My photo
ಕರಾವಳಿ ಹುಡುಗಿ :)

Thursday, November 19, 2009

ಟೊಮೇಟೊ ಪಲ್ಯ / Tomato Sabji

ಟೊಮಾಟೊ - 2-3 (ದೊಡ್ಡ ಗಾತ್ರದ್ದು, ಸಣ್ಣಗೆ ಹೆಚ್ಚಿ)
ಈರುಳ್ಳಿ - 1 (ಸಣ್ಣಗೆ ಹೆಚ್ಚಿ)
ಬ್ಯಾಡಗಿ ಮೆಣಸಿನ ಪುಡಿ - ½ - ¾ ಚಮಚ (ಖಾರಕ್ಕೆ ತಕ್ಕಂತೆ)
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಸಕ್ಕರೆ - ½ ಚಮಚ
ಬೆಳ್ಳುಳ್ಳಿ - 2 (ಸಣ್ಣಗೆ ಹೆಚ್ಚಿ)
ಸಾಸಿವೆ - ½ ಚಮಚ
ಅರಿಶಿನ ಪುಡಿ - ಚಿಟಿಕೆ
ಕರಿಬೇವು - 5-6 ಎಲೆ
ಎಣ್ಣೆ - 3-4 ಚಮಚ
ಒಂದು ಪಾತ್ರೆಯಲ್ಲಿ ಎಣ್ಣೆ ಸೇರಿಸಿಕೊಂಡು ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಬೇಕು.
ನಂತರ ಈರುಳ್ಳಿ ಸೇರಿಸಿಕೊಂಡು ಚೆನ್ನಾಗಿ ಹುರಿಯಬೇಕು. ಇದಕ್ಕೆ ಅರಿಶಿನ ಪುಡಿ, ಮೆಣಸಿನ ಪುಡಿ ಸೇರಿಸಿಕೊಂಡು ಒಂದು ನಿಮಿಷ ಹುರಿದುಕೊಂಡು, ನಂತರ ಸಣ್ಣಗೆ ಹೆಚ್ಚಿದ ಟೊಮೇಟೊವನ್ನು ಸೇರಿಸಿ ಹದಉರಿಯಲ್ಲಿ ಟೊಮೇಟೊ ಮೆತ್ತಗಾಗುವ ತನಕ (15-20 ನಿಮಿಷ) ಬೇಯಿಸಬೇಕು. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಗು ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪು ಸೇರಿಸಿ ಒಲೆಯಿಂದ ಇಳಿಸಿದರೆ ರುಚಿಯಾದ ಟೊಮೇಟೊ ಪಲ್ಯ ಸಿದ್ದ. ಈ ಪಲ್ಯವು ಚಪಾತಿಯ ಜೊತೆಗೆ ಒಳ್ಳೆಯ ಕಾಂಬಿನೇಶನ್.

Saturday, November 7, 2009

ಹೀರೆಕಾಯಿ ಸಿಪ್ಪೆ ಚಟ್ನಿ



ಹೀರೆಕಾಯಿ ಪಲ್ಯ ಅಥವಾ ಸಾಂಬಾರ್ ಮಾಡಿದ ನಂತರ ಅದರ ಸಿಪ್ಪೆಯನ್ನು ಬಿಸಾಡುವುದು ಸಾಮಾನ್ಯ....ಆ ಸಿಪ್ಪೆಯಿಂದ ಒಳ್ಳೆಯ ಚಟ್ನಿ ಮಾಡಬಹುದು.

ಹೀರೆಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಅದರ ಸಿಪ್ಪೆಯನ್ನು ಚಾಕುವಿನಿಂದ ತೆಗೆಯಿರಿ. ಚಟ್ನಿ ಮಾಡ್ಬೇಕು ಅಂದ್ರೆ ಸ್ವಲ್ಪ ಜಾಸ್ತಿನೆ ತೆಗೆಯಿರಿ, ಪರವಾಗಿಲ್ಲ..ಒಂದೆರಡು ದಿನ ಇದನ್ನು ಒಂದು ಕವರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟು ನಂತರವೂ ಉಪಯೋಗಿಸಬಹುದು.

ಈ ಸಿಪ್ಪೆಯನ್ನು (ಒಂದು ಹಿಡಿಯಷ್ಟು) ತೊಳೆದುಕೊಂಡು ¼ ಕಪ್ ನೀರಿನಲ್ಲಿ 5-10 ನಿಮಿಷ ಬೇಯಿಸಿ. ನಂತರ ½ ಕಪ್ ನಷ್ಟು ತೆಂಗಿನ ತುರಿ, ಖಾರಕ್ಕೆ ತಕ್ಕಷ್ಟು (2-4) ಹುರಿದ ಬ್ಯಾಡಗಿ ಮೆಣಸು , 10 ಕಾಳು ಹುರಿದ ಉದ್ದಿನ ಬೇಳೆ, ರುಚಿಗೆ ತಕ್ಕಷ್ಟು ಉಪ್ಪು ಹಾಗು ಬೇಯಿಸಿದ ಸಿಪ್ಪೆಯನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ನೀರು ಸೇರಿಸ್ಕೊಂಡು ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆ ಯಲ್ಲಿ ತೆಗೆದುಕೊಂಡು ಒಗ್ಗರಣೆ ಸೇರಿಸಿದರೆ, ದೋಸೆ, ಚಪಾತಿ ಊಟದೊಂದಿಗೆ ಸವಿಯಲು ಒಳ್ಳೆಯ ಚಟ್ನಿ ಸಿದ್ದ.
-
ನಿಮಗೆ ಹಸಿಮೆಣಸಿನಿಂದ ಮಾಡಿದ ಚಟ್ನಿ ಇಷ್ಟವಿದ್ದರೆ, ಬೇಯಿಸಿದ ಸಿಪ್ಪೆಗೆ ಹಸಿಮೆಣಸು, ತೆಂಗಿನ ತುರಿ, ಉಪ್ಪು ಸೇರಿಸಿ ರುಬ್ಬಿ ನಂತರ ಒಗ್ಗರಣೆ ಸೇರಿಸಿದರೆ ಚಟ್ನಿ ರೆಡಿಯಾಗುತ್ತದೆ.

