My photo
ಕರಾವಳಿ ಹುಡುಗಿ :)

Monday, March 9, 2009

ಈರುಳ್ಳಿ ಬಜೆ / ನೀರುಳ್ಳಿ ಬಜೆ (ONION BAJJI)

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 2-3 ಕಪ್ (ಉದ್ದಕ್ಕೆ ಹೆಚ್ಚಿದ್ದು)
ಕಡಲೆ ಹಿಟ್ಟು - 5-6 ಟೇಬಲ್ ಚಮಚ
ಅಕ್ಕಿ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಜೀರಿಗೆ - 1 ಚಮಚ
ಕೆಂಪು ಮೆಣಸಿನ ಪುಡಿ - ½ - ¾ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸೋಡಾ ಪುಡಿ - ¼ ಚಮಚ
ಹಿಂಗು - ಸ್ವಲ್ಪ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಕೆ ಹೆಚ್ಚಿದ್ದು)
ಪಾಲಕ್ ಸೊಪ್ಪು - 2 ಟೇಬಲ್ ಚಮಚ (ಸಣ್ಣಕೆ ಹೆಚ್ಚಿದ್ದು)
ಎಣ್ಣೆ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಬೇಕು. ಈರುಳ್ಳಿಯಲ್ಲಿರುವ ನೀರು ಬಿಟ್ಟುಕೊಳ್ಳುವ ಕಾರಣ, ಇದಕ್ಕೆ ನೀರು ಸೇರಿಸಬಾರದು. ಕೊನೆಯಲ್ಲಿ ಬೇಕಿದ್ದರೆ ಸ್ವಲ್ಪ ನೀರನ್ನು ಕೈಗೆ ಸವರಿಕೊಂಡು, ಸಣ್ಣ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು, ಕಾದ ಎಣ್ಣೆಗೆ ಹಾಕಿ, ಕೆಂಬಣ್ಣ ಬರುವ ತನಕ ಕರಿಯಬೇಕು.
ಇದನ್ನು ಅಕ್ಕಿ ಹಿಟ್ಟು, ಕಾರ್ನ್ ಫ್ಲೌರ್, ಸೋಡಾ ಪುಡಿ, ಪಾಲಕ್ ಸೊಪ್ಪು ಹಾಗು ಕೊತ್ತಂಬರಿ ಸೊಪ್ಪು ಹಾಕದೆ ಕೂಡ ಮಾಡಬಹುದು.

Saturday, March 7, 2009

ತುಕುಡಿ / ಶಂಕರಪೋಳೆ (THUKUDI / SHANKARPOLE/ DIAMOND CUTS)


ಬೇಕಾಗುವ ಸಾಮಗ್ರಿಗಳು:

ಮೈದಾ ಹುಡಿ - 1 ಕಪ್
ಗೋಧಿ ಹುಡಿ - ¼ ಕಪ್
ಅಕ್ಕಿ ಪುಡಿ - ¼ ಕಪ್
ಹಿಂಗು - ಸ್ವಲ್ಪ (ಬೇಕಿದ್ದರೆ ಮಾತ್ರ)
ಜೀರಿಗೆ / ಬಿಳಿ ಎಳ್ಳು - 1 ಚಮಚ
ಕೆಂಪು ಮೆಣಸಿನ ಪುಡಿ - ¾ ಚಮಚ
ಸಕ್ಕರೆ - 2-3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ

ಮಾಡುವ ವಿಧಾನ:
ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ, 1-2 ಚಮಚ ಬಿಸಿ ಎಣ್ಣೆಯನ್ನು ಸೇರಿಸಿ, ಬೇಕಾದಷ್ಟು ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಬೇಕು. ನಂತರ ಸಣ್ಣ ಉಂಡೆಯನ್ನು ಮಾಡಿಕೊಂಡು, ಚಪಾತಿಯನ್ನು ಲಟ್ಟಿಸಬೇಕು.

