My photo
ಕರಾವಳಿ ಹುಡುಗಿ :)

Friday, July 10, 2009

ಪೂರಿ / ದೋಸೆ ಮತ್ತು ಆಲೂಗಡ್ಡೆ ಪಲ್ಯ (ಬಾಜಿ*)

ಪೂರಿ ಮಾಡಲು ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು - 2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು
ಕರಿಯಲು ಎಣ್ಣೆ

ಗೋಧಿ ಹಿಟ್ಟಿಗೆ ಉಪ್ಪು ಹಾಕಿ ನೀರು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಕೊನೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 20-30 ನಿಮಿಷ ಮುಚ್ಚಿ ಇಡಿ. ನಂತರ ಸಣ್ಣ ಸಣ್ಣ ಗೋಲಿಗಳನ್ನು ಮಾಡಿ ಸ್ವಲ್ಪ ಎಣ್ಣೆ ಸವರಿಕೊಂಡು ಚಪಾತಿ ಗಿಂತ ಸಣ್ಣಗೆ ಸ್ವಲ್ಪ ದಪ್ಪಕ್ಕೆ ಲಟ್ಟಿಸಿ ಕೊಳ್ಳಿ. ಇದನ್ನು ಹದ ಉರಿಯಲ್ಲಿ ಎಣ್ಣೆಯಲ್ಲಿ ಎರಡೂ ಬದಿ ಕರಿದರೆ ಪೂರಿ ರೆಡಿ.
ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 3 ಕಪ್
ಉದ್ದಿನಬೇಳೆ- 1 ಕಪ್
ಕಡಲೆಬೇಳೆ /ತೊಗರಿಬೇಳೆ - 2 ಚಮಚ
ಮೆಂತೆ - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 ಚಮಚ (ಬೇಕಿದ್ದರೆ ಮಾತ್ರ)
ಗಟ್ಟಿ ಅವಲಕ್ಕಿ - ¼ ಕಪ್ / ಒಂದು ಹಿಡಿಯಷ್ಟು
ಎಣ್ಣೆ ಅಥವಾ ತುಪ್ಪ - ದೋಸೆ ತಯಾರಿಸಲು ಬೇಕಾದಷ್ಟು

ಅಕ್ಕಿ ಹಾಗು ಬೇಳೆಗಳನ್ನು ಬೇರೆ ಬೇರೆಯಾಗಿ ನೀರಿನಲ್ಲಿ 6-8 ಗಂಟೆ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಇದನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನೆನೆಸಿದ ಉದ್ದಿನಬೇಳೆ, ಕಡಲೆಬೇಳೆ, ಮೆಂತೆ, ಹಾಗು ಅವಲಕ್ಕಿ (5-10 ನಿಮಿಷ ನೀರಿನಲ್ಲಿ ನೆನೆಸಿ ತೆಗೆದುಕೊಂಡು) ಯನ್ನು ಸೇರಿಸಿ ನಯವಾಗಿ ಅರೆದು ಒಂದು ದೊಡ್ಡ ಪಾತ್ರೆಗೆ ಹಾಕಿ. ನಂತರ ಅಕ್ಕಿ ಹಿಟ್ಟನ್ನು ಚೆನ್ನಾಗಿ ಅರೆದು, ಒಂದು ಚಮಚ ಉಪ್ಪು ಮತ್ತು ಸಕ್ಕರೆ ಸೇರಿಸಿ, ರುಬ್ಬಿದ ಉದ್ದಿನ ಹಿಟ್ಟಿನೊಂದಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8-10 ಗಂಟೆಗಳ ಕಾಲ ಮುಚ್ಚಿ ಇಡಬೇಕು.

ಮರುದಿನ ಬೆಳಗ್ಗೆ ಹೊತ್ತಿಗೆ ಹಿಟ್ಟು ಚೆನ್ನಾಗಿ ಹುದುಗು ಬಂದಿರುತ್ತದೆ. ಇದಕ್ಕೆ ಬೇಕಿದ್ದಷ್ಟು ಉಪ್ಪು (ಬೇಕಿದ್ದರೆ ಸ್ವಲ್ಪ ನೀರು) ಹಾಕಿ ಕಲಸಿ ಹಿಟ್ಟು ಹದ ಮಾಡಿಕೊಳ್ಳಿ. ಬಳಿಕ ಕಾದ ಕಾವಲಿಗೆ ಎಣ್ಣೆ ಸವರಿ ದೋಸೆಯನ್ನು ಹುಯ್ಯಿದು ಎರಡೂ ಕಡೆ ಕೆಂಬಣ್ಣ ಬರುವತನಕ ಬೇಯಿಸಿದರೆ ದೋಸೆ ಸಿದ್ದ.

