ಇದು ಮಂಗಳೂರಿನ ಅದರಲ್ಲೂ ತುಳುವರ ಮನೆಯ ಮದುವೆ, ಹಬ್ಬಗಳಲ್ಲಿ ಇರಲೇಬೇಕಾದ ಖಾದ್ಯ. ತೊಂಡೆಕಾಯಿಗೆ ತುಳುವಿನಲ್ಲಿ ‘ಮನೋಳಿ’ ಹಾಗೂ ಪಲ್ಯಕ್ಕೆ ‘ಆಜಾಯಿನ/ಸುಕ್ಕ’ ಎಂದು ಕರೆಯುತ್ತಾರೆ. ಈ ಪಲ್ಯಕ್ಕೆ ತೆಂಗಿನ ತುರಿಯನ್ನು ಮಸಾಲೆಯೊಂದಿಗೆ ಧಾರಾಳವಾಗಿ ಬಳಸಲಾಗುತ್ತದೆ. ಅದರಲ್ಲೂ ‘ವಿಷುಹಬ್ಬ’ದಂದು ಇದೇ ರೀತಿ ತೊಂಡೆಕಾಯಿ ಮತ್ತು ಎಳೆ ಹಸಿ ಗೇರುಬೀಜದೊಂದಿಗೆ ಸೇರಿಸಿ ಪಲ್ಯವನ್ನು ತಯಾರಿಸುತ್ತಾರೆ. ಈ ಪಲ್ಯ ತಿನ್ನಲು ತುಂಬ ರುಚಿ.
ಬೇಕಾಗುವ ಸಾಮಗ್ರಿಗಳು:
ತೊಂಡೆಕಾಯಿ - ಕಪ್ (1/2 kg, ಉದ್ದಕ್ಕೆ ಸೀಳಿ)
ಈರುಳ್ಳಿ - 1 (ಸಣ್ಣಗೆ ಹೆಚ್ಚಿ)
ಟೊಮೇಟೊ - 1 (ಸಣ್ಣಗೆ ಹೆಚ್ಚಿ)
ಕಡ್ಲೆ (Kabuli Chana)- 1 ½ ಕಪ್
ತೆಂಗಿನಕಾಯಿ - 1 ಕಪ್ ತುರಿದು
ಮಸಾಲೆಗೆ:
ಎಣ್ಣೆ - ½ ಚಮಚ
ಮೆಂತೆ - ¼ ಚಮಚ
ಮೆಣಸು (ಬ್ಯಾಡಗಿ) - 6-8
ಕೊತ್ತಂಬರಿ ಬೀಜ - 3 ಚಮಚ
ಜೀರಿಗೆ - 1 ಚಮಚ
ಹಳದಿ ಪುಡಿ - ಚಿಟಿಕೆ
ಒಗ್ಗರಣೆಗೆ:
ಎಣ್ಣೆ - 1 ಚಮಚ
ಸಾಸಿವೆ- ½ ಚಮಚ
ಬೆಳ್ಳುಳ್ಳಿ - 2 ದೊಡ್ಡ ಎಸಳು
ಒಣ ಮೆಣಸು - 1
ಕರಿಬೇವು - 6 ಎಲೆ
ತಯಾರಿಸುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಮೆಂತೆಯನ್ನು ಸ್ವಲ್ಪಕೆಂಪಗೆ ಆಗುವಷ್ಟು ಹುರಿದು ನಂತರ ಇದಕ್ಕೆ ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹದ ಉರಿಯಲ್ಲಿ ಹುರಿಯಿರಿ. ಮೆಣಸನ್ನು ಪ್ರತ್ಯೇಕ ಹುರಿದಿಟ್ಟುಕೊಳ್ಳಬಹುದು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತಣ್ಣಗಾದ ನಂತರ ಈ ಮಸಾಲೆಯನ್ನು ನೀರು ಸೇರಿಸದೆ ಪುಡಿ ಮಾಡಿ.
ಇನ್ನೊಂದು ಪಾತ್ರೆಯಲ್ಲಿ, 2 ಚಮಚ ಎಣ್ಣೆ ಸೇರಿಸಿ, ಈರುಳ್ಳಿ ಸೇರಿಸಿ ಸ್ವಲ್ಪ ಕೆಂಪಗೆ ಆಗುವ ತನಕ ಹುರಿಯಿರಿ, ನಂತರ ಇದಕ್ಕೆ ಟೊಮೇಟೊ, ತೊಂಡೆಕಾಯಿ ಹಾಗು 1/4 ಕಪ್ ನೀರು ಸೇರಿಸಿ ಹದವಾಗಿ ಬೇಯಿಸಿ. ತೊಂಡೆಕಾಯಿ ಬೇಯುತ್ತ ಬಂದಾಗ, ಇದಕ್ಕೆ ಮಸಾಲೆ ಪುಡಿ, ಕಡ್ಲೆ, ತೆಂಗಿನತುರಿ, ಉಪ್ಪು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಒಗ್ಗರಣೆ ಸೇರಿಸಿ.
ಈ ಪಲ್ಯಕ್ಕೆ 10 ರಿಂದ 15 ಗೋಡಂಬಿಯನ್ನು ಹುರಿದು ಸೇರಿಸಿದರೆ ತುಂಬಾ ರುಚಿಯಾಗಿರುತ್ತದೆ.
ಇಲ್ಲಿ ಉತ್ತಮ ಗುಣ ಮಟ್ಟದ ಬ್ಯಾಡಗಿ ಮೆಣಸು ಸಿಗದ ಕಾರಣ ನಾನು ಮಸಾಲೆಯ ಪುಡಿಗಳನ್ನು ಮೆಣಸು ಸೇರಿಸದೆ ಹುರಿದು ಪುಡಿಮಾಡಿಟ್ಟುಕೊಳ್ಳುತ್ತೇನೆ. ಕೊನೆಯಲ್ಲಿ ನನ್ನ ಪ್ರೀತಿಯ ಅತ್ತೆ ಊರಿನಿಂದ ಕಳಿಸಿದ ಬ್ಯಾಡಗಿ ಮೆಣಸಿನ ಪುಡಿಯನ್ನು ಬಳಸುತ್ತೇನೆ.
ವಿಷು ಅಥವಾ ಸೌರಮಾನ ಯುಗಾದಿ ಎಂದರೆ ನನಗೆ ನೆನಪಾಗುವುದು ನನ್ನೂರು, ಕಾಸರಗೋಡು ಜಿಲ್ಲೆಯ ಪುಟ್ಟ ಗ್ರಾಮ 'ಕಯ್ಯಾರು', ಅದೇ ಹಿರಿಯ ಕವಿಗಳ ಹೆಸರಲ್ಲಿರೋ ಊರು. ಕೇರಳಿಗರ ಪ್ರಭಾವವೋ ತಿಳಿಯದು, ಇಲ್ಲಿರುವ ಹೆಚ್ಚಿನ ಹಿಂದೂಗಳೆಲ್ಲರೂ ಆಚರಿಸುವ ಹೊಸ ವರುಷದ ಹಬ್ಬ, ವಿಷು (ಬಿಸು = ತುಳು), ಅಥವಾ ಸೌರಮಾನ ಯುಗಾದಿ. ವಿಷು ಹಬ್ಬದಂದು ಅಮ್ಮ ಬೆಳಗ್ಗೆ ಎದ್ದು ಮನೆಯೆಲ್ಲ ಶುಚಿ ಮಾಡಿ, ಮನೆಯಲ್ಲಿ ಬೆಳೆದ ತೆಂಗಿನಕಾಯಿ, ಹಣ್ಣು, ತರಕಾರಿ, ಹೂವುಗಳೊಂದಿಗೆ ಅಕ್ಕಿ ಮತ್ತು ಕನ್ನಡಿ - ಇವೆಲ್ಲವನ್ನೂ ದೀಪದೊಂದಿಗೆ ದೇವರ ಕೋಣೆಯಲ್ಲಿ ಸಿದ್ದಪಡಿಸುತ್ತಾರೆ. ಇದನ್ನೇ ‘ವಿಷುಕಣಿ’ ಎನ್ನುವುದು. ಬೆಳಿಗ್ಗೆದ್ದು ವಿಶುಕಣಿ ನೋಡಿ ನಂತರ ಮನೆಯ ಹಿರಿಯರಿಗೆಲ್ಲ ನಮಸ್ಕಾರ ಮಾಡಿ ಅವರ ಆಶೀರ್ವಾದ ಹಾಗೂ ಬಳುವಳಿ ಪಡೆಯುವ ದಿನ. ಅಂತೆಯ ಬೇರೆ ಊರಿನಲ್ಲಿರುವ ಹೆಣ್ಣು ಮಕ್ಕಳು, ತಂದೆ-ತಾಯಿ ಅಥವಾ ಅಣ್ಣನ ಮನೆಗೆ ಬಂದು ಆಶೀರ್ವಾದ ಪಡೆಯುತ್ತಾರೆ. ನಂತರ ಎಲ್ಲರೂ ಮನೆಯಲ್ಲಿ ಸೇರಿ ಮದ್ಯಾಹ್ನದ ಸಿಹಿ ಊಟ..ಅದರಂತೆಯೇ ಹಲವು ವರ್ಷಗಳಿಂದ ನಮ್ಮೊಂದಿಗೆ ಕುಟುಂಬದ ಸದಸ್ಯರಂತೆ ಬೆಳೆದ ಆತ್ಮೀಯ ಕೆಲಸದವರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ತಂದು ಆಚರಣೆಯಲ್ಲಿ ಪಾಲ್ಗೊಳುತ್ತಾರೆ.
ಹಲವು ವಿಷು ಹಬ್ಬ ಕಳೆದು ಹೋದರು ಕೂಡಾ ಅದರ ಸಿಹಿ ನೆನಪುಗಳು ಮಾಸಿಲ್ಲ....ಜೊತೆಗೆ ನಮ್ಮೊಂದಿಗಿದ್ದ ಆತ್ಮೀಯ ಹಿರಿಯರ ಅಗಲಿಕೆಯ ಕಹಿ ನೆನಪುಗಳು ....