ಇದನ್ನು ಚಾಕುವಿನ ಸಹಾಯದಿಂದ ಡೈಮಂಡ್ ಆಕಾರದಲ್ಲಿ ತುಂಡು ಮಾಡಿಕೊಂಡು, ಬಿಡಿಸಿಟ್ಟುಕೊಳ್ಳಬೇಕು.
ಇದನ್ನು ಕಾದ ಎಣ್ಣೆಯಲ್ಲಿ ಕೆಂಬಣ್ಣ ಬರುವ ವರೆಗೆ ಹುರಿದರೆ ತುಕುಡಿ ಸಿದ್ದ. ತಣ್ಣಗಾದ ನಂತರ ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ತುಂಬಾ ದಿನ ಕೆಡ ದಂತೆ ಇಟ್ಟು, ಚಾ/ ಕಾಫಿಯೊಂದಿಗೆ ತಿನ್ನಬಹುದು.

Monday, March 2, 2009

ಬಾಳೆಕಾಯಿ ಪಲ್ಯ (BALEKAYI PALYA)

ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ - 1 (ಸಣ್ಣಗೆ ಹೆಚ್ಚಿದ್ದು)
ಈರುಳ್ಳಿ - 1 (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸು - 2-3 (ಸಣ್ಣಗೆ ಹೆಚ್ಚಿದ್ದು)
ತೆಂಗಿನ ತುರಿ - ಸ್ವ್ವಲ್ಪ
ಹಳದಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಬೆಳ್ಳುಳ್ಳಿ (3-4), ಕರಿಬೇವು

ಮಾಡುವ ವಿಧಾನ
ಒಂದು ದಿನ Google ನಲ್ಲಿ ಹುಡುಕುತ್ತ ಇದ್ದಾಗ, ಇಲ್ಲಿ (http://brindavanrecipes.blogspot.com/2007/12/raw-bananaplaintain-fry-balekai-palya.html) ಸಿಕ್ಕಿದ ಈ recipeಯನ್ನು ಸ್ವಲ್ಪ change ಮಾಡಿ try ಮಾಡಿದಾಗ ತುಂಬಾ ಚೆನ್ನಾಗಿ ಬಂತು. ಹಾಗಾಗಿ ಅದರ ಕನ್ನಡ versionನ್ನು ಇಲ್ಲಿ ಬರೀತಾ ಇದ್ದೇನೆ.

ಬಾಳೆಕಾಯಿಯನ್ನು ತೊಳೆದು, ಒರೆಸಿಕೊಂಡು, ಸಿಪ್ಪೆ ಅಥವಾ ನಾರು ತೆಗೆದು, ಸಣ್ಣಕೆ ಹೆಚ್ಚಬೇಕು.
ಈ ತುಂಡುಗಳನ್ನು, ಸ್ವಲ್ಪ ಹಳದಿ ಹಾಗು ಲಿಂಬೆ ರಸದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ಇಡಬೇಕು. ನಾನ್-ಸ್ಟಿಕ್ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಒಗ್ಗರಣೆ (ಸಾಸಿವೆ, ಕರಿಬೇವು, ಬೆಳ್ಳುಳ್ಳಿ) ಮಾಡಿಕೊಂಡು, ನಂತರ ಹೆಚ್ಚಿದ ಹಸಿಮೆಣಸು ಹಾಗು ಈರುಳ್ಳಿಯನ್ನು ಸೇರಿಸಿ, ಚನ್ನಾಗಿ ಕೆಂಬಣ್ಣ ಬರುವ ತನಕ ಹುರಿಯಬೇಕು. ಇದಕ್ಕೆ ಬಾಳೆಕಾಯಿಯನ್ನು ಸೇರಿಸಿಕೊಂಡು, ಸಣ್ಣ ಉರಿಯಲ್ಲಿ, ಮದ್ಯದಲ್ಲಿ ಮಗುಚುತ್ತಾ, 20-25 ನಿಮಿಷ ಬೇಯಿಸಬೇಕು. ಕೊನೆಯಲ್ಲಿ ಉಪ್ಪು, ತೆಂಗಿನ ತುರಿ ಸೇರಿಸಿ, 5 ನಿಮಿಷ ಬೇಯಿಸಬೇಕು.

Saturday, February 28, 2009

ಬಸಳೆ ಸೊಪ್ಪಿನ ತಂಬುಳಿ [Basale (Indian Spinach) Soppina Thambuli]


ತಂಬುಳಿಯನ್ನು ಹೆಚ್ಚಾಗಿ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಮಾಡುತ್ತಾರೆ. ಬಾಳೆಎಲೆಯಲ್ಲಿ ಉಪ್ಪು, ಉಪ್ಪಿನಕಾಯಿ, ಪಲ್ಯಗಳು ಹಾಗು ಅನ್ನ ಎಲ್ಲ ಬಡಿಸಿದ ನಂತರ, ತುಪ್ಪ ಸಾರು ಬಡಿಸುವುದರ ಮೊದಲು ತಂಬುಳಿಯನ್ನು ಅನ್ನಕ್ಕೆ ಬಡಿಸುತ್ತಾರೆ. ಇದು ತುಂಬ ಜೀರ್ಣಕಾರಿ.

ಬೇಕಾಗುವ ಸಾಮಗ್ರಿಗಳು:
ಬಸಳೆ ಸೊಪ್ಪು - 10
ಜೀರಿಗೆ - ½ ಚಮಚ
ಶುಂಠಿ - 1 ಸೆ. ಮಿ. ತುಂಡು
ಮೊಸರು / ಮಜ್ಜಿಗೆ - ½ ಕಪ್
ತೆಂಗಿನ ತುರಿ - ½ ಕಪ್
ಹಸಿ ಮೆಣಸು - 1 ರಿಂದ 2
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಕರಿಬೇವು.
ಮಾಡುವ ವಿಧಾನ
ಬಸಳೆ ಸೊಪ್ಪನ್ನು ತೊಳೆದು, ಚೆನ್ನಾಗಿ ಒರೆಸಿ, ನಂತರ ಸಣ್ಣ ಸಣ್ಣ ತುಂಡು ಗಳನ್ನಾಗಿ ಮಾಡಬೇಕು. ಸ್ವಲ್ಪ (1 ಚಮಚ) ಎಣ್ಣೆ ಹಾಕಿ ಬಸಳೆಸೊಪ್ಪನ್ನು 5 ನಿಮಿಷ ಚನ್ನಾಗಿ ಹುರಿಯಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ರುಬ್ಬಬೇಕು. ಮಜ್ಜಿಗೆ ಉಪಯೋಗಿಸಿದರೆ ಕೊನೆಯಲ್ಲಿ ಸೇರಿಸಿದರೆ ಸಾಕು.
ಇದನ್ನು ನಂತರ ಪಾತ್ರೆಗೆ ಹಾಕಿ, ಉಪ್ಪು ಸೇರಿಸಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು. ಇದು ಚಟ್ನಿಗಿಂತ ಸ್ವಲ್ಪ ತೆಳ್ಳಗಿರಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ, ತಂಬುಳಿ ಸಿದ್ದ.

Friday, February 27, 2009

ಮಂಗಳೂರು ಬನ್ಸ್ (Mangalore Buns)

ಬೇಕಾಗುವ ಸಾಮಗ್ರಿಗಳು
ಬಾಳೆಹಣ್ಣು - 1
ಮೈದಾ ಹುಡಿ - 1.5 ಕಪ್
ಮೊಸರು - ½ ಕಪ್
ಸೋಡಾ ಪುಡಿ - ½ ಚಮಚ
ಜೀರಿಗೆ - ½ ಚಮಚ
ಸಕ್ಕರೆ - 4-5 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು.
ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು, ಪೂರಿಯ ರೀತಿಯಲ್ಲಿ (೧ ರಿಂದ ೧.೫ ಇಂಚು ದಪ್ಪಕ್ಕೆ) ಲಟ್ಟಿಸಬೇಕು. ಇದನ್ನು ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಹಿಟ್ಟು ಅಥವಾ ಕೈಗೆ ಸ್ವಲ್ಪಎಣ್ಣೆ ಹಾಕಿಕೊಂಡರೆ ಒಳ್ಳೆಯದು.
ನಂತರ ಇದನ್ನು ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಕೆಂಬಣ್ಣ ಬರುವ ವರೆಗೆ ಕರಿಯಬೇಕು.
ಇದನ್ನು ಚಟ್ನಿ, ಸಾಂಬಾರ್ ಜೊತೆಗೆ ಅಥವಾ ಹಾಗೆಯೇ ತಿನ್ನಬಹುದು.

Thursday, February 5, 2009

ಸೆವೆನ್ ಕಪ್ ಸ್ವೀಟ್ (Seven Cup Sweet)

ಇದು ಒಂದು ಸಿಂಪಲ್ ಆದರೆ ರುಚಿಯಾದ ಸ್ವೀಟ್.

ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು - 1 ಕಪ್
ಹಾಲು - 1 ಕಪ್
ಕಾಯಿ ತುರಿ - 1 ಕಪ್
ತುಪ್ಪ - 1 ಕಪ್
ಸಕ್ಕರೆ - 3 ಕಪ್
ಇದರಲ್ಲಿ 7 ಕಪ್ ಸಾಮಗ್ರಿಗಳು ಸೇರಿರುವ ಕಾರಣ ಬಹುಶ: ಈ ಹೆಸರು ಬಂದಿರಬಹುದು. ಆದರೆ, 3 ಕಪ್ ಸ್ವೀಟ್ ಹಾಕಿದರೆ ತುಂಬ ಸಿಹಿ ಆಗುವುದರಿಂದ 2-21/4 ಕಪ್ ಸಕ್ಕರೆ ಹಾಕಿದರೆ ಸಾಕಾಗುತ್ತದೆ.
ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ, ಹದ ಹುರಿಯಲ್ಲಿ 25-30 ನಿಮಿಷ (ತಳ ಬಿಟ್ಟುಕೊಂಡು ಬರುವ ತನಕ) ಕಾಯಿಸಿಕೊಂಡು, ಕೊನೆಯಲಿ ತುಪ್ಪ ಸವರಿದ ಬಟ್ಟಲಿಗೆ ಹಾಕಬೇಕು. ಸ್ವಲ್ಪ ಬಿಸಿ ಆರಿದ ಮೇಲೆ, ಬೇಕಾದ ಆಕಾರಕ್ಕೆ ತುಂಡು ಮಾಡಿಟ್ಟುಕೊಳ್ಳಬೇಕು.

Sunday, February 1, 2009

ಗೋಳಿ ಬಜೆ / ಮಂಗಳೂರು ಬಜ್ಜಿ (Golibaje / Mangalore Bajji)

ನೀವು ಮಂಗಳೂರಿನ ಯಾವುದೇ ಹೋಟೆಲ್ ಗೆ ಹೋಗಿ ತಿಂಡಿ ಏನಿದೆ..? ಎಂದು ಕೇಳಿದರೆ, ಹೀಗೆ ಶುರುವಾಗುತ್ತದೆ..ಗೋಳಿಬಜೆ, ನೀರುಳ್ಳಿ ಬಜೆ, ಮಂಗಳೂರು ಬನ್ಸ್, ಸೆಟ್ ದೋಸೆ, ಮಸಾಲೆ ದೋಸೆ...... ಮಂಗಳೂರಿನಲ್ಲಿ ಗೋಳಿ ಬಜೆ ಮತ್ತು ಬಿಸಿ ಬಿಸಿ ಕಾಫಿ/ಚಾ ಬಲು ಪ್ರಸಿದ್ದ. ಅದೇ ಬೆಂಗಳೂರು/ಮೈಸೂರಿನ ಹೋಟೆಲಿಗೆ ಹೋದರೆ, ಇದೇ ಗೋಳಿಬಜೆಗೆ ಮಂಗಳೂರು ಬಜ್ಜಿ ಎನ್ನುತ್ತಾರೆ.

ಗೋಳಿ ಬಜೆ ಮಾಡಲು ಬೇಕಾಗುವ ಸಾಮಗ್ರಿಗಳು
ಮೈದಾ ಹುಡಿ - 1 ಕಪ್
ಮೊಸರು/ ದಪ್ಪ ಮಜ್ಜಿಗೆ - 1/2 ಕಪ್
ಶುಂಠಿ - 1 ಚಮಚ (ಸಣ್ಣಗೆ ಹೆಚ್ಚಿದ್ದು ಅಥವಾ ತುರಿದಿದ್ದು)
ಹಸಿ ಮೆಣಸು - 1 ಚಮಚ (ಸಣ್ಣಗೆ ಹೆಚ್ಚಿ)
ಕರಿ ಬೇವು - 5-6 (ಸಣ್ಣಗೆ ಹೆಚ್ಚಿ)
ಹಿಂಗು - ಸ್ವಲ್ಪ
ಬೇಕಿಂಗ್ ಸೋಡಾ - ½ ಚಮಚ
ಸಕ್ಕರೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಮಾಡಿಟ್ಟುಕೊಂಡು, 15-20 ನಿಮಿಷ ಮುಚ್ಚಿ ಇಡಬೇಕು. ನಂತರ ಸಣ್ಣದಾದ ಉಂಡೆ ಮಾಡಿಕೊಂಡು, ಕಾದ ಎಣ್ಣೆ ಗೆ ಹಾಕಿ, ಚೆನ್ನಾಗಿ ಕೆಂಬಣ್ಣ ಬರುವ ತನಕ ಕರಿಯಬೇಕು. ಇದನ್ನು ತೆಂಗಿನ ಕಾಯಿ ಚಟ್ನಿ ಯೊಂದಿಗೆ ಬಿಸಿಬಿಸಿ ಸವಿಯಬೇಕು.

Friday, January 30, 2009

ವೆಜ್ ಪಲಾವ್ / VEGETABLE PULAO

ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ - 1 ಕಪ್
ಬೀನ್ಸ್ - 1/2 ಕಪ್ (ಹೆಚ್ಚಿದ್ದು)
ಬಟಾಣಿ - 1/4 ಕಪ್ ( 6 ರಿಂದ 8 ಗಂಟೆ ನೆನೆಸಿಟ್ಟಿದ್ದು)
ಕ್ಯಾರೆಟ್ - 1/4 ಕಪ್ (ಹೆಚ್ಚಿದ್ದು)
ಈರುಳ್ಳಿ - 1/2 ಸಣ್ಣಗೆ ಹೆಚ್ಚಿದ್ದು
ತುಪ್ಪ/ ಎಣ್ಣೆ - 2 ಟೇಬಲ್ ಸ್ಪೂನ್
ಗರಂ ಮಸಾಲೆ ಸಾಮಗ್ರಿಗಳು (ಚಕ್ಕೆ- 1 ಇಂಚು, ಲವಂಗ - 4, ಕಾಳು ಮೆಣಸು - 8, ಮೊಗ್ಗು -2)
ಮಸಾಲೆಯನ್ನು ಈ ಕೆಳಗಿನ ಸಾಮಗ್ರಿಗಳೊಂದಿಗೆ ರುಬ್ಬಿಟ್ಟು ಕೊಳ್ಳಬೇಕು.
{ತೆಂಗಿನ ತುರಿ - 3 ಟೇಬಲ್ ಸ್ಪೂನ್; ಹಸಿಮೆಣಸು -1 ಅಥವಾ 2; ಶುಂಠಿ - ½ ಇಂಚು, ಬೆಳ್ಳುಳ್ಳಿ - ೨ ಎಸಳು, ಕೊತ್ತಂಬರಿ ಸೊಪ್ಪು - 2 ಟೇಬಲ್ ಸ್ಪೂನ್ (ಹೆಚ್ಚಿದ್ದು)}
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಕುಕ್ಕರಿನಲ್ಲಿ ಎಣ್ಣೆ/ತುಪ್ಪ ಬಿಸಿ ಮಾಡಿ ಗರಂ ಮಸಾಲೆಯ ಸಾಮಗ್ರಿಗಳನ್ನು ಹಾಕಿ 1 ನಿಮಿಷ ಹುರಿಯಬೇಕು. ನಂತರ ಇದಕ್ಕೆ ಒಂದೊಂದೇ ತರಕಾರಿಗಳನ್ನು ಹಾಕಿ (ಈರುಳ್ಳಿ, ಬೀನ್ಸ್, ಬಟಾಣಿ, ಕ್ಯಾರೆಟ್) ಹಸಿ ಬಣ್ಣ ಹೋಗುವ ತನಕ ಹುರಿಯಬೇಕು. ನಂತರ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಸ್ವಲ್ಪ ಹುರಿಯಬೇಕು. ಕೊನೆಯಲ್ಲಿ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿ, 2 ಕಪ್ ನೀರಿನೊಂದಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕುಕ್ಕರ್ ನಲ್ಲಿ ಬೇಯಿಸಿ. ಇದನ್ನು ಮೊಸರು ಬಜ್ಜಿ (raitha) ಯೊಂದಿಗೆ ಸವಿಯಲು ಕೊಡಿ.

ಎಲ್ಲಾ ಮಸಾಲೆ ರುಬ್ಬಿಕೊಳ್ಳಲು ಟೈಮ್ ಇಲ್ಲ ಅಂದ್ರೆ, ಅಕ್ಕಿ, ತರಕಾರಿಗಳನ್ನು ಹುರಿದುಕೊಂಡು ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಹಾಗು ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಹಾಕಿ, ಕೊನೆಯಲ್ಲಿ ಉಪ್ಪು, 1/2 - 1 ಚಮಚ ಗರಂ ಮಸಾಲ ಪುಡಿ ಹಾಗು ಸ್ವಲ್ಪ ಕೊತ್ತಂಬರಿ ಸೊಪ್ಪು, ನೀರು ಸೇರಿಸಿ ಬೇಯಿಸಿದರೆ ದಿಡೀರ್ ಪಲಾವ್ ಸಿದ್ದ.

Thursday, January 15, 2009

ಮಕರ ಸಂಕ್ರಾಂತಿ ಹಬ್ಬ (Makara Sankranthi)


ನಾನು ಈ ಸಲ ಮಾಡಿದ ಸಂಕ್ರಾಂತಿ ಹಬ್ಬದ ಸ್ಪೆಷಲ್ ಅಡುಗೆಗಳು: ಎಳ್ಳು-ಬೆಲ್ಲ, ಸಿಹಿ ಪೊಂಗಲ್, ಕೊಬ್ಬರಿ ಬರ್ಫಿ.

ಎಳ್ಳು-ಬೆಲ್ಲ ಕ್ಕೆ ಬೇಕಾಗುವ ಸಾಮಗ್ರಿಗಳು

ನೆಲಕಡಲೆ- ೧ ಕಪ್
ಹುರಿಗಡಲೆ- ೧ ಕಪ್
ಬೆಲ್ಲ -೧/೨ ಕಪ್
ಕೊಬ್ಬರಿ ತುಂಡು -೧/೨ ಕಪ್ (ಸಣ್ಣಗೆ ಆಯತಾಕಾರದ ತುಂಡುಗಳು)
ಎಳ್ಳು - ೧ ಹಿಡಿ

ಎಳ್ಳನ್ನು ಎಣ್ಣೆ ಹಾಕದೆ ಸಿಡಿಯುವ ತನಕ ಹುರಿದು ತೆಗೆದಿಡಿ.
ನೆಲಕಡಲೆಯನ್ನು ಎಣ್ಣೆ ಹಾಕದೆ ಹುರಿದು ತಣ್ಣಗಾದ ನಂತರ ಸಿಪ್ಪೆಯನ್ನು ತೆಗೆದು, ೨ ಭಾಗ ಮಾಡಿರಿ. ಕೊನೆಯಲ್ಲಿ ಎಳ್ಳು, ನೆಲ ಕಡಲೆ, ಹುರಿಕಡಲೆ, ಬೆಲ್ಲ ಹಾಗು ಕೊಬ್ಬರಿ ತುಂಡನ್ನು ಬೆರೆಸಿದರೆ ಎಳ್ಳು-ಬೆಲ್ಲ ಸಿದ್ದ.

ಸಿಹಿ ಪೊಂಗಲ್ ಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ - ೧/೨ ಕಪ್
ಹೆಸರುಬೇಳೆ- ೧/೨ ಕಪ್
ನೀರು- ೨ ಕಪ್
ಹಾಲು - ೨ ಕಪ್
ಏಲಕ್ಕಿ ಬೀಜ - ೬ (ಪುಡಿ ಮಾಡಿದ್ದು)
ಬೆಲ್ಲ - ೧/೨ ಕಪ್
ತುಪ್ಪ- ೨ ಚಮಚ
ದ್ರಾಕ್ಷಿ ಹಾಗು ಗೋಡಂಬಿ - ಸ್ವಲ್ಪ

ಹೆಸರು ಬೇಳೆ ಯನ್ನು ಘಮ್ ಪರಿಮಳ ಬರುವ ತನಕ ಹುರಿದು, ಅಕ್ಕಿ ಯ ಜೊತೆ ಸೇರಿಸಿ ಕುಕ್ಕರಿನಲ್ಲಿ ನೀರು ಹಾಗು ಹಾಲು ಸೇರಿಸಿ ಬೇಯಲು ಇಡಿ. ಅಕ್ಕಿ ಮತ್ತು ಬೇಳೆ ಬೆಂದ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಬೆಲ್ಲವನ್ನು ಕರಗಲು ಬಿಡಿರಿ. ಬೆಲ್ಲ ಕರಗಿದ ನಂತರ ಬೇಯಿಸಿದ ಅಕ್ಕಿ, ಬೇಳೆಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಬೆರೆಸಿರಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ದ್ರಾಕ್ಷಿ ಯನ್ನು ಸೇರಿಸಿದರೆ, ಸಿಹಿ ಪೊಂಗಲ್ ಸವಿಯಲು ರೆಡಿ.

ತೆಂಗಿನಕಾಯಿ ಬರ್ಫಿ

ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ- ೨ ಕಪ್
ನೀರು - ೨ ಕಪ್
ಹಾಲು - ೫ ಚಮಚ
ಸಕ್ಕರೆ - ೧- ೧೧/೨ ಕಪ್
ಏಲಕ್ಕಿ - ೬ (ಸಣ್ಣಗೆ ಪುಡಿ ಮಾಡಿ)
ತುಪ್ಪ - ೮ ಚಮಚ (೩ tablespoon)

ತೆಂಗಿನ ತುರಿಯನ್ನು ಘಮ್ ಎಂದು ಪರಿಮಳ ಬರುವ ತನಕ ಹುರಿದು, ಬದಿಯಲ್ಲಿಡಿ.
ಒಂದು ಬಾಣಲೆಯಲ್ಲಿ ನೀರು ಮತ್ತು ಸಕ್ಕರೆ ಹಾಕಿಕೊಂಡು ಒಂದೆಳೆ ಪಾಕ ಬರುವ ತನಕ ಕುದಿಸಬೇಕು.
ಈ ಹಂತದಲ್ಲಿ ಹಾಲು ಹಾಕಿ, ಏನಾದರು ಸಕ್ಕರೆಯಲ್ಲಿದ್ದ ಕಸ ಮೇಲೆ ಬಂದರೆ ತೆಗೆಯಬಹುದು.
ಒಂದೆಳೆ ಪಾಕಕ್ಕೆ ತೆಂಗಿನ ತುರಿಯನ್ನು ಸೇರಿಸಿಕೊಂಡು, ತುಪ್ಪ ಸೇರಿಸಿ ಥಳ ಬಿಡುವ ತನಕ (೫ ನಿಮಿಷ) ತಿರುಗಿಸಬೇಕು. ನಂತರ ಇದನ್ನು ತುಪ್ಪ ಸವರಿದ ಪ್ಲೇಟ್ ಗೆ ಹಾಕಿ, ಸ್ವಲ್ಪ ತಣ್ಣಗಾದ ನಂತರ ತುಂಡು ಮಾಡಿದರೆ, ಸ್ವೀಟ್ ರೆಡಿ.

Monday, January 5, 2009

ಹೊಸವರುಷದ ಶುಭಾಶಯಗಳು

ಹೊಸ ವರುಷವು ಎಲ್ಲರಿಗೂ ಹರುಷ ತರಲಿ...
(ಫೋಟೊ: ಸೋಮೇಶ್ವರ ಕಡಲು ತೀರ, ಮಂಗಳೂರು)