳನ್ನು ಕಲುಷಿತವಾಗುವ ಭಯದಿಂದ ಗಣೇಶನನ್ನು ತರದೇ ಹಾಗೆ ಮನೆಯಲ್ಲಿ ಫೋಟೋವನ್ನು ಪೂಜಿಸಿ ಎಲ್ಲಾ ತಿಂಡಿಗಳನ್ನು ಮಾಡಿ ಆಚರಿಸಿದ್ದೇವೆ. ನೀವು ಬಂದರೆ ತಿಂಡಿಗಳ ರುಚಿ ನೋಡಬಹುದು.

ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.

ಮತ್ತೆ ನಿಮ್ಮದೊಂದು ಆಡಿಗೆ ಪುಸ್ತಕ ಮಾಡಿ..ಮೊದಲು ನಾನು ಕೊಳ್ಳುತ್ತೇನೆ.

Panchpakwan said...

Hi Vanita,

Ganesh Habbada Shubshyagalu.

PaLa said...

ದೋಸೆ ಹಿಟ್ಟಿಂದ ಮಾಡಿದ ಗುಳಿಯಪ್ಪ ಮಾತ್ರ ತಿಳಿದಿತ್ತು.. ಸೌತೆಕಾಯಿ, ಬಾಳೆಹಣ್... ಮೊದಲಾದ ಗುಳಿಯಪ್ಪದ ಪರಿಚಯಕ್ಕೆ ಧನ್ಯವಾದ. ಮತ್ತೆ ಗುಳಿಯಪ್ಪಕ್ಕೆ ಕೆಲವು ಕಡೆ ಪಡ್ಡು ಅಂತ ಕರೀತಾರೆ.

ವನಿತಾ / Vanitha said...

ಶಿವು ಮತ್ತು Panchpakwan....ಪುನಃ ಬಂದುದಕ್ಕೆ ತುಂಬಾ ಸಂತೋಷ..
ಶಿವು ಬೆಂಗಳೂರಿಗೆ ಬಂದರೆ ನಿಮ್ಮ ಮನೆಯ ಸಿಹಿತಿಂಡಿಗಳ ರುಚಿ ನೋಡಲು ಖಂಡಿತಾ ಬರುತ್ತೇನೆ..ನಾವು ಕೂಡ ಮನೆಯಲ್ಲಿ ಫೋಟೋವನ್ನು ಪೂಜಿಸಿ ಗಣೇಶನ ಹಬ್ಬವನ್ನು ಆಚರಿಸಿದ್ದೇವೆ..

ವನಿತಾ / Vanitha said...

ಥ್ಯಾಂಕ್ಸ್ ಪಾಲ ಅವರೇ..ನನಗೆ ಎಲ್ಲ ಗುಳಿಯಪ್ಪಕ್ಕೆ ಕೂಡ ಪಡ್ದು ಹೇಳುತ್ತಾರಾ ಹಾಗು ಎಲ್ಲಿಯ ಕನ್ನಡದಲ್ಲಿ ಹೇಳುತ್ತಾರೆ ಎಂದು ಗೊತ್ತಿರಲಿಲ್ಲ..ಹಾಗಾಗಿ ಬರೆಯಲಿಲ್ಲ..ತಿಳಿಸಿದ್ದಕ್ಕೆ ಧನ್ಯವಾದಗಳು..

ranjith said...

ಥ್ಯಾಂಕ್ಸ್, ನಮ್ಮ ಕನ್ನಡದಲ್ಲಿ ಒಳ್ಳೊಳ್ಳೆ ಅಡುಗೆಯನ್ನು ಕಲಿಸ್ತಿರೋದಕ್ಕೆ. ತುಂಬ ಕಲೀತಿದೀನಿ, ನಿಮ್ಮನ್ನ ಟೀಚರ್ ಅಂತ ಕರೀಬೇಕಾಗ್ತದೋ ಏನೋ?:)

Sparkles said...

'Guliappa" sunday try madide kanri.akki-4-5 gante nenasi,akki jote kayituri,bell-miksige
haki,sotekayi turidu uppu serisi-Guliappa kavalige hittu haki beside.
Miksige hakida hittannu swalpa samaya hage bidabeko eno gottilla.besida Guliappa anto antagi bantu kanri.tinnoke
agalilla.ena mistake anta gottagalilla.Namma Kade andre Hubali side nimma 'gulappa' ge 'Gulapangala'antare ,
'Paddu' antare.