Sunday, October 25, 2009

ಮೆಕ್ಸಿಕನ್ ರೈಸ್ / MEXICAN RICE

ಅನ್ನ ಎಂದರೆ ಒಂದು ಮೈಲು ದೂರ ಓಡುವ ನನ್ನ ಮಗಳು ಒಂದು ದಿನ, ಸ್ಕೂಲ್ ನಿಂದ ಬಂದು ಅಮ್ಮಾ ‘I had yummy yellow rice” ಅಂದಾಗ ನನಗೆ ಆಶ್ಚರ್ಯ, ಜೊತೆಗೆ ಕುತೂಹಲ ಕೂಡ!!!
ಹಾಗೆಯೇ ಗೂಗಲ್ ನಲ್ಲಿ ಹುಡುಕಿದಾಗ yellow rice ಅಂದರೆ ಒಂದು Mexican dish, ಇದನ್ನು ಮಾಡಲು annatto ಅಥವಾ Bixa seed ನ paste ಹಾಕಬೇಕೆಂದು ಗೊತ್ತಾಯಿತು. ಮತ್ತು ಇದನ್ನು ಹಾಕದೆಯೂ ಕೂಡ Mexican rice ಮಾಡಬಹುದೆಂದು ತಿಳಿಯಿತು. ನಮ್ಮ Fried riceನ ತರಾನೆ ಟೇಸ್ಟ್ ಬರುತ್ತದೆ. ಮಾಡಲು ತುಂಬಾ ಸುಲಭ ಹಾಗು 25-30ನಿಮಿಷದ ಒಳಗೆ ಸಿದ್ದವಾಗುತ್ತದೆ. ನಾನು ಮೆಕ್ಸಿಕನ್ನರ long grain riceಗೆ ಬದಲಾಗಿ ನಮ್ಮ ಬಾಸ್ಮತಿ ಅನ್ನವನ್ನು ಉಪಯೋಗಿಸಿದೆ.

ಅಕ್ಕಿ - 1 ಕಪ್

ಈರುಳ್ಳಿ - 1 (ಉದ್ದಕ್ಕೆ ತೆಳ್ಳಗೆ ಸೀಳಿ)

ಟೊಮೇಟೊ- 1 (ಉದ್ದಕ್ಕೆ ತೆಳ್ಳಗೆ ಸೀಳಿ)

ಕ್ಯಾಪ್ಸಿಕಂ - ½ (ಉದ್ದಕ್ಕೆ ತೆಳ್ಳಗೆ ಸೀಳಿ)

ಉಪ್ಪು - 1 ಚಮಚ / ರುಚಿಗೆ ತಕ್ಕಷ್ಟು

ಮೆಣಸಿನ ಪುಡಿ- ½ ಚಮಚ / (ಖಾರಕ್ಕೆ ಹೊಂದಿಕೊಂಡು)

ಬೆಳ್ಳುಳ್ಳಿ - ದೊಡ್ಡ 2 ಎಸಳು (ಸಣ್ಣಗೆ ಹೆಚ್ಚಿ)

ಟೊಮೇಟೊ ಸಾಲ್ಸಾ - 2 ಚಮಚ (ಇದು ಮೆಕ್ಸಿಕನ್ನರ ಸಾಸ್, ಟೊಮೇಟೊ ಜೊತೆಗೆ ಈರುಳ್ಳಿ, ಮೆಣಸು, ಬೆಳ್ಳುಳ್ಳಿ ಹಾಕಿದ ಮಿಶ್ರಣ)

ಎಣ್ಣೆ / ತುಪ್ಪ - 5-6 ಚಮಚ

ಅಕ್ಕಿಯನ್ನು ಸ್ವಲ್ಪ ನೀರಿನಲ್ಲಿ 15-20 ನಿಮಿಷ ನೆನೆಸಿಡಿ.

1 ½ - 2 ಕಪ್ ನೀರನ್ನು ಒಂದು ಬಾಣಲೆಯಲ್ಲಿ ಹಾಕಿಕೊಂಡು ಕುದಿಯಲು ಬಿಡಿ.

ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ / ತುಪ್ಪ ಹಾಕಿಕೊಂಡು ಬೆಳ್ಳುಳ್ಳಿ ಯನ್ನು ಚೆನ್ನಾಗಿ ಕೆಂಪಗೆ ಆಗುವ ತನಕ ಹುರಿದು, ನಂತರ ಇದಕ್ಕೆ ಈರುಳ್ಳಿ ಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ. ಅಕ್ಕಿಯನ್ನು ತೊಳೆದುಕೊಂಡು ಬಸಿದು, ಇದಕ್ಕೆ ಸೇರಿಸಿಕೊಂಡು ಇನ್ನು 5 ನಿಮಿಷ ಹುರಿಯಿರಿ. ಕೊನೆಯಲ್ಲಿ ಮೆಣಸಿನ ಪುಡಿ, ಸಾಲ್ಸಾ, ಉಪ್ಪು ಸೇರಿಸಿ ಈ ಮಿಶ್ರಣವನ್ನು ಕುದಿಯುವ ನೀರಿಗೆ ಸೇರಿಸಿ, ಸಣ್ಣ ಉರಿಯಲ್ಲಿ 15-20 ನಿಮಿಷ (ನೀರು ಆರುವ ತನಕ) ಬೇಯಿಸಿರಿ.

ಕೊನೆಯಲ್ಲಿ ಇನ್ನೊಂದು ಪಾತ್ರೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿಕೊಂಡು ಕ್ಯಾಪ್ಸಿಕಂನ್ನು ಚೆನ್ನಾಗಿ ಹುರಿಯಿರಿ. ಸ್ಟೋವ್ ಆರಿಸಿಬಿಟ್ಟು ನಂತರ ಟೊಮೇಟೊ ತುಂಡುಗಳನ್ನು ಸೇರಿಸಿ, ಇದನ್ನು ಅನ್ನದೊಂದಿಗೆ ಮಿಕ್ಸ್ ಮಾಡಿ raitha ದೊಂದಿಗೆ ತಿನ್ನಲು ಕೊಡಿ.

Friday, October 2, 2009

ಪ್ರಶಸ್ತಿಗಳಿಂದ ಬೆಲೆಕಟ್ಟಲಾಗದ ಹಸಿರು ಕ್ರಾಂತಿಯ ಹರಿಕಾರ ಡಾ.ನೋರ್ಮನ್ ಇ ಬೊರ್ಲಾಗ್

“You cannot build a peaceful world on empty stomach
and human misery”
– Dr. Norman E Borlaug (March 25, 1914 - September 12, 2009).

ಎಷ್ಟು ಸತ್ಯವಾದ ಮಾತುಗಳು....

ಅನಿವಾರ್ಯ ಕಾರಣಗಳಿಂದಾಗಿ ತುಂಬಾ ದಿನಗಳಿಂದ ಬ್ಲಾಗ್ ನಲ್ಲಿ ಏನೂ ಬರೆದಿರಲಿಲ್ಲ. ಇವತ್ತು ಬರೆಯುತ್ತಿರುವುದು ಯಾವುದೇ ಅಡುಗೆ ವಿಧಾನದ ಬಗ್ಗೆ ಅಲ್ಲ. ಎಷ್ಟೋ ದೇಶಗಳ ಬಡ ಜನರ ಹಸಿವೆಯನ್ನು ನೀಗಿಸಿದ ಅಧಿಕ ಇಳುವರಿಯ ಗೋಧಿ ತಳಿಯ ಸಂಶೋಧಕ, ಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ (agronomist), ಮಾನವತಾವಾದಿ (humanitarian), ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಡಾ.ನೋರ್ಮನ್ ಇ ಬೊರ್ಲಾಗ್ ಬಗೆಗೆ.
ಅಮೆರಿಕದೇಶದ ಪ್ರಜೆಯಾಗಿ ಉಳಿದ ಬಡದೇಶಗಳ ಆಹಾರ ಕ್ರಾಂತಿಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ಕೃಷಿ ವಿಜ್ಞಾನಿ ಡಾ. ಬೊರ್ಲಾಗ್. ಇವರ ಆಲೋಚನೆ, ಸಂಶೋದನೆ, ಪರಿಶ್ರಮದಿಂದಾಗಿ ಭಾರತ, ಪಾಕಿಸ್ತಾನ, ಮೆಕ್ಸಿಕೋದಂತಹ ರಾಷ್ಟ್ರಗಳು ಆಹಾರ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು. ಬಿಲಿಯನ್ ಜನರ ಹಸಿವನ್ನು ನೀಗಿಸಿ, ಜೀವ ಉಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಾಗಾಗಿ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದುವು. ಇದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ, ಅಮೇರಿಕಾದ ಪ್ರಜೆಗೆ ದೊರಕುವ ಅತ್ಯುನ್ನತ ಪ್ರಶಸ್ತಿ -Congressional Gold medal, ಜೊತೆಗೆ ಭಾರತದ ಪದ್ಮವಿಭೂಷಣ ಪ್ರಶಸ್ತಿ, ಮತ್ತು 50ಕ್ಕೂ ಹೆಚ್ಚು ವಿಶ್ವವಿಧ್ಯಾಲಯಗಳ ಗೌರವ ಡಾಕ್ಟರೇಟ್ ಪದವಿಗಳು. ಇವರ ಬಗ್ಗೆ ನೀವು ಇಲ್ಲಿ ಮತ್ತು ಇಲ್ಲಿ ಓದಬಹುದು.

ಡಾ ಬೊರ್ಲಾಗ್ ರವರು ನಾವು ಕೆಲಸ ಮಾಡುವ Texas A& M Universityಯಲ್ಲಿ ಉದ್ಯೋಗದಲ್ಲಿದ್ದರು. ಹಾಗಾಗಿ ಅವರ ಕೆಲವು ಪ್ರಶಸ್ತಿಗಳು ಹಾಗು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ...


ನೊಬೆಲ್ ಶಾಂತಿ ಪ್ರಶಸ್ತಿ -ಹಸಿರು ಕ್ರಾಂತಿಯ ಹರಿಕಾರನಿಗೆ, ಸ್ವೀಡನ್ ನ ನೊಬೆಲ್ ಫೌಂಡೇಶನ್ ನವರು ಡಿಸೆಂಬರ್ 10, 1970 ರಲ್ಲಿ ಕೊಟ್ಟ ಪ್ರಶಸ್ತಿ. ಇವರು ಇದುವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಏಕಮಾತ್ರ ಸಸ್ಯಶಾಸ್ತ್ರಜ್ಞ/ ಕೃಷಿ ವಿಜ್ಞಾನಿ.



Congressional Gold Medal (ಜುಲೈ 17, 2006)- ಅಮೆರಿಕ ದೇಶವು ತನ್ನ ಪ್ರಜೆಯೊಬ್ಬನಿಗೆ ಕೊಡುವ ಅತ್ಯುನ್ನತ ಪಶಸ್ತಿ.


Presidential medal of freedom (ಜನವರಿ 10, 1977) - ಇದು Congressional Gold Medal ಜೊತೆಗೆ ಅಮೆರಿಕ ದೇಶವು ತನ್ನ ಪ್ರಜೆಯೊಬ್ಬನಿಗೆ ಕೊಡುವ ಅತ್ಯುನ್ನತ ಪಶಸ್ತಿ.


National medal of science (ಫೆಬ್ರವರಿ13, 2005). ವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕ ದೇಶವು ತನ್ನ ಪ್ರಜೆಗೆ ಕೊಡುವ ಅತ್ಯುನ್ನತ ಪ್ರಶಸ್ತಿ.


ಅಧಿಕ ಇಳುವರಿಯ ಗೋಧಿ ತಳಿಯ ಉತ್ಪಾದನೆಗಾಗಿ ಮೆಕ್ಸಿಕೋ ಸರಕಾರದಿಂದ ಕೊಡಲ್ಪಟ್ಟ Order of the Aztec Eagle award (1970). ಇದು ಮೆಕ್ಸಿಕೋ ಸರಕಾರ ವಿದೇಶೀಯರಿಗೆ ಕೊಡುವ ಅತ್ಯುನ್ನತ ಪ್ರಶಸ್ತಿ.

ಕ್ಯಾನ್ಸರಿನಿಂದ ಬಳಲುತ್ತಿದರು ಕೂಡ ನಗುಮುಖದಿಂದ ತಮ್ಮ ಕಿರಿಯ ಸಹೋದ್ಯೋಗಿಗಳೊಂದಿಗೆ ಯಾವಾಗಲು discussionಗೆ ಪ್ರಾಮುಖ್ಯತೆ ನೀಡುತ್ತಿದ್ದ ಡಾ.ನೋರ್ಮನ್ ಇ ಬೊರ್ಲಾಗ್ ಜೊತೆಗೆ, ನಮ್ಮ ಮನೆಯವರು ಎರಡು ವರ್ಷಗಳ ಹಿಂದೆ.

ಈ ಎಲ್ಲ ಪ್ರಶಸ್ತಿ ಗಳು ಇಲ್ಲಿನ George bush Presidential library & Museum ನಲ್ಲಿಡಲಾಗಿದೆ.

ವೈಜ್ಞಾನಿಕ ಸಂಶೋಧನೆಗಳು ಎಷ್ಟೋ ಮಲ್ಟಿನ್ಯಾಷನಲ್ ಕಂಪನಿಗಳ ಧನಗಳಿಕೆಯ ಸೊತ್ತಾಗುವ ಈ ಕಾಲದಲ್ಲಿ ಡಾ. ಬೊರ್ಲಾಗ್ ರವರ ನಿಸ್ವಾರ್ಥ ಸೇವೆ ಹಾಗು ಮಾನವೀಯತೆ ನಿಜವಾಗಿಯು ಅನುಕರಣೀಯ. ಅವರು ನಡೆದು ಬಂದ ದಾರಿ, ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯ ನೆಲೆಯಾಗಬೇಕು.

Saturday, September 5, 2009

ಕಾಶ್ಮೀರಿ ಪಲಾವ್ / KASHMIRI PULAO

ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಕ್ಕಿ - 2 ಕಪ್
ಬಟಾಣಿ ಬೇಯಿಸಿ - ½ ಕಪ್
ಕ್ಯಾರೆಟ್ ಸಣ್ಣಗೆ ತುಂಡು ಮಾಡಿ ಬೇಯಿಸಿ - ¼ ಕಪ್
ಕ್ಯಾಪ್ಸಿಕಂ - 1 ಸಣ್ಣಗೆ ತುಂಡು ಮಾಡಿ
ಈರುಳ್ಳಿ - ½ ಕಪ್
ಸಕ್ಕರೆ - 2 ಚಮಚ (ಸಿಹಿಗೆ ಅನುಗುಣವಾಗಿ)
ಉಪ್ಪು - 2 ಚಮಚ / ರುಚಿಗೆ ತಕ್ಕಂತೆ
ಪಿಸ್ತಾ, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ - ¼ ಕಪ್
ಕ್ರೀಂ - 2 ಟೇಬಲ್ ಚಮಚ
ಹಾಲು - 1 ಟೇಬಲ್ ಚಮಚ- ಇದಕ್ಕೆ ಸ್ವಲ್ಪ ಕೇಸರಿ ಸೇರಿಸಿ ಕುದಿಸಿಡಬೇಕು.
ಚೆಕ್ಕೆ - ½” ಸಣ್ಣ ತುಂಡು / ಅಥವಾ 1-2 ಎಲೆ
ಏಲಕ್ಕಿ - 2
ಜೀರಿಗೆ - ¼ ಚಮಚ
ತುಪ್ಪ / ಬೆಣ್ಣೆ - 2 ಟೇಬಲ್ ಚಮಚ
ಹಣ್ಣುಗಳು (Seedless ದ್ರಾಕ್ಷಿ, ಆಪಲ್, Pineapple) - ಬೇಕಾದಷ್ಟು ಸಣ್ಣಗೆ ತುಂಡು ಮಾಡಿ


ಮಾಡುವ ವಿಧಾನ:
ಎರಡು ಕಪ್ ಅಕ್ಕಿಯನ್ನು ತೊಳೆದು 3 ಗ್ಲಾಸ್ ನೀರಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, 2 ಚಮಚ ತುಪ್ಪ ಹಾಕಿ ಬೇಯಿಸಬೇಕು. ಬೆಂದ ನಂತರ ಕುಕ್ಕರಿನ ಮುಚ್ಚಳ ತೆಗೆದಿಡಬೇಕು ಅಥವಾ ಒಂದು ದೊಡ್ಡ ಬಟ್ಟಲಿನಲ್ಲಿ ಅನ್ನವನ್ನು ಹರಡಿಡಬೇಕು. ಇದರಿಂದ ಅನ್ನ ಉದುರಾಗಿರುತ್ತದೆ.
ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿಮಾಡಿ ಇದರಲ್ಲಿ dry fruits ಗಳನ್ನು ಹುರಿದು ತೆಗೆದಿಡಬೇಕು.
ನಂತರ ಇದೇ ತುಪ್ಪದಲ್ಲಿ ಈರುಳ್ಳಿಯನ್ನು ಚೆನ್ನಾಗಿ ಹುರಿಯಬೇಕು. ಇದಕ್ಕೆ ಚೆಕ್ಕೆ, ಏಲಕ್ಕಿ, ಜೀರಿಗೆ, ಕ್ಯಾಪ್ಸಿಕಂ ಸೇರಿಸಿ ಸ್ವಲ್ಪ ಹುರಿಯಿರಿ. ಬೇಯಿಸಿದ ಕ್ಯಾರೆಟ್, ಬಟಾಣಿ ಸೇರಿಸಿ ಸ್ವಲ್ಪ ಹುರಿದುಕೊಂಡು ನಂತರ ಕೇಸರಿ ಹಾಲು, ಕ್ರೀಂ ಮತ್ತು ಬೇಯಿಸಿಟ್ಟ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ.
ಕೊನೆಯಲ್ಲಿ ದ್ರಾಕ್ಷಿ, ಆಪಲ್, ಅಥವಾ ನಿಮಗೆ ಬೇಕಾದ ಹಣ್ಣುಗಳನ್ನು ಸೇರಿಸಿ ತಿನ್ನಲು ಕೊಡಿ.
ಇದನ್ನು ಹಾಗೆಯೇ ತಿನ್ನಬಹುದು ಅಥವಾ raitha ದೊಂದಿಗೆ ಸವಿಯಬಹುದು. ನನಗೆ ಕ್ಯಾರೆಟ್ ಕೋಸಂಬರಿ ಯೊಂದಿಗೆ ತಿನ್ನಲು ಇಷ್ಟವಾಯಿತು.


Source: 100 Rice Delights by Mrs. Mallika Badrinath.

Sunday, August 30, 2009

ಕೋಸಂಬರಿ / KOSAMBARI

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ -1 ತುರಿದುಕೊಂಡು
ಹೆಸರುಬೇಳೆ - ¼ ಕಪ್

ತೆಂಗಿನ ತುರಿ - ಸ್ವಲ್ಪ
ಹಸಿಮೆಣಸು - 1 ಸಣ್ಣಗೆ ಹೆಚ್ಚಿ
ಉಪ್ಪು - ರುಚಿಗೆ ತಕ್ಕಷ್ಟು
ಲಿಂಬೆ ರಸ - ಸ್ವಲ್ಪ
ಒಗ್ಗರೆಣೆಗೆ - ಎಣ್ಣೆ, ಸಾಸಿವೆ, 1 ಒಣಮೆಣಸು, ಹಿಂಗು ಹಾಗು ಕರಿಬೇವು

ಮಾಡುವ ವಿಧಾನ:
ಹೆಸರುಬೇಳೆಯನ್ನು 2-3 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ತೊಳೆದು, ಬಸಿದುಕೊಂಡು ಮೇಲಿನ ಎಲ್ಲ ಸಾಮಗ್ರಿಗಳೊಂದಿಗೆ ಸೇರಿಸಿ, ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ ಕೋಸಂಬರಿ ಸಿದ್ದ. ಇದು ಆರೋಗ್ಯಕ್ಕೆ ತುಂಬ ಉತ್ತಮ.
ಇದಕ್ಕೆ ಬೇಕಿದ್ದರೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಕೂಡ ಸೇರಿಸಬಹುದು.

ಆಗಸ್ಟ್ 30, 2009 ರಂದು ಬರೆದಿದ್ದ ಇದನ್ನು ಅನಿವಾರ್ಯ ಕಾರಣಗಳಿಂದಾಗಿ ಪೋಸ್ಟ್ ಮಾಡಲಾಗಲಿಲ್ಲ.
ಇವತ್ತು ಸೆಪ್ಟೆಂಬರ್ 5, ಶಿಕ್ಷಕರ ದಿನ..ತಮ್ಮ ಬಾಳಿನುದ್ದಕ್ಕೂ ಆದರ್ಶ ಶಿಕ್ಷಕರಾಗಿ ದುಡಿದ ನನ್ನ ಪ್ರೀತಿಯ ಅಪ್ಪನ ಸವಿನೆನಪಿನೊಂದಿಗೆ.......

Tuesday, August 18, 2009

ಗುಳಿಅಪ್ಪ / ಗುಳಿಯಪ್ಪ


ಮಂಗಳೂರಿನ ತಿಂಡಿಗಳಲ್ಲಿ ತರಕಾರಿಗಳು ಸಾಮಾನ್ಯ. ಇದರಲ್ಲಿ ಪ್ರಮುಖವಾದುವುಗಳೆಂದರೆ ಸೌತೆಕಾಯಿ (ಮಂಗಳೂರು ಸೌತೆ), ಮುಳ್ಳುಸೌತೆ (ಸೌತೆಕಾಯಿ), ಸೋರೆಕಾಯಿ, ಹಲಸಿನ ಹಣ್ಣು/ ಕಾಯಿ - ಮುಂತಾದುವುಗಳಿಂದ ತಯಾರಿಸಿದ ದೋಸೆ ಹಾಗು ಕಡುಬುಗಳು (ಅಡ್ಯ =ತುಳು). ಗುಳಿಅಪ್ಪವನ್ನು ಗುಂಡಿಗಳಿರುವ ಕಬ್ಬಿಣದ/Nonstick ಕಾವಲಿಗೆಯಲ್ಲಿ ಮಾಡುತ್ತಾರೆ.

ಇದನ್ನು ಹಲವು ವಿಧಾನಗಳಲ್ಲಿ ಮಾಡಬಹುದು. ನಾವು ಚಿಕ್ಕವರಿದ್ದಾಗ ನಮಗೆ ಗುಳಿಯಪ್ಪ ಬಹಳ ಇಷ್ಟದ ತಿಂಡಿಯಾದುದರಿಂದ, ಬೆಳಗ್ಗಿನ ದೋಸೆ ಅಥವಾ ಇಡ್ಲಿ ಹಿಟ್ಟು (ಅಕ್ಕಿ ಅಥವಾ ರವೆ) ಉಳಿದಿದ್ದರೆ, ಅದಕ್ಕೆ ಸಂಜೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ ಅಮ್ಮ ಗುಳಿಅಪ್ಪ ಮಾಡುತ್ತಿದ್ದರು.

ಇನ್ನೊಂದು ರೀತಿಯ ಗುಳಿಅಪ್ಪ ಸೌತೆ ಕಾಯಿ (ಮುಳ್ಳುಸೌತೆ) ಹಾಕಿ ಮಾಡುವುದು. ಇದನ್ನು ಖಾರ ಅಥವಾ ಸಿಹಿಯಾಗಿ ಮಾಡಬಹುದು. ಖಾರ ಗುಳಿಯಪ್ಪ (ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸೇರಿಸಿ) ಬೆಳಗ್ಗಿನ ತಿಂಡಿಯಾದರೆ, ಸಿಹಿ ಗುಳಿಅಪ್ಪ ಹೆಚ್ಚಾಗಿ ಸಂಜೆ ಮಾಡುತ್ತಾರೆ. ಸೌತೆಕಾಯಿಯ ಬದಲು ಹಲಸಿನ ಹಣ್ಣು ಅಥವಾ ಬಾಳೆಹಣ್ಣು ಸೇರಿಸಿಕೊಂಡು ಅಕ್ಕಿಯ ಜೊತೆಗೆ ರುಬ್ಬಿ ಕೂಡ ಮಾಡಬಹುದು.

ಗುಳಿಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 ಕಪ್
ಸೌತೆ ಕಾಯಿ - ½ ಕಪ್ (ಸಿಪ್ಪೆ ತೆಗೆದು ತುರಿದುಕೊಂಡು)
ಬೆಲ್ಲ - ¼ ಕಪ್
ತೆಂಗಿನ ತುರಿ - ¼ ಕಪ್ (ತುರಿದು)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ- ಸ್ವಲ್ಪ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಇದಕ್ಕೆ ಸೌತೆಕಾಯಿಯ ನೀರನ್ನು ಉಪಯೋಗಿಸಬಹುದು. ಕೊನೆಯಲ್ಲಿ ಬೆಲ್ಲ ಹಾಗು ತೆಂಗಿನ ತುರಿ ಸೇರಿಸಿಕೊಂಡು 1ನಿಮಿಷ ರುಬ್ಬಿಕೊಂಡು ಈ ಮಿಶ್ರಣವನ್ನು ಸೌತೆಕಾಯಿ ತುರಿಯೊಂದಿಗೆ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಬಿಸಿ ಯಾಗಿರುವ ಗುಳಿಯಪ್ಪದ ಕಾವಲಿಗೆ ¼ ಚಮಚ ಎಣ್ಣೆ /ತುಪ್ಪ ಹಾಕಿಕೊಂಡು ಗುಳಿಯ ¾ ಭಾಗದ ವರೆಗೆ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಬೇಕು. 3-4 ನಿಮಿಷದ ನಂತರ ಇದನ್ನು ತಿರುವಿ ಹಾಕಿ ಪುನ: 1-2 ನಿಮಿಷ ಬೇಯಿಸಿದರೆ ಗುಳಿಯಪ್ಪ ತಿನ್ನಲು ಸಿದ್ದ. ಇದನ್ನು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಬಹುದು.

Saturday, August 15, 2009

Egg Pepper Fry

ಈ ರೆಸಿಪಿ ಸಿಕ್ಕಿದ್ದು ಒಬ್ಬ ಕೇರಳದ ಸಹೋದ್ಯೋಗಿಯಿಂದ. ಫ್ರಿಜ್ ಇರುವವರು ಮೊಟ್ಟೆಯನ್ನು boil ಮಾಡಿ ಶೇಖರಿಸಿಟ್ಟರೆ ಇದನ್ನು ಕೇವಲ 10 ನಿಮಿಷದಲ್ಲಿ ಮಾಡಬಹುದು. ಈರುಳ್ಳಿಯನ್ನು ಚೆನ್ನಾಗಿ ಕೆಂಪಗೆ ಆಗುವ ತನಕ ಹುರಿದರೆ flavour ಬಹಳ ಚೆನ್ನಾಗಿ ಬರುತ್ತದೆ.


ಬೇಕಾಗುವ ಸಾಮಗ್ರಿಗಳು:
ಮೊಟ್ಟೆ / Egg - 6
ಈರುಳ್ಳಿ - ½ ಕಪ್
ಕರಿಮೆಣಸಿನ ಪುಡಿ / Pepper - ½ -1 ಚಮಚ
ಹಳದಿ ಪುಡಿ - ಸ್ವಲ್ಪ
ಜೀರಿಗೆ -½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು


ಮಾಡುವ ವಿಧಾನ:
ಮೊಟ್ಟೆಗಳನ್ನು ಕುದಿಯುವ ನೀರಿನಲ್ಲಿ ಸ್ವಲ್ಪ ಉಪ್ಪು ಸೇರಿಸಿಕೊಂಡು 10-15 ನಿಮಿಷ ಬೇಯಿಸಿಕೊಳ್ಳಿ. ಇದು ತಣ್ಣಗಾದ ನಂತರ ಸಿಪ್ಪೆ ಬೇರ್ಪಡಿಸಿ, ಬೇಕಾದ ರೀತಿಯಲ್ಲಿ ತುಂಡು ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ 2-3 ಚಮಚ ಎಣ್ಣೆ ಹಾಕಿ, ಬಿಸಿಯಾದ ನಂತರ ½ ಚಮಚ ಜೀರಿಗೆ ಹಾಗು ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಿರಿ. ಕೊನೆಯಲ್ಲಿ ಸ್ವಲ್ಪ ಹಳದಿ ಪುಡಿ ಸೇರಿಸಿ 1 ನಿಮಿಷ ಹುರಿದುಕೊಂಡು ತುಂಡು ಮಾಡಿಟ್ಟ ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಗು ಕರಿಮೆಣಸಿನ ಪುಡಿ ಯನ್ನು ಸೇರಿಸಿ, 5 ನಿಮಿಷ ಸಣ್ಣ ಉರಿಯಲ್ಲಿ , ಮೊಟ್ಟೆ ಹಳದಿ ಬೇರ್ಪಡದಂತೆ ಮೆಲ್ಲಗೆ ತಿರುವಿದರೆ, egg pepper fry ರೆಡಿ. ಬೇಕಿದ್ದರೆ ½ ಚಮಚ ನಿಂಬೆ ರಸ ಹಾಗು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.ಇದನ್ನು ಪಲ್ಯದಂತೆ ಅನ್ನ ಅಥವಾ ಚಪಾತಿ ಜೊತೆಗೆ ತಿನ್ನಬಹುದು.

Sunday, August 2, 2009

ಪಾಸ್ತಾ / PASTA (Kids Favuorite; Indian Version)


ಬೇಕಾಗುವ ಸಾಮಗ್ರಿಗಳು:
ಪಾಸ್ತಾ - 200g
ಈರುಳ್ಳಿ - ½ ಕಪ್
ಕ್ಯಾಬೇಜ್ - ½ ಕಪ್ (ಉದ್ದಕೆ ತೆಳ್ಳಗೆ ಹೆಚ್ಚಿ)
Capsicum – ¼ ಕಪ್ (ಉದ್ದಕೆ ತೆಳ್ಳಗೆ ಹೆಚ್ಚಿ)
ತರಕಾರಿಗಳು - 1 ಕಪ್ (ಬೀನ್ಸ್, ಕ್ಯಾರೆಟ್, ಬಟಾಣಿ - ಸಣ್ಣಗೆ ಹೆಚ್ಚಿ ಬೇಯಿಸಿಟ್ಟುಕೊಳ್ಳಬೇಕು)
ಟೊಮೇಟೊ ಸಾಸ್ - 1-2 ಚಮಚ
ಸೋಯಾ ಸಾಸ್ - ½ ಚಮಚ
Heavy whipping cream - 2 ಟೇಬಲ್ ಸ್ಪೂನ್
Paramesan Cheese grated– 2-3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪಾಸ್ತಾವನ್ನು ಪ್ಯಾಕೆಟ್ ನಲ್ಲಿರುವ ಸೂಚನೆಯಂತೆ 10-12 ನಿಮಿಷ ಬೇಯಿಸಿ, ನೀರನ್ನು ಬಸಿಯಬೇಕು. ಪಾಸ್ತಾ ಬೇಯಿಸುವಾಗ ಕುದಿಯುವ ನೀರಿಗೆ ಸ್ವಲ್ಪಉಪ್ಪು ಹಾಗು 2 ಚಮಚ ಎಣ್ಣೆ ಹಾಕಿದರೆ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಬಸಿದಿಟ್ಟ ಪಾಸ್ತಾಕ್ಕೆ 2 ಚಮಚ ಎಣ್ಣೆ (olive oil ಹಾಕಿದರೆ ಉತ್ತಮ) ಹಾಕಿ ಮಗುಚಿಕೊಂಡು ಬದಿಯಲ್ಲಿಡಬೇಕು.
ಇದೇ ಸಮಯದಲ್ಲಿ ಒಂದು ದಪ್ಪ ತಳದ ಪಾತ್ರೆಗೆ 4 ಚಮಚ ಎಣ್ಣೆ ಹಾಕಿ, ಈರುಳ್ಳಿಯನ್ನು ಕೆಂಬಣ್ಣ ಬರುವವರೆಗೆ ಹುರಿಯಬೇಕು. ಇದಕ್ಕೆ ಕ್ಯಾಬೇಜ್, ನಂತರ Capsicum ಸೇರಿಸಿಕೊಂಡು 3-4 ನಿಮಿಷ ಹುರಿಯಬೇಕು. ಬೇಯಿಸಿದ ತರಕಾರಿಗಳನ್ನು (ನೀರು ಸೇರಿಸಬಾರದು) ಸೇರಿಸಿಕೊಂಡು, ½ ಚಮಚ ಉಪ್ಪು, ಟೊಮೇಟೊ ಮತ್ತು ಸೋಯಾ ಸಾಸ್ ಸೇರಿಸಿಕೊಂಡು ಚೆನ್ನಾಗಿ ಮಗುಚಬೇಕು. ಕೊನೆಯಲ್ಲಿ 2 ಟೇಬಲ್ ಚಮಚ ಕ್ರೀಂ ಹಾಗು cheeseನ್ನು ಸೇರಿಸಿ, ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ.
ಬೇಕಿದ್ದರೆ ಹಸಿಮೆಣಸನ್ನು (ಸಣ್ಣಗೆ ಹೆಚ್ಚಿ, ತರಕಾರಿಯೊಂದಿಗೆ fry ಮಾಡಿ) ಅಥವಾ ಕರಿಮೆಣಸಿನ ಪುಡಿಯನ್ನು (ಕೊನೆಯಲ್ಲಿ) ಸೇರಿಸಿಕೊಳ್ಳಬಹುದು.

ಇದು ಮಕ್ಕಳಿಗೆ ತುಂಬಾ ಇಷ್ಟವಾಗುವ ತಿಂಡಿ.

Honey Dew Melon Juice / milkshake


ಬೇಕಾಗುವ ಸಾಮಗ್ರಿಗಳು:
Honey Dew Melon - 1/2
ಸಕ್ಕರೆ - 4 ಚಮಚ
ಹಾಲು - 1 ಕಪ್
Ice-cube - 4

ಮಾಡುವ ವಿಧಾನ:

ಸಿಪ್ಪೆ ತೆಗೆದ honey Dew melon ನ್ನು ಮಧ್ಯದಲ್ಲಿ ಕತ್ತರಿಸಿ, ಬೀಜಗಳನ್ನು ತೆಗೆಯಬೇಕು. ಇದನ್ನು ಹೋಳುಗಳನ್ನಾಗಿ ಮಾಡಿ, ಮಿಕ್ಸಿಯಲ್ಲಿ ಸಕ್ಕರೆ, Ice-cube ಜೊತೆಗೆ ರುಬ್ಬಿಕೊಳ್ಳಬೇಕು. ಇದಕ್ಕೆ ತಣ್ಣಗಿನ ಹಾಲು ಸೇರಿಸಿಕೊಂಡು ಅಥವಾ ಸೇರಿಸದೆಯೇ ಕುಡಿಯಬಹುದು.