ಆಲೂಗಡ್ಡೆ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ - 2-3 (ಬೇಯಿಸಿ, ಸಣ್ಣಗೆ ತುಂಡು ಮಾಡಿದ್ದು)
ಈರುಳ್ಳಿ - 1-2 (ಸಣ್ಣಗೆ ಹೆಚ್ಚಿ)
ಟೊಮೇಟೊ - 2-3 (ಸಣ್ಣಗೆ ಹೆಚ್ಚಿ)
ಹಸಿಮೆಣಸು - 2-3 (ಉದ್ದಕ್ಕೆ ಸೀಳಿ)
ಶುಂಠಿ - ½ ಇಂಚು
ಹಳದಿ ಪುಡಿ - ಸ್ವಲ್ಪ
ಗರಂ ಮಸಾಲ - ½ ಚಮಚ (ಬೇಕಿದ್ದರೆ ಮಾತ್ರ)
ಒಗ್ಗರಣೆಗೆ - ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ಬೆಳ್ಳುಳ್ಳಿ

ಒಂದು ಪಾತ್ರೆಯಲ್ಲಿ 3-4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿ ಯಾದ ನಂತರ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಗು ಬೆಳ್ಳುಳ್ಳಿ ಸೇರಿಸಿ, ಒಗ್ಗರಣೆ ಮಾಡಿಕೊಳ್ಳಿ. ಬೆಳ್ಳುಳ್ಳಿ ಕೆಂಪಗಾದ ನಂತರ ಈರುಳ್ಳಿ ಹಾಕಿ 5-10 ನಿಮಿಷ ಹುರಿಯಬೇಕು. ಇದಕ್ಕೆ ಹಳದಿ ಪುಡಿ ಸೇರಿಸಿ, 1ನಿಮಿಷ ಹುರಿದುಕೊಂಡು , ಕೊನೆಯಲ್ಲಿ ಟೊಮೇಟೊ ಸೇರಿಸಿ 5 ನಿಮಿಷ ಹುರಿಯಬೇಕು. ನಂತರ ಜಜ್ಜಿದ ಶುಂಠಿ ಹಾಗು ¼ ಕಪ್ ನೀರು ಸೇರಿಸಿ ಹದ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಬೇಯಿಸಿದ ಆಲೂಗಡ್ಡೆ ಸೇರಿಸಿ, ನಂತರ ಗರಂ ಮಸಾಲ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಲೂಗಡ್ಡೆ ಪಲ್ಯ ಸಿದ್ದ.



*- ದಕ್ಷಿಣ ಕನ್ನಡ ಹಾಗು ಮಂಗಳೂರಿನಲ್ಲಿ ಆಲೂಗಡ್ಡೆ ಪಲ್ಯಕ್ಕೆ ಬಾಜಿ ಹಾಗು ಬೇರೆ ಕಡೆಗಳಲ್ಲಿ ಬಾಂಬೆ ಸಾಗು ಎಂದು ಕರೆಯುತ್ತಾರೆ.
(ತುಂಬ ಚಳಿ ಇದ್ದಾಗ ಹಿಟ್ಟು ಹುಳಿ ಬರದಿದ್ದಲ್ಲಿ, ಒಂದು ಪಾತ್ರೆಯಲ್ಲಿ (ಕುಕ್ಕರಿನಲ್ಲಿ) ಸ್ವಲ್ಪ ನೀರು ಬಿಸಿ ಮಾಡಿ ಹಿಟ್ಟಿನ ಪಾತ್ರೆಯನ್ನು ಅದರ ಒಳಗೆ ಇಟ್ಟು ಮುಚ್ಚಿಟ್ಟರೆ ಹಿಟ್ಟು ಚೆನ್ನಾಗಿ ಹುದುಗು ಬರುತ್ತದೆ.)

No comments: