My photo
ಕರಾವಳಿ ಹುಡುಗಿ :)

Saturday, June 27, 2009

ಚಕ್ಕುಲಿ / CHAKKULI



ಮನೆಯಲ್ಲಿದ್ದಾಗ ಅಮ್ಮ ಮಾಡಿದ ಚಕ್ಕುಲಿಯನ್ನು ಡಬ್ಬ ಖಾಲಿಯಾಗುವ ತನಕ ತಿನ್ನೋದು ಬಿಟ್ರೆ, ಹೇಗೆ ಮಾಡುವುದು ಎಂದು ತಿಳಿಯುವ ಗೋಜಿಗೆ ಹೋಗಿರಲಿಲ್ಲ. ನಂತರ ಕೆಲವು ವರ್ಷಗಳ ಕಾಲ ಮೈಸೂರಿನಲ್ಲಿದ್ದಾಗ, ಅಯ್ಯಂಗಾರ್ಸ್ ಬೇಕರಿ, ಶ್ರೀಕೃಷ್ಣ ಬೇಕರಿ, ಮಹಾಲಕ್ಷ್ಮಿ ಸ್ವೀಟ್ಸ್, ಲಾಯಲ್ ವರ್ಲ್ಡ್...ಹೀಗೆ ಎಲ್ಲಾ ಕಡೆ ಒಳ್ಳೆಯ ತಿಂಡಿಗಳು ಸಿಕ್ತಾ ಇದ್ದಾಗ ನಿಜವಾಗಿಯೂ ಮನೆಯಲ್ಲಿ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಕೊನೆಗೂ ಇಲ್ಲಿ ಬಂದ ಮೇಲೆ ಸ್ವಂತ ಮಾಡಿದ್ರೆನೇ ತಿನ್ನೋ ಭಾಗ್ಯ, ಹೀಗೆ ಶುರುವಾಯಿತು ಚಕ್ಕುಲಿ ಪ್ರಯೋಗ.
(ಫ್ರೆಂಡ್ ಕೃಷ್ಣವೇಣಿಯ ಬ್ಲಾಗ್ ನೋಡಿ ಮಾಡಿದ್ದು)
ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 2 ಕಪ್
ಉದ್ದಿನಬೇಳೆ - 1 ಕಪ್ (ಅಥವಾ 1½ ಕಪ್ ನಷ್ಟು ಉದ್ದಿನ ಪುಡಿ)
ಜೀರಿಗೆ - 1 ಚಮಚ
ಬೆಣ್ಣೆ - 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಕರಿಯಲು

ಮಾಡುವ ವಿಧಾನ:
ಅಕ್ಕಿಯನ್ನು 3-4 ಗಂಟೆ ಅಥವಾ ಇಡೀ ರಾತ್ರಿ ನೀರಿನಲ್ಲಿ ನೆನಸಿಡಬೇಕು. ನಂತರ ಅದನ್ನು ತೊಳೆದುಕೊಂದು, ಸ್ವಲ್ಪ ನೀರು ಸೇರಿಸಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಉದ್ದಿನಬೇಳೆಯನ್ನು ಘಂ ಎನ್ನುವ ತನಕ ಹುರಿದುಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ಕೊನೆಯಲ್ಲಿ ರುಬ್ಬಿದ ಅಕ್ಕಿಗೆ, ಉದ್ದಿನಬೇಳೆ ಪುಡಿ, ಬೆಣ್ಣೆ, ಜೀರಿಗೆ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 30 ನಿಮಿಷ ಮುಚ್ಚಿ ಇಡಬೇಕು.
ಈ ಹಿಟ್ಟನ್ನು ಚಕ್ಕುಲಿ ಅಚ್ಚಿನಲ್ಲಿ ತುಂಬಿಸಿ, ಒಂದು wax ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ನ ಮೇಲೆ ಒತ್ತಿಕೊಂಡು, ಎಣ್ಣೆಯಲ್ಲಿ ಕರಿದರೆ, ಚಕ್ಕುಲಿ ಸಿದ್ದ.

Thursday, June 18, 2009

ಕಲ್ಲಂಗಡಿ ಹಣ್ಣಿನ ಸಿಪ್ಪೆ ಪಲ್ಯ



ನನ್ನ ಅಮ್ಮ ಈ ಪಲ್ಯ ಮಾಡ್ತಿದ್ದರು. ಆದ್ರೆ ಈ ಪಲ್ಯ ಬೇರೆ ಕಡೆಯಲ್ಲೂ ಫೇಮಸ್ ಇದೆ ಎಂದು ಪಾಕಚಂದ್ರಿಕೆ ಯಲ್ಲಿ ನೋಡಿ ತಿಳಿಯಿತು. ಕಲ್ಲಂಗಡಿ ಹಣ್ಣು ತಿಂದಾದ ನಂತರ ಉಳಿಯುವ ಸಿಪ್ಪೆಯನ್ನು ಬಳಸಿ ಈ ಪಲ್ಯವನ್ನು ಮಾಡಬಹುದು.

ಬೇಕಾಗುವ ಸಾಮಗ್ರಿಗಳು :
ಕಲ್ಲಂಗಡಿ ಹಣ್ಣಿನ ಸಿಪ್ಪೆ - 2-3 ಕಪ್ (ಸಿಪ್ಪೆಯನ್ನು ಒಂದು ಸಲ ನೀರಲ್ಲಿ ತೊಳೆದು ಸಣ್ಣಗೆ ಹೆಚ್ಚಬೇಕು)
ಈರುಳ್ಳಿ - ಸ್ವಲ್ಪ (ಸಣ್ಣಗೆ ಕಟ್ ಮಾಡಿ)
ಟೊಮೇಟೊ - ಸ್ವಲ್ಪ (ಸಣ್ಣಗೆ ಕಟ್ ಮಾಡಿ)

ಮಸಾಲೆಗೆ
ಕೊತ್ತಂಬರಿ ಪುಡಿ - ¾ ಚಮಚ
ಜೀರಿಗೆ ಪುಡಿ - ¾ ಚಮಚ
ಮೆಣಸಿನ ಪುಡಿ (ಬ್ಯಾಡಗಿ) - ¾ ಚಮಚ
ಅರಿಶಿನ ಪುಡಿ - ಸ್ವಲ್ಪ
ತೆಂಗಿನ ಕಾಯಿ ತುರಿ - ¾ ಕಪ್
ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರೆಣೆಗೆ
ಎಣ್ಣೆ, ಸಾಸಿವೆ, ಉದ್ದಿನಬೇಳೆ, ಬೆಳ್ಳುಳ್ಳಿ, ಕರಿಬೇವಿನ ಎಲೆ.

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಒಗ್ಗರಣೆ ಸೇರಿಸಿ, ಕೊನೆಯಲ್ಲಿ ಈರುಳ್ಳಿ ಹಾಕಿ ಸ್ವಲ್ಪ ಹುರಿಯಬೇಕು. ನಂತರ ಟೊಮೇಟೊ (ಅಥವಾ ಸ್ವಲ್ಪ ಹುಣಸೆ ರಸ) , ಹೆಚ್ಚಿದ ಕಲ್ಲಂಗಡಿ ಹಣ್ಣಿನ ಸಿಪ್ಪೆ ಹಾಗು ¼ ಕಪ್ ನೀರು ಸೇರಿಸಿ, 10-15 ನಿಮಿಷ ಹದ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ ನೀರು ಆವಿಯಾದ ನಂತರ ಎಲ್ಲ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿ, ಉಪ್ಪು, ಕಾಯಿತುರಿ ಸೇರಿಸಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಒಲೆಯಿಂದ ಇಳಿಸಿದರೆ ಪಲ್ಯ ಸಿದ್ದ.

Monday, June 8, 2009

ಖರ್ಜೂರ ಹಲ್ವ / DATE HALWA

ಬೇಕಾಗುವ ಸಾಮಗ್ರಿಗಳು:
ಖರ್ಜೂರ - 10
ಹಾಲು - 1 ಕಪ್ (160 ml)
ಸಕ್ಕರೆ - ½ ಕಪ್ (ನಿಮ್ಮ ರುಚಿಗೆ ಹೊಂದಿಕೊಂಡು)
Dry fruits (ಬಾದಾಮಿ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿ-ಎಲ್ಲ ಸಣ್ಣಗೆ ಕಟ್ ಮಾಡಿ) - 1ಕಪ್
ತುಪ್ಪ - ¼ ಕಪ್
ಏಲಕ್ಕಿ ಪುಡಿ - ಸ್ವಲ್ಪ
ಮಾಡುವ ವಿಧಾನ:
ಸಣ್ಣಗೆ ತುಂಡು ಮಾಡಿದ ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ತೆಗೆದಿಡಬೇಕು. ಖರ್ಜೂರದ ಬೀಜ ತೆಗೆದು, ಅದನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ದಪ್ಪತಳದ ಪಾತ್ರೆಯಲ್ಲಿ, ಹಾಲು ಮತ್ತು ಖರ್ಜೂರವನ್ನು ಹದಉರಿಯಲ್ಲಿ ಖರ್ಜೂರ ಮೆತ್ತಗೆ ಆಗುವ ತನಕ (10 ನಿಮಿಷ) ಕುದಿಸಬೇಕು. ಇದಕ್ಕೆ ಸಕ್ಕರೆ ಮತ್ತು ತುಪ್ಪ ಸೇರಿಸಿ, ತಳ ಬಿಡುವ ತನಕ (20 ನಿಮಿಷ) ಕಾಯಿಸಬೇಕು. ಕೊನೆಯಲ್ಲಿ ಏಲಕ್ಕಿ ಪುಡಿ, ಹುರಿದಿಟ್ಟ ಡ್ರೈ fruit ಗಳನ್ನು ಸೇರಿಸಿ, ತುಪ್ಪ ಸವರಿದ ಪ್ಲೇಟ್ ನಲ್ಲಿ ಹರಡಿ ಫ್ರೀಜರ್ ನಲ್ಲಿ 30 ನಿಮಿಷ ಇಟ್ಟು, ನಂತರ ಬೇಕಾದ ಆಕಾರಕ್ಕೆ ತುಂಡು ಮಾಡಿದರೆ, ಖರ್ಜೂರ ಹಲ್ವ ಸಿದ್ದ. ಇದನ್ನು ಫ್ರಿಜ್ ನಲ್ಲಿ ಇಟ್ಟರೆ ತಿನ್ನಲು ತುಂಬ ರುಚಿಯಾಗಿರುತ್ತದೆ.

Tuesday, June 2, 2009

ಮೊಳಕೆ ಕಾಳು - ಬಸಳೆ ಸೊಪ್ಪು ಸಾಂಬಾರ್


ಬೇಕಾಗುವ ಸಾಮಗ್ರಿಗಳು:
ಬಸಳೆ - ½ ಕೆ. ಜಿ.
ಮೊಳಕೆ ಕಾಳು (ಹೆಸರು ಕಾಳು ಅಥವಾ ಹುರುಳಿ ಕಾಳು)- 1 ಕಪ್
ಈರುಳ್ಳಿ - ¼ ಕಪ್
ಟೊಮೇಟೊ - ¼ ಕಪ್
ಹುಣಸೆಹಣ್ಣಿನ ರಸ - ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಬೆಲ್ಲ - ಸ್ವಲ್ಪ (ಬೇಕಿದ್ದರೆ ಮಾತ್ರ)
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ- ಎಣ್ಣೆ, ಕರಿಬೇವು, ಸಾಸಿವೆ, ಬೆಳ್ಳುಳ್ಳಿ,

ಮಸಾಲೆಗೆ:
ತೆಂಗಿನಕಾಯಿ ತುರಿ - 1 ಕಪ್
ಬ್ಯಾಡಗಿ ಮೆಣಸು - 5-6
ಕೊತ್ತಂಬರಿ ಬೀಜ - 2 ಚಮಚ
ಜೀರಿಗೆ - 1 ಚಮಚ
ಮೆಂತೆ - 6-8 ಬೀಜ
ಹಳದಿ ಪುಡಿ - ಚಿಟಿಕೆ

ಮಾಡುವ ವಿಧಾನ:
ಬಸಳೆ ಸೊಪ್ಪನ್ನು ದಂಟಿನಿಂದ ಬೇರ್ಪಡಿಸಿ, ತೊಳೆದು ಇಟ್ಟುಕೊಳ್ಳಬೇಕು.
ಬಸಳೆ ದಂಟನ್ನು 2-3 ಇಂಚು ಉದ್ದದ ತುಂಡು ಮಾಡಿಕೊಂಡು, ಮೊಳಕೆ ಕಾಳು ಸೇರಿಸಿ, ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.
ಮಸಾಲೆಯ ಎಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಪರಿಮಳ ಬರುವ ತನಕ ಹುರಿಯಬೇಕು. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೆಣಸನ್ನು ಹುರಿಯಬೇಕು. ಈ ಮಸಾಲೆ ಸಾಮಗ್ರಿಗಳನ್ನು ತೆಂಗಿನತುರಿ ಸೇರಿಸಿ , ಸ್ವಲ್ಪ ನೀರು ಸೇರಿಸಿಕೊಂಡು ರುಬ್ಬಿಟ್ಟು ಕೊಳ್ಳಬೇಕು.
ಬೇಯಿಸಿದ ದಂಟು, ಕಾಳು, ತುಂಡು ಮಾಡಿದ ಸೊಪ್ಪು, ಟೊಮೇಟೊ, ಈರುಳ್ಳಿ, ಹುಣಸೆ ರಸ, ಉಪ್ಪು, ಸ್ವಲ್ಪ ಬೆಲ್ಲ ಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ರುಬ್ಬಿದ ಮಸಾಲೆ ಸೇರಿಸಿ, 5-10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಒಲೆಯಿಂದ ಇಳಿಸಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿ.

Monday, May 25, 2009

STUFFED ಬೆಂಡೆಕಾಯಿ (STUFFED BHINDI / OKRA)

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ - 8-10
ಈರುಳ್ಳಿ - ¼ ಕಪ್ (ಸಣ್ಣಗೆ ಹೆಚ್ಚಿ)
ತೆಂಗಿನ ತುರಿ - 1 ಕಪ್
ಕೊತ್ತಂಬರಿ ಪುಡಿ - ¾ ಚಮಚ
ಜೀರಿಗೆ ಪುಡಿ - ¾ ಚಮಚ
ಮೆಣಸಿನ ಪುಡಿ - 1 ಚಮಚ
ಹಳದಿ - ಚಿಟಿಕೆ
ಹಿಂಗು - ಚಿಟಿಕೆ
ಹುಣಸೆಹಣ್ಣಿನ ರಸ - ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದದ್ದು
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿ)
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಸ್ವಲ್ಪ

ಮಾಡುವ ವಿಧಾನ:

ಬೆಂಡೆಕಾಯಿಯನ್ನು ನೀರಿನಲ್ಲಿ ತೊಳೆದು ಚೆನ್ನಾಗಿ ಒರೆಸಬೇಕು. ತೊಟ್ಟು ತೆಗೆದ ಬೆಂಡೆಕಾಯಿಯನ್ನು ಬುಡದಿಂದ ¾ ಭಾಗದ ತನಕ ಉದ್ದಕ್ಕೆ 2 ಸೀಳು ಮಾಡಬೇಕು. ತೆಂಗಿನತುರಿಯನ್ನು ಘಂ ಎನ್ನುವ ತನಕ ಹುರಿದುಕೊಂಡು, ತರಿತರಿಯಾಗಿ ಪುಡಿ ಮಾಡಬೇಕು. ಇದಕ್ಕೆ ಎಲ್ಲ ಮಸಾಲೆ ಸಾಮಗ್ರಿ, ಈರುಳ್ಳಿ, ಹುಣಸೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬೇಕಿದ್ದರೆ ಸ್ವಲ್ಪ ನೀರು ಸೇರಿಸಬಹುದು. ಈ ಮಸಾಲೆಯನ್ನು ಸೀಳಿಟ್ಟ ಬೆಂಡೆಕಾಯಿಯ ಒಳಗೆ ತುಂಬಿಸಬೇಕು. ಒಂದು ನಾನ್ ಸ್ಟಿಕ್ ಕಾವಲಿಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಬೆಂಡೆಕಾಯಿಗಳನ್ನಿಟ್ಟು, ಸಣ್ಣ ಉರಿಯಲ್ಲಿ 30 ನಿಮಿಷ (10 ನಿಮಿಷಕ್ಕೊಮ್ಮೆ ಬೆಂಡೆಕಾಯಿಯನ್ನು ತಿರುಗಿಸುತ್ತಿರಬೇಕು) ಬೇಯಿಸಬೇಕು.

Thursday, May 7, 2009

ಪನೀರ್ ಮಟರ್ / PANEER MATTAR

ಬೇಕಾಗುವ ಸಾಮಗ್ರಿಗಳು:
ಪನೀರ್ (Paneer) - 100 ಗ್ರಾಂ
ಬಟಾಣಿ (mattar) -1 ½ ಕಪ್ (ಬೇಯಿಸಿದ್ದು / Frozen)
ಈರುಳ್ಳಿ - 1 ಕಪ್
ಟೊಮೇಟೊ ಪ್ಯೂರಿ (Tomato puree) – 5 ಚಮಚ / 1 ಟೊಮೇಟೊದ್ದು
ಕ್ರೀಂ - ½ ಕಪ್
ಶುಂಠಿ - 1 ಚಮಚ (ತುರಿದು)
ಬೆಳ್ಳುಳ್ಳಿ - 1 ಚಮಚ (ತುರಿದು)
ಜೀರಿಗೆ - ½ ಚಮಚ
ಗೋಡಂಬಿ ಬೀಜ - 5 (ಚೆನ್ನಾಗಿ ಪುಡಿ ಮಾಡಿ)
ಜೀರಿಗೆ ಪುಡಿ - ½ ಚಮಚ
ಕೊತ್ತಂಬರಿ ಪುಡಿ - ½ ಚಮಚ
ಮೆಣಸಿನ ಪುಡಿ - 1- 2 ಚಮಚ
ಮೆಂತ್ಯ ಪುಡಿ - ಚಿಟಿಕೆ
ಅರಿಶಿನ ಪುಡಿ - ಚಿಟಿಕೆ
ಎಣ್ಣೆ - 1- 2 ಟೇಬಲ್ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಪನೀರ್ ನ್ನು ಸಣ್ಣಗೆ ಕಟ್ ಮಾಡಿ, ಎಣ್ಣೆಯಲ್ಲಿ ಸ್ವಲ್ಪ ಕೆಂಪು ಬಣ್ಣ ಬರುವ ತನಕ ಹುರಿದು ಪ್ಲೇಟ್ ನಲ್ಲಿ ತೆಗೆದು ಇಡಬೇಕು. ಇದೇ ಎಣ್ಣೆಗೆ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಪುಡಿಯನ್ನು ಸೇರಿಸಿಕೊಂಡು, 1 ನಿಮಿಷ ಹುರಿಯಬೇಕು. ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಬೇಕು. ನಂತರ ಎಲ್ಲಾ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿಕೊಂಡು, ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಬೇಕು. ಟೊಮೇಟೊ ಪ್ಯೂರೀ ಸೇರಿಸಿ, 5 ನಿಮಿಷ ಹುರಿದುಕೊಂಡು, ನಂತರ ಬಟಾಣಿ ಸೇರಿಸಿ, ½ ಕಪ್ ನೀರು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಮುಚ್ಚಿ ಬೇಯಿಸಬೇಕು. ನಂತರ ಹುರಿದ ಪನೀರ್ ಸೇರಿಸಿ, 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ½ ಕಪ್ ಕ್ರೀಂ , ಉಪ್ಪು ಸೇರಿಸಿ, ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಬೇಕು. ಪನೀರ್ ಹಾಕಿದ ನಂತರ ಇದನ್ನು ಜೋರಾಗಿ ಮಿಕ್ಸ್ ಮಾಡಬಾರದು. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ, ರೊಟ್ಟಿ ಯೊಂದಿಗೆ ತಿನ್ನಬಹುದು.

Wednesday, May 6, 2009

ಮಿಲ್ಕ್ ಶೇಕ್ ಗಳು

ಬೇಸಗೆಯ ಸೆಖೆಗೆ, ಮನೆಗೆ ಬಂದು ತಣ್ಣನೆಯ ಜ್ಯೂಸ್/ ಮಿಲ್ಕ್ ಶೇಕ್ ಕುಡಿದರೆ, ಹಾಯಾಗಿರುತ್ತದೆ ಹಾಗು ಆರೋಗ್ಯಕ್ಕೂ ಒಳ್ಳೆಯದು.

ಸ್ಟ್ರಾಬೆರಿ ಜ್ಯೂಸ್ / ಮಿಲ್ಕ್ ಶೇಕ್ :
ಸ್ಟ್ರಾಬೆರಿ - 6-10
ಸಕ್ಕರೆ - 4 ಚಮಚ
ತಣ್ಣಗಿನ ಹಾಲು - 1- 1½ ಗ್ಲಾಸ್
ಸ್ಟ್ರಾಬೆರಿ ಯನ್ನು ತುಂಡು ಮಾಡಿ, ಸಕ್ಕರೆ ಹಾಲು ಸೇರಿಸಿ ಮಿಕ್ಸಿ ಯಲ್ಲಿ 2-3 ನಿಮಿಷ ರುಬ್ಬಿಕೊಂಡು ಗ್ಲಾಸ್ ಗೆ ಹಾಕಿದರೆ, ಸ್ಟ್ರಾಬೆರಿ ಜ್ಯೂಸ್ / ಮಿಲ್ಕ್ ಶೇಕ್ ಕುಡಿಯಲು ಸಿದ್ದ.



ಸೇಬು (APPLE) ಮಿಲ್ಕ್ ಶೇಕ್
Apple - 1
ಸಕ್ಕರೆ - 4 ಚಮಚ
ಹಾಲು - 1- 1½ ಗ್ಲಾಸ್
ಸೇಬನ್ನು ತುಂಡು ಮಾಡಿ, ಬೀಜ ತೆಗೆದು (ಬೇಕಿದ್ದರೆ ಸಿಪ್ಪೆ ಕೂಡ, ನಿಮ್ಮಿಷ್ಟ) ಮಿಕ್ಸಿಯಲ್ಲಿ ರುಬ್ಬಿದರೆ, ಆಪಲ್ ಜ್ಯೂಸ್ / ಮಿಲ್ಕ್ ಶೇಕ್ ಸಿದ್ದ. ಇದಕ್ಕೆ ಹತ್ತು ಕಾಳು ಏಲಕ್ಕಿ ಹಾಕಿದರೆ, flavour ತುಂಬಾ ಚೆನ್ನಾಗಿರುತ್ತದೆ.

Thursday, April 30, 2009

ಕಡಾಯಿ ಮಶ್ರೂಮ್ / KADAI MUSHROOM


ಬೇಕಾಗುವ ಸಾಮಗ್ರಿಗಳು:
ಮಶ್ರೂಮ್ (Button Mushroom) - 200 ಗ್ರಾಂ
ಕ್ಯಾಪ್ಸಿಕಂ (Capsicum / Bell pepper) - ¼ ಕಪ್ (ಉದ್ದಕ್ಕೆ ಹೆಚ್ಚಿದ್ದು)
ಬಟಾಣಿ - ¼ ಕಪ್ (ಬೇಯಿಸಿದ್ದು / Frozen)
ಈರುಳ್ಳಿ - 1 ಕಪ್
ಟೊಮೇಟೊ - ½ ಕಪ್ (ಹೆಚ್ಚಿದ್ದು)
ಟೊಮೇಟೊ ಪ್ಯೂರಿ (Tomato puree) – 5 ಚಮಚ
ಕ್ರೀಂ - ½ ಕಪ್ (Whipping cream)
ಶುಂಠಿ - 1 ಚಮಚ (ತುರಿದು)
ಬೆಳ್ಳುಳ್ಳಿ - 1 ಚಮಚ (ತುರಿದು)
ಜೀರಿಗೆ - ½ ಚಮಚ
ಜೀರಿಗೆ ಪುಡಿ - 1 ಚಮಚ
ಕೊತ್ತಂಬರಿ ಪುಡಿ - 1 ಚಮಚ
ಮೆಣಸಿನ ಪುಡಿ - 1- 2 ಚಮಚ
ಮೆಂತ್ಯ ಪುಡಿ - ಚಿಟಿಕೆ
ಅರಿಶಿನ ಪುಡಿ - ಚಿಟಿಕೆ
ಎಣ್ಣೆ - 1-2 ಟೇಬಲ್ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮಶ್ರೂಮ್ ನ್ನು, ಒದ್ದೆ ಬಟ್ಟೆಯಲ್ಲಿ ಒರೆಸಿ, ತುಂಡು ಮಾಡಿಟ್ಟುಕೊಳ್ಳಬೇಕು.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆಯನ್ನು ಹುರಿದುಕೊಂಡು, ಶುಂಠಿ- ಬೆಳ್ಳುಳ್ಳಿಯನ್ನು ಸೇರಿಸಿಕೊಂಡು, 1 ನಿಮಿಷ ಹುರಿಯಬೇಕು. ನಂತರ ಇದಕ್ಕೆ ಈರುಳ್ಳಿಯನ್ನು ಸೇರಿಸಿ, ಕೆಂಪಗಾಗುವ ತನಕ ಹುರಿಯಬೇಕು. ನಂತರ ಎಲ್ಲಾ ಮಸಾಲೆಯ ಸಾಮಗ್ರಿಗಳನ್ನು ಸೇರಿಸಿಕೊಂಡು, ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಬೇಕು. ಇದಕ್ಕೆ ಟೊಮೇಟೊ ಪ್ಯೂರಿ, ಟೊಮೇಟೊ ಸೇರಿಸಿ , 5 ನಿಮಿಷ ಹುರಿದುಕೊಂಡು, ನಂತರ ಕಟ್ ಮಾಡಿದ ಮಶ್ರೂಮ್, ಕ್ಯಾಪ್ಸಿಕಂ , ಬಟಾಣಿ ಸೇರಿಸಿ, ಸಣ್ಣ ಉರಿಯಲ್ಲಿ 30 ನಿಮಿಷ ಮುಚ್ಚಿ ಬೇಯಿಸಬೇಕು. ಕೊನೆಯಲ್ಲಿ ½ ಕಪ್ ಕ್ರೀಂ ಸೇರಿಸಿ, ಒಂದು ಸಲ ಕುದಿಸಿ, ಉಪ್ಪು ಸೇರಿಸಿ, ಒಲೆಯಿಂದ ಇಳಿಸಿದರೆ, ಕಡಾಯಿ ಮಶ್ರೂಮ್ ಸಿದ್ದ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ, ರೊಟ್ಟಿ ಯೊಂದಿಗೆ ತಿನ್ನಬಹುದು.

ಮಶ್ರೂಮ್ ನ್ನು ನೀರಿನಲ್ಲಿ ಮುಳುಗಿಸಿ ತೊಳೆದರೆ, ಅದು ಬೇಯಿಸುವಾಗ crispness ಕಳೆದುಕೊಳ್ಳುತ್ತದೆ. ಹಾಗೆಯೇ ಬೇಯಿಸುವಾಗ ಕೂಡ, ನೀರು ಸೇರಿಸಬಾರದು. ಸಣ್ಣ ಉರಿಯಲ್ಲಿ ಬೇಯಿಸಿದರೆ ಅದು ನೀರು ಬಿಟ್ಟುಕೊಳ್ಳುತ್ತದೆ. ಇದೇ ನೀರು ಬೇಯಲು ಸಾಕಾಗುತ್ತದೆ. ಇದನ್ನು ಕ್ರೀಂ ಸೇರಿಸದೆ ಕೂಡ ಮಾಡಬಹುದು.

ಮನೆಯಲ್ಲಿ ಟೊಮೇಟೊ ಪ್ಯೂರಿ ಮಾಡುವ ವಿಧಾನ - ಕುದಿಯುವ ನೀರಿಗೆ ಇಡೀ ಟೊಮೇಟೊವನ್ನು ಹಾಕಿಕೊಂಡು, 5-10 ನಿಮಿಷ ಕುದಿಸಬೇಕು. ತಣ್ಣಗಾದ ನಂತರ ಸಿಪ್ಪೆ ತೆಗೆದುಕೊಂಡು, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

Friday, April 24, 2009

ಹೆಸರುಕಾಳು ವಡೆ / MUNG BEAN VADA


ಬೇಕಾಗುವ ಸಾಮಗ್ರಿಗಳು:
ಹೆಸರುಕಾಳು - 2 ಕಪ್ (ಮೊಳಕೆ ಬರಿಸಿದ್ದು)
ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿ)
ಬೆಳ್ಳುಳ್ಳಿ ತುರಿದು - 1 ಚಮಚ
ಶುಂಠಿ ತುರಿದು - 1 ಚಮಚ
ಜೀರಿಗೆ - ½ ಚಮಚ
ಎಳ್ಳು - ½ ಚಮಚ
ಕೊತ್ತಂಬರಿ ಸೊಪ್ಪು - 2 ಚಮಚ (ಸಣ್ಣಗೆ ಹೆಚ್ಚಿ)
ಕರಿಬೇವು - 1 ಚಮಚ (ಸಣ್ಣಗೆ ಹೆಚ್ಚಿ)
ಹಸಿಮೆಣಸು - 1- 2 (ಸಣ್ಣಗೆ ಹೆಚ್ಚಿ)
ಕಾರದ ಪುಡಿ - ¼ ಚಮಚ
ಕಡ್ಲೆ ಹಿಟ್ಟು - 1 ಟೇಬಲ್ ಚಮಚ
ಕಾರ್ನ್ ಫ್ಲೋರ್ - 1 ಟೇಬಲ್ ಚಮಚ
ಉಪ್ಪು - ½ ಚಮಚ / ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೊಳಕೆ ಬರಿಸಿದ ಹೆಸರುಕಾಳನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಬೇಕು. ಇದಕ್ಕೆ ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ (ನೀರು ಹಾಕದೆ) ಚೆನ್ನಾಗಿ ಮಿಕ್ಸ್ ಮಾಡಬೇಕು. ಇದರಿಂದ 10 ಉಂಡೆಗಳನ್ನು ಮಾಡಿ ಬೇಕಾದ ಆಕಾರದಲ್ಲಿ ಕೈಯಿಂದ ಒತ್ತಿ, ಕೆಂಬಣ್ಣ ಬರುವವರೆಗೆ, ಕಾದ ಎಣ್ಣೆಯಲ್ಲಿ ಹದ ಉರಿಯಲ್ಲಿ ಕರಿದರೆ, ಹೆಸರುಕಾಳು ವಡೆ/ ಪಕೋಡ ಸಿದ್ದ. ಇದನ್ನು, ಟೊಮೇಟೊ ಸಾಸ್ / ತೆಂಗಿನ ಕಾಯಿ ಚಟ್ನಿ ಯೊಂದಿಗೆ ತಿನ್ನಬಹುದು.

ಇದಕ್ಕೆ ಎಲ್ಲಿಯೂ ನೀರು ಸೇರಿಸಬಾರದು. ಮೊಳಕೆ ಬರಿಸಿದ ಹೆಸರುಕಾಳು ಇಲ್ಲದಿದ್ದಲ್ಲಿ, ಹೆಸರುಕಾಳನ್ನು ನೀರಿನಲ್ಲಿ 5-6 ಗಂಟೆ ನೆನೆಸಿ ಉಪಯೋಗಿಸಬಹುದು. ಉಂಡೆ ಮಾಡುವಾಗ ಅಂಟು ಬರದಿದ್ದಲ್ಲಿ, ಸ್ವಲ್ಪ ಹಿಟ್ಟು ಜಾಸ್ತಿ ಹಾಕಿ ಉಂಡೆ ಮಾಡಬಹುದು.

Friday, April 10, 2009

ಅವಿಲ್ / ಅವಿಯಲ್ / AVIAL

ಅವಿಲ್ ಅಥವಾ ಆವಿಯಲ್ ಮಲಯಾಳಿಗರ ಓಣಂ ಊಟದ ಪ್ರಮುಖ ಡಿಶ್. ಮನೆಯಲ್ಲಿ ಎಲ್ಲಾ ತರಕಾರಿಗಳು ಸ್ವಲ್ಪ ಸ್ವಲ್ಪ ಇದ್ದರೆ, ಇದು ಒಂದು ರುಚಿಯಾದ ಅಡುಗೆ.




ಅವಿಲ್ ಮಾಡಲು ಬೇಕಾಗುವ ಸಾಮಗ್ರಿಗಳು:
ತರಕಾರಿಗಳು - 3-4 ಕಪ್ (ತೊಂಡೆಕಾಯಿ, ಬಾಳೆಕಾಯಿ, ಸುವರ್ಣಗಡ್ಡೆ, ಬೀನ್ಸ್, ಹೀರೆಕಾಯಿ, ಸೋರೆಕಾಯಿ, ಪಡುವಲಕಾಯಿ, ಸೌತೆಕಾಯಿ, ಆಲೂಗಡ್ಡೆ -ಎಲ್ಲಾ ತರಕಾರಿಗಳನ್ನು ಸ್ವಲ್ಪ ದೊಡ್ಡದಾಗಿ ಕಟ್ ಮಾಡಬೇಕು)
ನನಗೆ ಎಲ್ಲಾ ತರಕಾರಿಗಳು ಸಿಗದ ಕಾರಣ ಬಾಳೆಕಾಯಿ, ಬೀನ್ಸ್, ಆಲೂಗಡ್ಡೆ ಹಾಗು ಅವರೆಕಾಳು ಹಾಕಿ ಮಾಡಿದ್ದೇನೆ)
ತೆಂಗಿನ ತುರಿ - 1 ಕಪ್
ಹಸಿಮೆಣಸು - 3
ಜೀರಿಗೆ - 1 ಚಮಚ
ಶುಂಠಿ - 2 ಸೆ.ಮಿ ತುಂಡು
ಬೆಳ್ಳುಳ್ಳಿ - 1 ಎಸಳು (ಬೇಕಿದ್ದರೆ ಮಾತ್ರ)
ಮೊಸರು - ½ ಕಪ್

ಹಳದಿ ಪುಡಿ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವು- 8- 10 ಎಲೆ
ತೆಂಗಿನ ಎಣ್ಣೆ - 2 ಚಮಚ

ಮಾಡುವ ವಿಧಾನ :
ತರಕಾರಿಯನ್ನು 2 ಹಸಿಮೆಣಸು, ಒಂದು ಕಪ್ ನೀರು ಸೇರಿಸಿ ಬೇಯಿಸಿ ಇಟ್ಟುಕೊಳ್ಳಬೇಕು.
ತೆಂಗಿನತುರಿಯನ್ನು 1 ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಹಳದಿ ಪುಡಿ ಸೇರಿಸಿ ರುಬ್ಬಬೇಕು. ಇದನ್ನು ಬೇಯಿಸಿದ ತರಕಾರಿಯೊಂದಿಗೆ ಬೆರೆಸಿ, ಉಪ್ಪು, ಕೊನೆಯಲ್ಲಿ ಮೊಸರು ಸೇರಿಸಿ, ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಎಣ್ಣೆ ಬಿಸಿ ಮಾಡಿ ಕರಿಬೇವಿನ ಒಗ್ಗರಣೆ ಕೊಟ್ಟರೆ ಅವಿಲ್ ಸಿದ್ದ.
ಅವಿಲ್ ಸಾಂಬಾರಿಗಿಂತ ಗಟ್ಟಿಯಾಗಿ ಇರುತ್ತದೆ. ಇದನ್ನು ಅನ್ನ ಹಾಗು ಚಪಾತಿಯೊಂದಿಗೆ ತಿನ್ನಬಹುದು.